ಮಂಗಳವಾರ, ಜೂನ್ 22, 2021
28 °C
ಸರ್ಕಾರಕ್ಕೆ ‘ಜನಾಗ್ರಹ ಆಂದೋಲನ’ದ ಒತ್ತಾಯ

ಲಾಕ್‌ಡೌನ್‌: ಜನರ ಅಗತ್ಯಗಳನ್ನು ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಾಕ್‌ಡೌನ್ ಜಾರಿ ಮಾಡಿರುವ ಸರ್ಕಾರವು ಜನರ ತುರ್ತು ಅಗತ್ಯಗಳಾದ ಹಾಸಿಗೆ, ಆಮ್ಲಜನಕ, ಲಸಿಕೆ, ಸಮಗ್ರ ಪಡಿತರ ಹಾಗೂ ಆರ್ಥಿಕ ನೆರವು ನೀಡುವ ಪಂಚಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು’ ಎಂದು ಜನಾಗ್ರಹ ಆಂದೋಲನ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಜನಾಗ್ರಹ ಆಂದೋಲನ ಬೆಂಬಲಿಸಿರುವ 400 ಸಾಮಾಜಿಕ ಕಾರ್ಯಕರ್ತರು ತಮ್ಮ ಸಹಿಯ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೇಡಿಕೆಗಳ ಪತ್ರ ತಲುಪಿಸಿದ್ದಾರೆ.

‘ರಾಜ್ಯದ ಎಲ್ಲ ಗ್ರಾಮಗಳಲ್ಲಿ ಕೊರೊನಾ ಆರೈಕೆ ಕೇಂದ್ರಗಳನ್ನು ಹಾಗೂ ಆಮ್ಲಜನಕ ಸಹಿತ ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಪ್ರತಿದಿನ ಬೇಡಿಕೆಗೆ ತಕ್ಕಂತೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲ ವಯೋಮಾನದವರಿಗೂ ಉಚಿತವಾಗಿ ಲಸಿಕೆ ನೀಡಬೇಕು. ಪ್ರತಿ ಕುಟುಂಬಕ್ಕೆ ಸಮಗ್ರ ಪಡಿತರ ಕಿಟ್‌ಗಳನ್ನು ಉಚಿತವಾಗಿ ವಿತರಿಸಬೇಕು’.

‘ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡಿರುವ ಅಂಘಟಿತ ಕಾರ್ಮಿಕರು, ಆಟೊ–ಟ್ಯಾಕ್ಸಿ ಚಾಲಕರು, ನೇಕಾರರು, ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಉದ್ಯೋಗಿಗಳಿಗೆ ಮಾಸಿಕ ಕನಿಷ್ಠ ₹5 ಸಾವಿರ ಆರ್ಥಿಕ ನೆರವು ನೀಡಬೇಕು. ಇವು ನೊಂದವರ ಖಾತೆಗಳಿಗೆ ನೇರವಾಗಿ ಜಮಾ ಆಗಬೇಕು. ಕೊರೊನಾದಿಂದ ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ ₹5ಲಕ್ಷ ಪರಿಹಾರ ಧನ ವಿತರಿಸಬೇಕು’ ಎಂದು ಆಗ್ರಹಿಸಿದೆ.

‘ಈ ಎಲ್ಲ ಕ್ರಮಗಳಿಗೆ ಹಣ ಹೊಂದಿಸಲು, ರಾಜ್ಯದ ಕಾರ್ಪೊರೇಟ್ ವಹಿವಾಟಿನ ಮೇಲೆ ಶೇ 2ರಷ್ಟು ‘ಕೊರೊನಾ ಸೆಸ್’ ವಿಧಿಸಬಹುದು. ರಾಜ್ಯದಲ್ಲಿರುವ ಕೋಟ್ಯಾಧಿಪತಿಗಳು, ಉದ್ದಿಮೆದಾರರು ಹಾಗೂ ರಾಜಕಾರಣಿಗಳ ವಾರ್ಷಿಕ ಆದಾಯ ಶೇ 5ರಷ್ಟನ್ನು ಸುಂಕವಾಗಿ ಸಂಗ್ರಹಿಸಿ ಅದನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳಿ’ ಎಂದು ಸಲಹೆ ನೀಡಿದೆ.

ಮೇ.6ರಂದು ಆರಂಭಗೊಂಡ ‘ಜನಾಗ್ರಹ ಆಂದೋಲನಕ್ಕೆ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್‌, ಬಿ.ಟಿ. ಲಲಿತಾನಾಯ್ಕ್‌, ಕೆ.ಎಲ್. ಅಶೋಕ್ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು