ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕರ್ನಾಟಕ ನಮ್ಮ ಮಾದರಿ ಚಿಂತನಾ ಸಮಾವೇಶ: ದ್ವೇಷಕ್ಕಾಗಿ ಪರರು ಬಳಕೆಯೇ ಸಮಸ್ಯೆ

ಪರಂಪರೆಯ ಕಸುವು ಗೋಷ್ಠಿಯಲ್ಲಿ ರಹಮತ್‌ ತರಿಕೆರೆ
Published 20 ಆಗಸ್ಟ್ 2023, 21:06 IST
Last Updated 20 ಆಗಸ್ಟ್ 2023, 21:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಮತ್ತು ಪರರು ಎಂಬ ಶಬ್ದಗಳು ಹೋಲಿಕೆ ಮಾಡಲು ಹಾಗೂ ಶ್ರೇಷ್ಠತೆ ತೋರಿಸಲು ಬಳಕೆಯಾಗುತ್ತಲೇ ಬಂದಿವೆ. ಆದರೆ, ಯಾರನ್ನೋ ದ್ವೇಷಿಸಲು ಈ ಶಬ್ದಗಳನ್ನು ಬಳಸುತ್ತಿರುವುದೇ ಸಮಸ್ಯೆ ಸೃಷ್ಟಿಸಿದೆ’ ಎಂದು ಸಾಹಿತಿ ರಹಮತ್‌ ತರಿಕೆರೆ ಹೇಳಿದರು.

ಜಾಗೃತ ಕರ್ನಾಟಕ ಭಾನುವಾರ ಆಯೋಜಿಸಿದ ‘ನಮ್ಮ ಕರ್ನಾಟಕ ನಮ್ಮ ಮಾದರಿ’ ಚಿಂತನಾ ಸಮಾವೇಶದ ‘ಪರಂಪರೆಯ ಕಸುವು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಮ್ಮ ರಾಜ್ಯ, ಪರರಾಜ್ಯ, ನಮ್ಮವರು, ಅನ್ಯರು ಎಂದೆಲ್ಲ ಇರುವಾಗಲೇ ತನ್ನಂತೆ ಪರರನ್ನು ಬಗೆಯಬೇಕು ಎಂಬ ಮಾತುಗಳು ಬಂದಿವೆ. ಎಲ್ಲರನ್ನು ಒಂದೇ ರೀತಿ ಕಾಣಲು ಬಸವಣ್ಣ, ಕುವೆಂಪು ಸಹಿತ ಅನೇಕರು ಹೇಳಿರುವುದು ಆಯಾ ಕಾಲದಲ್ಲಿ ಆ ರೀತಿ ಇತ್ತು ಎಂದು ಅಲ್ಲ. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ನಾವು ಇರಬೇಕಾದ ರೀತಿಯನ್ನು ತೋರಿದ ದಾರಿಯದು’ ಎಂದರು.

ಪ್ರಾದೇಶಿಕ ಅಸಮಾನತೆಯ ಸಮಸ್ಯೆ ಬಗ್ಗೆ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಶಿವಾನಂದ್‌ ಮಾತನಾಡಿ, ‘ಕರ್ನಾಟಕ ಪ್ರಾಂತ್ಯ ಬೇಕು ಎಂದು 1920ರಲ್ಲಿಯೇ ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಜನರು ಬೇಡಿಕೆ ಇಟ್ಟಿದ್ದರು. ಅದರಲ್ಲಿ ಮೈಸೂರು ಪ್ರಾಂತ್ಯದ ಸೇರ್ಪಡೆಯ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಸ್ವಾತಂತ್ರ್ಯ ದೊರೆತ ಬಳಿಕ ಭಾಷಾವಾರು ರಾಜ್ಯ ರಚನೆಯ ವೇಳೆಯಲ್ಲಿ ಮೈಸೂರು ರಾಜ್ಯದ ಗುಣಮಟ್ಟಕ್ಕೆ ಉಳಿದವು ಇಲ್ಲ ಎಂಬ ಕಾಲೊನಿಯಲ್‌ ಮನಸ್ಥಿತಿ ಮೈಸೂರು ಭಾಗದವರಲ್ಲಿ ಇತ್ತು. ನಿಜ ನೋಡಿದರೆ ಮೈಸೂರು ಪ್ರಾಂತ್ಯಕ್ಕಿಂತ ಬಾಂಬೇ ಕರ್ನಾಟಕವು ಶಿಕ್ಷಣದಲ್ಲಿ ಮುಂದಿತ್ತು. ಕೃಷಿಯಲ್ಲಿ ಹೈದರಾಬಾದ್‌ ಕರ್ನಾಟಕ ಮುಂದಿತ್ತು’ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ಸವಾಲು ಮತ್ತು ಸಾಧ್ಯತೆ ಬಗ್ಗೆ ಸಹ ಪ್ರಾಧ್ಯಾಪಕ ಪ್ರದೀಪ್ ರಮಾವತ್‌ ಜೆ. ಮಾತನಾಡಿ, ‘ನಾನು ಅಸ್ಸಾಂನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ಬುಡಕಟ್ಟುಗಳ ಸ್ಥಿತಿ ನೋಡಿದರೆ ಕರ್ನಾಟಕವು ಸಾವಿರ ಪಟ್ಟು ಮುಂದಿದೆ. ಆದರೂ ಇಲ್ಲಿ ಕ್ರಾಂತಿ ಮಾಡಬಲ್ಲ ನೀತಿಗಳನ್ನು ಸರ್ಕಾರ ರೂಪಿಸಿದಾಗಲೆಲ್ಲ, ಪ್ರತಿಕ್ರಾಂತಿ ನಡೆಯುತ್ತಿದೆ. ಮೀಸಲಾತಿಯ ಪ್ರಶ್ನೆಗಳು ಎದ್ದಾಗ ಕೋಮುಗಲಭೆಗಳು ಹೆಚ್ಚಾಗುತ್ತವೆ’ ಎಂದು ವಿಷಾದಿಸಿದರು.

ಕಲ್ಯಾಣದ ಕಾರ್ಯಕ್ರಮಗಳ ಆರ್ಥಿಕತೆ ಬಗ್ಗೆ ರಾಜಕೀಯ ವಿಶ್ಲೇಷಕ ಬಿ.ಸಿ. ಬಸವರಾಜ್‌ ಮಾತನಾಡಿ, ‘ಜನರ ಕೊಳ್ಳುವ ಶಕ್ತಿ ಕಡಿಮೆಯಾದಾಗ ಅದನ್ನು ಹೆಚ್ಚಿಸಲು ಸರ್ಕಾರ ರೂಪಿಸುವ ಗ್ಯಾರಂಟಿಯಂಥ ಯೋಜನೆಗಳು ಅಗತ್ಯ. ತೆರಿಗೆ ವಿನಾಯಿತಿ ಸಹಿತ ಅನೇಕ ಭಾಗ್ಯಗಳನ್ನು ಪಡೆಯುತ್ತಿರುವ ಶ್ರೀಮಂತರು, ಶ್ರೀಮಂತ ಉದ್ಯಮಿಗಳೇ ಪಡೆಯುತ್ತಿರುವುದು ಬಿಟ್ಟಿಭಾಗ್ಯ’ ಎಂದು ಅಂಕಿ ಅಂಶಗಳನ್ನು ನೀಡಿದರು.

ಸಹಾಯಕ ಪ್ರಾಧ್ಯಾಪಕ ಬಸವರಾಜ್ ಎಂ. ಬಿರಾದಾರ್‌ ಸಮನ್ವಯ ಮಾಡಿದರು.

ರಹಮತ್‌ ತರಿಕೆರೆ
ರಹಮತ್‌ ತರಿಕೆರೆ

‘ಕರ್ನಾಟಕ ಮಾದರಿಯನ್ನು ಜನ ಸ್ವೀಕರಿಸುವಂತಾಗಬೇಕು’ ’ಕೇರಳ ಮಾದರಿಯನ್ನು ತಮ್ಮವು ಎಂದು ಕೇರಳದ ಜನ ಒಪ್ಪಿಕೊಂಡಂತೆ ತಮಿಳುನಾಡು ಮಾದರಿಯನ್ನು ತಮಿಳು ಜನ ಒಪ್ಪಿಕೊಂಡಂತೆ ಕರ್ನಾಟಕದ ಮಾದರಿಯನ್ನು ಇಲ್ಲಿನ ಜನರು ಒಪ್ಪಿಕೊಂಡಿಲ್ಲ. ಆ ಕಾರಣದಿಂದಲೇ ಕರ್ನಾಟಕದ ಮಾದರಿ ಬಗ್ಗೆ ಇಲ್ಲಿನ ಸರ್ಕಾರಗಳು ಕೂಡ ಗಂಭೀರವಾಗಿಲ್ಲ’ ಎಂದು ಅಂಕಣಕಾರ ಎ. ನಾರಾಯಣ ವಿಷಾದ ವ್ಯಕ್ತಪಡಿಸಿದರು. ಚಿಂತನಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದ ಅವರು ‘ರಾಜಕೀಯ ಅಧಿಕಾರವನ್ನು ಮೇಲಿನಿಂದ ಕೆಳಗೆ ಪ್ರವಹಿಸುವಂತೆ ಮಾಡಿದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಸರ್ಕಾರಿ ಉದ್ಯೋಗವನ್ನು ಕೂಡ ಮೇಲಿನಿಂದ ಕೆಳಗೆ ಹರಿಯುವಂತೆ ಮಾಡಿದ ಭೂಸುಧಾರಣೆಯ ಮೂಲಕ ಭೂಮಿ ಇಲ್ಲದವರಿಗೆ ಭೂಮಿ ಸಿಗುವಂತೆ ಮಾಡಿದ ಅರಸು ಆಡಳಿತ. ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವ ಸಿದ್ದರಾಮಯ್ಯರ ಆಡಳಿತ ಕರ್ನಾಟಕದ ಮಾದರಿಗಳು. ಅಭಿವೃದ್ಧಿ ಮತ್ತು ಅದರ ಮರುಹಂಚಿಕೆಯ ಮಾದರಿಯದು’ ಎಂದು ವಿಶ್ಲೇಷಿಸಿದರು. ಲಂಡನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್‌ ಮ್ಯಾನರ್‌ ವರ್ಚುವಲ್‌ ಭಾಷಣ ಮಾಡಿ ‘ದೇವರಾಜ ಅರಸು ಅವರು ರಾಜಕೀಯ ಅಧಿಕಾರವನ್ನು ಭೂಮಾಲೀಕರಿಂದ ಹಿಂದುಳಿದ ಜನರಿಗೆ ಪಲ್ಲಟಗೊಳಿಸುವ ಮೂಲಕ ರಾಜಕೀಯದ ಗತಿ ಬದಲಾಯಿಸಿದರು. ಹಿಂದುಳಿದ ವರ್ಗ ಮತ್ತು ಇತರರ ಬೆಂಬಲವಿಲ್ಲದೇ ಯಾರೂ ರಾಜಕೀಯ ಮಾಡಲು ಸಾಧ್ಯವಿಲ್ಲದಂತೆ ಮಾಡಿದರು’ ಎಂದು ನೆನಪು ಮಾಡಿಕೊಂಡರು. ವಿಶ್ರಾಂತ ಕುಲಪತಿ ಸಬಿಹಾಭೂಮಿ ಗೌಡ ಮಾತನಾಡಿ ‘ಸ್ವಾಮಿನಾಥನ್‌ ಆಯೋಗದ ವರದಿಯಂತೆ ಭೂಮಿ ಪಟ್ಟವನ್ನು ದಂಪತಿಯ ಹೆಸರಲ್ಲಿ ಮಾಡಲು ಕ್ರಮ ಕೈಗೊಳ್ಳಬೇಕು. ಎಸ್‌ಸಿಸಿಪಿ ಟಿಎಸ್‌ಸಿಪಿ ಮಾದರಿಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಮೀಸಲಿಡಬೇಕು ಮತ್ತು ಅವರಿಗೇ ಆ ಅನುದಾನವನ್ನು ಬಳಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ನೀತಿ ನಿರೂಪಣಾ ಸ್ಥಾನಗಳಲ್ಲಿ ಶೇ 33ರಷ್ಟು ಮಹಿಳೆಯರಿಗೆ ನೀಡಬೇಕು‘ ಎಂದು ಆಗ್ರಹಿಸಿದರು. ಆಂಜನೇಯ ರೆಡ್ಡಿ ಗೋಷ್ಠಿಯ ಸಮನ್ವಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT