ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಅತ್ತೆ ಮನೆಯಲ್ಲಿ ಕಳ್ಳತನ: ಅಳಿಯ ಬಂಧನ

Published 21 ನವೆಂಬರ್ 2023, 16:00 IST
Last Updated 21 ನವೆಂಬರ್ 2023, 16:00 IST
ಅಕ್ಷರ ಗಾತ್ರ

ಬೆಂಗಳೂರು: ಹಲಸೂರು ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಪ್ರದೀಪ್‌ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಪ್ರದೀಪ್, ತನ್ನ ಅತ್ತೆ ರೆಜಿನಾ (ಪತ್ನಿಯ ತಾಯಿ) ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಅತ್ತೆ ನೀಡಿದ್ದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪ್ರದೀಪ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹಲಸೂರು ಠಾಣೆ ವ್ಯಾಪ್ತಿಯ ನಿವಾಸಿ ರೆಜಿನಾ ಅವರ ಮಗಳು ಹಾಗೂ ಪ್ರದೀಪ್ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರು ಒಂದೂವರೆ ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಯುವತಿ ನಾಪತ್ತೆ ಬಗ್ಗೆ ಪ್ರಕರಣವೂ ದಾಖಲಾಗಿತ್ತು’ ಎಂದರು.

‘ರೆಜಿನಾ ಅವರು ಅಕ್ಟೋಬರ್‌ನಲ್ಲಿ ಹೊರ ರಾಜ್ಯದ ಪ್ರವಾಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಅ. 30ರಂದು ಮನೆಗೆ ಹೋಗಿದ್ದ ಆರೋಪಿ, ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ. ಅದನ್ನು ನೋಡಿದ್ದ ಪಕ್ಕದ ಮನೆಯವರು, ಫೋಟೊ ತೆಗೆದು ರೆಜಿನಾ ಅವರಿಗೆ ಕಳುಹಿಸಿದ್ದರು. ಆದರೆ, ಪ್ರವಾಸದಲ್ಲಿದ್ದ ರೆಜಿನಾ ನೆಟ್‌ವರ್ಕ್‌ ಸಮಸ್ಯೆಯಿಂದ ಫೋಟೊ ನೋಡಿರಲಿಲ್ಲ. ವಸ್ತುಗಳ ಸಮೇತ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ’ ಎಂದು ಹೇಳಿದರು.

‘ಪ್ರವಾಸ ಮುಗಿಸಿ ರೆಜಿನಾ ಮನೆಗೆ ವಾಪಸು ಬಂದಿದ್ದರು. ಅಳಿಯ ಮನೆಗೆ ಬಂದು ಹೋಗಿದ್ದನ್ನು ಸ್ಥಳೀಯರು ತಿಳಿಸಿದ್ದರು. ಮನೆಯಲ್ಲಿ ಪರಿಶೀಲಿಸಿದಾಗ ₹ 40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳು ಕಳ್ಳತನ ಆಗಿತ್ತು ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT