ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಗಾಜು ಒಡೆದು ₹4.50 ಲಕ್ಷ ಹಣ ಕಳವು

Last Updated 24 ಜುಲೈ 2022, 5:41 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಸಮೀಪದ ಕಾನೂನು ಮಾಪನ ಇಲಾಖೆ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದಿರುವ ದುಷ್ಕರ್ಮಿಗಳು, ₹4.50 ಲಕ್ಷ ಕದ್ದುಕೊಂಡು ಪರಾರಿಯಾಗಿದ್ದಾರೆ.

‘ಹಣ ಕಳೆದುಕೊಂಡಿರುವ ಲಕ್ಷ್ಮೀಶ್ ಎಂಬುವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಓಜಿಕುಪ್ಪಂ ತಂಡದವರು ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ವಿಧಾನಸೌಧ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಹೊಸ ಮನೆ ನಿರ್ಮಾಣಕ್ಕೆ ಪಡೆದಿದ್ದ ಸಾಲದ ಕಂತು ಕಟ್ಟಲೆಂದು ಲಕ್ಷ್ಮೀಶ್ ಅವರು ಮಹದೇವಪುರದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ₹ 4.50 ಲಕ್ಷ ಡ್ರಾ ಮಾಡಿಕೊಂಡಿದ್ದರು. ಅದನ್ನು ಬ್ಯಾಂಕ್‌ಗೆ ಪಾವತಿಸಲು ನಗರಕ್ಕೆ ಬಂದಿದ್ದರು. ಕಾನೂನು ಮಾಪನ ಇಲಾಖೆ ಕಟ್ಟಡದ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ, ಕೆಲಸ ನಿಮಿತ್ತ ಕಚೇರಿಗೆ ಹೋಗಿದ್ದರು.’

‘ಲಕ್ಷ್ಮೀಶ್ ಬಳಿ ಹಣವಿರುವುದನ್ನು ತಿಳಿದಿದ್ದ ದುಷ್ಕರ್ಮಿಗಳು, ಮಹದೇವಪುರದಿಂದ ಪಲ್ಸರ್ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಲಕ್ಷ್ಮೀಶ್ ಅವರ ಕಾರಿನ ಗಾಜು ಒಡೆದು, ಒಳಗಿದ್ದ ಹಣದ ಬ್ಯಾಗ್ ಕದ್ದುಕೊಂಡು ಪರಾರಿಯಾಗಿದ್ದಾರೆ. ಲಕ್ಷ್ಮೀಶ್ ವಾಪಸು ಕಾರಿನ ಬಳಿ ಬಂದಾಗ ವಿಷಯ ಗೊತ್ತಾಗಿದೆ’ ಎಂದೂ ತಿಳಿಸಿವೆ.

ಪೊಲೀಸ್ ಸೋಗಿನಲ್ಲಿ ಸುಲಿಗೆ
ಬೆಂಗಳೂರು:
ಪೊಲೀಸರ ಸೋಗಿನಲ್ಲಿ ಡೆಲಿವರಿ ಬಾಯ್ ಸುರೇಶ್‌ ಎಂಬುವವರ ಬೈಕ್ ಅಡ್ಡಗಟ್ಟಿದ್ದದುಷ್ಕರ್ಮಿಗಳು, ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ನಡೆದಿರುವ ಘಟನೆ ಸಂಬಂಧ ಸುರೇಶ್ ಅವರು ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.

‘ಸುರೇಶ್ ಸ್ವಿಗ್ಗಿ ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ವಾಜಿದ್ ಬಡಾವಣೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದಾಗ, ಪೊಲೀಸರೆಂದು ಹೇಳಿಕೊಂಡು ಬೈಕ್ ಅಡ್ಡಗಟ್ಟಿದ್ದ ಆರೋಪಿಗಳು, ಹಲ್ಲೆ ಮಾಡಿ ಮೊಬೈಲ್ ಸುಲಿಗೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT