ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿ: 6,316 ಮರಗಳಿಗೆ ಕುತ್ತು?

ಸಿಂಗನಾಯಕನಹಳ್ಳಿ ಕೆರೆ ತುಂಬಿಸುವ ಕಾಮಗಾರಿ l ಮರಗಳ ತೆರವು– ಜನಾಭಿಪ್ರಾಯ ಆಹ್ವಾನಿಸಿದ ಅರಣ್ಯ ಇಲಾಖೆ
Last Updated 16 ಜೂನ್ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ– ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಯಲಹಂಕ ಹೋಬಳಿಯ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.

ಈ ಕಾಮಗಾರಿಗಾಗಿ 6 ಸಾವಿರಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಲು ತಯಾರಿ ನಡೆಸಿದೆ.

ಕೆರೆಯಂಗಳದಲ್ಲಿ ನೈಸರ್ಗಿಕವಾಗಿ ಅಭಿವೃದ್ಧಿಗೊಂಡ ಪರಿಸರ ವ್ಯವಸ್ಥೆಗೆ ಈ ಕಾಮಗಾರಿಯಿಂದ ಧಕ್ಕೆಯಾಗಲಿದೆ ಎಂದು ಪರಿಸರ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳ–ನಾಗವಾರ ಕಣಿವೆಯ 65 ಕೆರೆಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ತುಂಬಿಸುವ ಯೋಜನೆಗೆ ಸಿಂಗನಾಯಕನಹಳ್ಳಿ ಕೆರೆಯನ್ನು ಆಯ್ಕೆ ಮಾಡಲಾಗಿದೆ. ಈ ಕೆರೆಯು ಸಿಂಗನಾಯಕನಹಳ್ಳಿ ಅಮಾನಿ ಕೆರೆ ಗ್ರಾಮದ ಸರ್ವೆ ನಂಬರ್‌ 33, ನಾಗದಾಸನಹಳ್ಳಿ ಗ್ರಾಮದ ಸರ್ವೆ ನಂಬರ್‌ 39, ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 12, ಅದ್ದಿಗಾನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 7ರ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 400 ಎಕರೆಗಳಷ್ಟು ವ್ಯಾಪಿಸಿರುವ ಕೆರೆಯಂಗಳದಲ್ಲಿ ಜಾಲಿ, ನೇರಳೆ, ಬೇವು, ನೀಲಗಿರಿ, ಸಿಹಿ ಹುಣಸೆ, ಅಕೇಶಿಯಾ, ಹೊಂಗೆ ಶಿವಾನಿ ಮೊದಲಾದ ಮರಗಳಿವೆ. ಇವುಗಳ ತೆರವಿಗೆ ಅನುಮತಿ ಕೋರಿ ಸಣ್ಣ ನೀರಾವರಿ ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ. ಇಲ್ಲಿ ವಿವಿಧ ಜಾತಿಗಳ 6,316 ಜಾತಿಯ ಮರಗಳಿದ್ದು, ಅವುಗಳಿಂದ 403.211 ಘನ ಮೀ. ನಾಟಾ ಹಾಗೂ 3,46,915 ಕೆ.ಜಿ ಸೌದೆ ಲಭಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಮರಗಳ ತೆರವು ಸಂಬಂಧ ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯು ಸಾರ್ವಜನಿಕರಿಂದ ಸಲಹೆ ಸೂಚನೆ ಹಾಗೂ ಆಕ್ಷೇಪಣೆಗಳನ್ನು ಇದೇ 14ರಂದು ಆಹ್ವಾನಿಸಿದ್ದು, 10 ದಿನಗಳ ಕಾಲಾವಕಾಶ ನೀಡಿದೆ.

‘ಮರಗಳ ತೆರವಿನ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಆಧರಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಹೂಳು ತೆಗೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಮರಗಳನ್ನು ತೆರವುಗೊಳಿಸಲೇಬೇಕು. ಅವುಗಳನ್ನು ಸ್ಥಳಾಂತರ ಮಾಡಿ ಬೇರೆ ಕಡೆ ನಾಟಿ ಮಾಡುವ ಸಾಧ್ಯತೆ ಬಗ್ಗೆ ಇನ್ನಷ್ಟೇ ಪರಿಶೀಲಿಸಬೇಕಿದೆ’ ಎಂದು ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಕೆರೆಯ ಅಂಗಳದಲ್ಲೇ ಸಸಿಗಳನ್ನು ಬೆಳೆಸಿದ್ದರು. ಹಾಗಾಗಿ, ಕೆರೆ ಅಭಿವೃದ್ಧಿ ಕಾಮಗಾರಿಗೆ ತೆರವುಗೊಳಿಸಬೇಕಾಗುವ ಮರಗಳ ಸಂಖ್ಯೆ ಹೆಚ್ಚು ಎಂಬಂತೆ ತೋರುತ್ತದೆ. ಕೆರೆಯಲ್ಲಿ ನೀರಿನ ಆಶ್ರಯ ಇರುವುದರಿಂದ ಮರಗಳು ಹುಲುಸಾಗಿ ಬೆಳೆದಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಮರ ತೆರವು– ಪ್ರತಿಕ್ರಿಯೆ ನೀಡಲು ವಿಳಾಸ: ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ,ಅರಣ್ಯ ಭವನ ಸಂಕೀರ್ಣ, ಮಲ್ಲೇಶ್ವರ 18ನೇ ಅಡ್ಡರಸ್ತೆ. ಬೆಂಗಳೂರು.

ಸಂಪರ್ಕ: 080 23343464

ಇ–ಮೇಲ್‌:

dcfurban82@yahoo.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT