ಬುಧವಾರ, ಆಗಸ್ಟ್ 17, 2022
25 °C

ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೆನಪಿಸಿದೆ. ಕೆಪಿಟಿಸಿಎಲ್‌ ನಿರ್ದೇಶಕರನ್ನಾಗಿ ನೇಮಕ ಮಾಡಿದ ಎರಡು ವರ್ಷದೊಳಗೇ ವರ್ಗಾವಣೆ ಮಾಡಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಲೇವಾರಿ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸಿದ್ದರಾಜು ಅವರನ್ನು 2019ರ ಡಿಸೆಂಬರ್‌ನಲ್ಲಿ ಕೆಪಿಟಿಸಿಎಲ್ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಅದೇ ಸ್ಥಾನಕ್ಕೆ 2020 ಅಕ್ಟೋಬರ್‌ನಲ್ಲಿ ಬಿ.ಕೆ. ಉದಯಕುಮಾರ್‌ ಅವರನ್ನು ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಜು ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಸಿದ್ದರಾಜು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 2021ರ ಜನವರಿಯಲ್ಲಿ ಉದಯಕುಮಾರ್ ನಿವೃತ್ತರಾಗಲಿದ್ದು, ಏಪ್ರಿಲ್‌ನಲ್ಲಿ ಸಿದ್ದರಾಜು ನಿವೃತ್ತಿ ಹೊಂದಲಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್, ‘ಉದಯಕುಮಾರ್ ಅವರ ನೇಮಕ ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದು ಸೂಕ್ತ ಎನ್ನಿಸುವುದಿಲ್ಲ. ಆದರೆ, ವರ್ಗಾವಣೆ ವೇಳೆ ಸಾರ್ವಜನಿಕ ಹಿತಾಸಕ್ತಿಯನ್ನು ಸರ್ಕಾರ ಹೊಂದಿರಬೇಕು. ಹಾಗೆ ಮಾಡಿದರೆ ಅನಗತ್ಯ ವ್ಯಾಜ್ಯಗಳು ಕಡಿಮೆಯಾಗುತ್ತವೆ’ ಎಂದರು.

‘ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಗಮನಿಸದೆ ಮಾಡುತ್ತಿರುವ ವರ್ಗಾವಣೆ ಆದೇಶಗಳು ವ್ಯಾಜ್ಯಗಳ ಮೂಲವಾಗುತ್ತಿವೆ’ ಎಂದು ಹೇಳಿದರು. ‘ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅನುಷ್ಠಾನಗೊಳಿಸುವವರು ಒಳ್ಳೆಯವರಾಗದಿದ್ದರೆ ಅದು ಕೂಡ ಕೆಟ್ಟದಾಗಿ ಕಾಣಿಸುತ್ತದೆ. ಕೆಟ್ಟದಾಗಿರುವ ಸಂವಿಧಾನವನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ ಅದು ಒಳ್ಳೆಯದಾಗಿ ಕಾಣಿಸುತ್ತದೆ’ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಲುಗಳನ್ನು ನ್ಯಾಯಮೂರ್ತಿ ಉಲ್ಲೇಖಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು