ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜಿಮ್‌ಗಳು ಬಂದ್: ನಮಗೆ ಒಂಚೂರು ವಿಷ ಕೊಟ್ಟುಬಿಡಿ -‌ಮಾಲೀಕರು ಕಂಗಾಲು

Last Updated 3 ಏಪ್ರಿಲ್ 2021, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ನಿಂದಾಗಿ ಬದುಕು ಬೀದಿಗೆ ಬಿದ್ದಿತ್ತು. ಆ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಸರ್ಕಾರ ಮತ್ತೆ ಜಿಮ್‌ಗಳ ಬಾಗಿಲು ಮುಚ್ಚಿಸಿದೆ. ಆ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಆಳುವವರು ಹಾಗೂ ಅಧಿಕಾರಿಗಳ ದಿಢೀರ್‌ ನಿರ್ಧಾರದಿಂದ ದಿಕ್ಕೇ ತೋಚದಂತಾಗಿದೆ. ಸರ್ಕಾರವು ನಮ್ಮನ್ನು ಮಾನಸಿಕವಾಗಿ ಹಿಂಸಿಸುವ ಬದಲು ಒಂಚೂರು ವಿಷ ಕೊಟ್ಟುಬಿಡಲಿ’...

ಹೀಗೆಂದು ಅಳಲು ತೋಡಿಕೊಂಡಿದ್ದಾರೆ ಉದ್ಯಾನನಗರಿಯ ಜಿಮ್‌ಗಳ ಮಾಲೀಕರು.

ಕೋವಿಡ್‌ ಎರಡನೇ ಅಲೆ ವ್ಯಾಪಿಸುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಮಾಡಿದೆ. ಎಲ್ಲಾ ಜಿಮ್‌ಗಳನ್ನು ಮುಚ್ಚುವಂತೆ ಆದೇಶಿಸಿದೆ. ಸರ್ಕಾರದ ಈ ನಿರ್ಧಾರದಿಂದ ಜಿಮ್‌ ಮಾಲೀಕರು ಕಂಗಾಲಾಗಿದ್ದಾರೆ.

‘ಬ್ಯಾಂಕ್‌ನಿಂದ ₹20 ಲಕ್ಷ ಸಾಲ ಪಡೆದು ಜಿಮ್‌ ಆರಂಭಿಸಿದ್ದೇನೆ. ನಮ್ಮದು ಎಂಟು ಸದಸ್ಯರಿರುವ ಕುಟುಂಬ. ಜಿಮ್‌ನಿಂದ ಬರುವ ಆದಾಯವೇ ನಮ್ಮ ಬದುಕಿಗೆ ಆಧಾರ. ಲಾಕ್‌ಡೌನ್‌ ಸಂದರ್ಭದಲ್ಲಿ ನಾಲ್ಕು ತಿಂಗಳು ಜಿಮ್‌ಗೆ ಬೀಗ ಬಿದ್ದಿತ್ತು. ಆ ಸಮಯದಲ್ಲಿ ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರ ನಿರ್ಬಂಧ ಸಡಿಲಿಸಿದರು ಕೂಡ ಜನ ಜಿಮ್‌ಗಳಿಗೆ ಬರಲು ಹೆದರುತ್ತಿದ್ದರು. ಕ್ರಮೇಣ ಆ ಮನಸ್ಥಿತಿ ಬದಲಾಗಿತ್ತು. ಜನವರಿಯಲ್ಲಿ ಸಾಕಷ್ಟು ಮಂದಿ ಜಿಮ್‌ ಸೇರಿದ್ದರು. ಇದರಿಂದ ಬಂದ ಹಣದಿಂದ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳ ಬಾಡಿಗೆ ಕಟ್ಟಿದ್ದೆ. ಬದುಕು ಹಳಿಗೆ ಮರಳುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಸರ್ಕಾರ ಮತ್ತೆ ಜಿಮ್‌ಗಳಿಗೆ ಬೀಗ ಹಾಕುವಂತೆ ಆದೇಶಿಸಿದೆ. ಇದರಿಂದ ನಾವು ಮತ್ತಷ್ಟು ತೊಂದರೆಗೆ ಸಿಲುಕುವಂತಾಗಿದೆ’ ಎಂದು ಶ್ರೀನಿವಾಸನಗರದಲ್ಲಿರುವ ಫಿಟ್‌ ಆ್ಯಂಡ್‌ ಫಿಸಿಕ್‌ ಜಿಮ್‌ ಮಾಲೀಕ ನಾಗಭೂಷಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಮಾಸಿಕ ₹50 ಸಾವಿರ ಬಾಡಿಗೆ ಕಟ್ಟುತ್ತಿದ್ದೇನೆ. ತಿಂಗಳ ಮೊದಲ ದಿನದಿಂದಲೇ ಕಟ್ಟಡದ ಮಾಲೀಕರಿಂದ ಮೊಬೈಲ್‌ಗೆ ಕರೆ ಬರುತ್ತದೆ. ಬಾಡಿಗೆ ಕಟ್ಟುವಂತೆ ದಿನವೂ ಪೀಡಿಸುತ್ತಾರೆ. ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಜನವರಿ ಮತ್ತು ಫೆಬ್ರುವರಿ ತಿಂಗಳ ಬಾಡಿಗೆ ಕಟ್ಟಿದ್ದೇನೆ. ಮಾರ್ಚ್‌ ತಿಂಗಳ ಬಾಡಿಗೆ ಕೊಡುವಂತೆ ಬೆನ್ನು ಬಿದ್ದಿದ್ದಾರೆ. ಈಗ ಅವರಿಗೆ ಎಲ್ಲಿಂದ ದುಡ್ಡು ಕೊಡಲಿ. ಬ್ಯಾಂಕ್‌ ಸಾಲ ಹೇಗೆ ತೀರಿಸಲಿ’ ಎಂದು ಪ್ರಶ್ನಿಸಿದರು.

‘ಈಗ ಜನ ಜಿಮ್‌ಗಳತ್ತ ಮುಖ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಜಿಮ್‌ ಮುಚ್ಚಿಸಿರುವುದರಿಂದ ನಮಗೆ ತುಂಬಾ ನಷ್ಟವಾಗುತ್ತದೆ. ಪಬ್‌, ಬಾರ್‌, ಕ್ಲಬ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ಶೇ 50ರಷ್ಟು ಜನರ ಮಿತಿ ಹೇರಲಾಗಿದೆ. ಈ ವಿಚಾರದಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ’ ಎಂದು ಮುನೇಶ್ವರ ಬ್ಲಾಕ್‌ನ ಎನ್‌.ಡಿ.ರವಿಕುಮಾರ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT