ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ನಿವೇಶನ ಹಲವರಿಗೆ ಮಾರಾಟ

ಹಣ ಪಡೆದು ವಂಚಿಸಿದ್ದ ಆರೋಪಿ ಬಂಧನ
Last Updated 24 ನವೆಂಬರ್ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ತಂದೆ ಹೆಸರಿನಲ್ಲಿದ್ದ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಲೋಕೇಶ್ (41) ಎಂಬುವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿಜಯನಗರದ ನಿವಾಸಿ ಆರ್‌. ರಘು ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದರು. ಇದರನ್ವಯ ಪ್ರಕರಣ ದಾಖಲಿಸಿಕೊಂಡು ಲೋಕೇಶ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನ ಪತ್ನಿ ಪ್ರತಿಭಾ ಹಾಗೂ ಪರಿಚಯಸ್ಥ ಶಿವಾರೆಡ್ಡಿ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದ್ದು, ಇವರ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಲೋಕೇಶ್ ಅವರ ತಂದೆಯ ಹೆಸರಿನಲ್ಲಿ, ಬೆಂಗಳೂರು ಉತ್ತರ ತಾಲ್ಲೂಕಿನ ಕಸಬಾ ಹೋಬಳಿ ನಾಗವಾರ ಗ್ರಾಮದ ಬಿಬಿಎಂಪಿ ಖಾತೆ ಸಂಖ್ಯೆ 190/ಎ/129ರಲ್ಲಿ 5,000 ಚದರ ಅಡಿ ನಿವೇಶನವಿದೆ. 2010ರಲ್ಲಿ ತಂದೆಯಿಂದ ದಾನಪತ್ರ ಮಾಡಿಸಿಕೊಂಡಿದ್ದ ಲೋಕೇಶ್, 2,000 ಚದರ ಅಡಿ ನಿವೇಶನವನ್ನು ದಾನಪತ್ರದ ಮೂಲಕ ಪತ್ನಿಗೆ ನೀಡಿದ್ದ. ಈ ವಿಷಯ ಮುಚ್ಚಿಟ್ಟು 5,000 ಚದರ ಅಡಿ ನಿವೇಶನವನ್ನು ಶಿವಾರೆಡ್ಡಿ ಎಂಬುವರಿಗೆ ಮಾರಿದ್ದ.’

‘ಸ್ನೇಹಿತರೇ ಆಗಿದ್ದ ದೂರುದಾರ ರಘು ಅವರನ್ನು ಸಂಪರ್ಕಿಸಿದ್ದ ಲೋಕೇಶ್, ತಮ್ಮ ನಿವೇಶನ ಮಾರುವುದಾಗಿ ಹೇಳಿದ್ದ. ಅದನ್ನು ನಂಬಿದ್ದ ರಘು ನಿವೇಶನ ಖರೀದಿಸಲು ಒಪ್ಪಿದ್ದರು. ರಘು ಹೆಸರಿನಲ್ಲಿ ₹ 3.50 ಕೋಟಿ ಎಲ್‌ಐಸಿ ಸಾಲ ಪಡೆದಿದ್ದ ಲೋಕೇಶ್, ಅದನ್ನು ತಾನೇ ಇಟ್ಟುಕೊಂಡಿದ್ದ. ಆದರೆ, ನಿವೇಶನ ವರ್ಗಾವಣೆ ಮಾಡಿರಲಿಲ್ಲ. ಹೊರದೇಶದಲ್ಲಿದ್ದ ರಘು, ಹಲವು ಬಾರಿ ವಿಚಾರಿಸಿದರೂ ಆರೋಪಿ ಸ್ಪಂದಿಸಿರಲಿಲ್ಲ. ಇತ್ತೀಚೆಗೆ ರಘು ಅವರ ಪತ್ನಿ, ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಿ ಮಾಹಿತಿ ಸಂಗ್ರಹಿಸಿದಾಗ ವಂಚನೆ ಗಮನಕ್ಕೆ ಬಂದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇತ್ತೀಚೆಗೆ ತಂದೆಯಿಂದ ಹೊಸದಾಗಿ ದಾನಪತ್ರ ಮಾಡಿಸಿಕೊಂಡಿದ್ದ ಲೋಕೇಶ್‌, ಮತ್ತೊಬ್ಬರಿಗೆ ನಿವೇಶನ ಮಾರಲು ಸಿದ್ಧತೆ ಮಾಡಿಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT