ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಣಗುತ್ತಿವೆ ಸಾವಿರಾರು ಗಿಡಗಳು: ಕೆಂಪೇಗೌಡ BDA ಬಡಾವಣೆಯಲ್ಲಿ ದುಂದುವೆಚ್ಚ

Published : 6 ಸೆಪ್ಟೆಂಬರ್ 2024, 0:35 IST
Last Updated : 6 ಸೆಪ್ಟೆಂಬರ್ 2024, 0:35 IST
ಫಾಲೋ ಮಾಡಿ
Comments

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಲ್ಕು ವರ್ಷಗಳಿಂದ ಹತ್ತಾರು ಕೋಟಿ ರೂಪಾಯಿ ವ್ಯಯಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೆಟ್ಟಿದ್ದ ಸಾವಿರಾರು ಗಿಡಗಳು ನಿರ್ವಹಣೆ ಇಲ್ಲದೆ ಒಣಗುತ್ತಿವೆ.

ಪರಿಸರ ದಿನ, ಅರಣ್ಯೀಕರಣ, ಹಸಿರೀಕರಣ ಎಂಬ ಹೆಸರಿನಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಪಿಕೆಎಲ್‌) ನಾಲ್ಕು ವರ್ಷಗಳಿಂದ ಬಿಡಿಎ ಅರಣ್ಯ ವಿಭಾಗ ಲಕ್ಷಾಂತರ ಸಸಿಗಳನ್ನು ನೆಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಸಿಯೊಂದಕ್ಕೆ ₹1,000ಕ್ಕೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಆದರೆ ಇದೀಗ ಬಹುತೇಕ ಗಿಡಗಳು ಜೀವಂತ ಉಳಿದಿಲ್ಲ.

‘ಬಿಡಿಎ ಬಡಾವಣೆಗಳನ್ನೆಲ್ಲ ಹಸಿರುಮಯ ಮಾಡುತ್ತೇವೆ’ ಎಂದು ರಸ್ತೆ ಬದಿ, ರಸ್ತೆ ವಿಭಜಕದ ಜಾಗದಲ್ಲಿ ಸಸಿಗಳನ್ನು ನೆಡಲಾಗಿದೆ. ಉದ್ಯಾನಗಳಲ್ಲಿ ಯಾವುದೇ ರೂಪುರೇಷೆ ಇಲ್ಲದೆ ಸಸಿಗಳನ್ನು ನೆಡಲಾಗಿದೆ. ಉದ್ಯಾನ ಅಭಿವೃದ್ಧಿಗೆ ಇವೆಲ್ಲ ತೊಡಕಾಗಿದ್ದವು. ಉದ್ಯಾನ ಅಭಿವೃದ್ಧಿ ಕೈಗೊಳ್ಳುವ ಮುನ್ನವೇ ಅಲ್ಲಿ ಅಡ್ಡಾದಿಡ್ಡಿ ನೆಟ್ಟಿದ್ದ ಗಿಡಗಳೂ ಒಣಗಿವೆ.

‘ಬಿಡಿಎ ಅರಣ್ಯ ವಿಭಾಗದ ಲೆಕ್ಕದಲ್ಲಿ ಮಾತ್ರ ಸಸಿಗಳಿವೆ, ವಾಸ್ತವದಲ್ಲಿ ರಸ್ತೆಗಳಲ್ಲಿಗಿಡಗಳಿಲ್ಲ. ಎನ್‌ಪಿಕೆಎಲ್‌ನ ಬಟಾಬಯಲಿನಲ್ಲಿ ಅನಗತ್ಯವಾಗಿ ಬೆಳೆದಿರುವ ಕಳೆ ಸಸಿಗಳ ನಡುವೆ ‘ಗಿಡ ರಕ್ಷಕಗಳು’ ಮಾತ್ರ ಅಲ್ಲಲ್ಲಿ ಕಾಣಸಿಗುತ್ತವೆ. ಸಸಿಗಳಿಗೆ ನೀರು ಹಾಕಿಲ್ಲ, ನಿರ್ವಹಣೆಯನ್ನೂ ಮಾಡಿಲ್ಲ. ಹೀಗಾಗಿ, ಎಲ್ಲವೂ ಒಣಗಿವೆ’ ಎಂದು ಸ್ಥಳೀಯರಾದ ರಾಜೇಶ್‌, ಶೋಭಾ, ಗಂಗಾಧರ್‌, ಮನೋಹರ್‌ ದೂರಿದರು.

‘ಎನ್‌ಪಿಕೆಎಲ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ಬಗ್ಗೆ ಬಿಡಿಎ ಅರಣ್ಯ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದರು. ಆದರೆ, ವಾಸ್ತವದಲ್ಲಿ ಅದರಲ್ಲಿ ಕಾಲು ಭಾಗದಷ್ಟೂ ಗಿಡಗಳು ಇಲ್ಲಿಲ್ಲ. ಕೆಲವೆಡೆ ಕೇವಲ ಬಿದಿರಿನ ಗಿಡ ರಕ್ಷಕಗಳಷ್ಟೇ ಕಾಣುತ್ತವೆ. ಸ್ಥಳೀಯವಾಗಿ ಅಗತ್ಯವಿಲ್ಲದ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಲಾಗುತ್ತಿದೆ. ಅರಣ್ಯದಲ್ಲಿ ಬೆಳೆಯುವ ಮರಗಳು, ನಗರದ ವಾತಾವರಣದಲ್ಲಿ ಬೆಳೆಯುವುದಿಲ್ಲ ಎಂಬ ಅರಿವಿದ್ದರೂ ಲೆಕ್ಕ, ವೆಚ್ಚಕ್ಕಾಗಿ ಅಂತಹ ಗಿಡಗಳನ್ನೂ ಬೆಳೆಸಲಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತರು ಆರೋಪಿಸುತ್ತಾರೆ.

ದುಂದುವೆಚ್ಚಕ್ಕೆ ಶಿಕ್ಷೆ ಇಲ್ಲವೆ?
‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ಅರಣ್ಯ ವಿಭಾಗದವರು ನಾಲ್ಕು ವರ್ಷಗಳಿಂದ ನೆಟ್ಟಿರುವ ಸಸಿಗಳಲ್ಲಿ ಬಹುತೇಕ ಎಲ್ಲವೂ ಒಣಗಿವೆ. ಒಂದು ಬಾರಿ ನೆಟ್ಟ ಮೇಲೆ ಯಾರೂ ಇತ್ತ ತಿರುಗಿ ನೋಡಿಲ್ಲ. ದುಂದುವೆಚ್ಚ ಮಾಡಬೇಡಿ, ನಿರ್ವಹಣೆ ಮಾಡುವುದಾದರೆ ಮಾತ್ರ ನೆಡಿ ಎಂದು ಆಗಲೇ ಒತ್ತಾಯಿಸಿದ್ದೆವು. ಆದರೆ ಯಾರೂ ನಮ್ಮ ಮಾತು ಕೇಳಲಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ದಾಖಲೆಗೆ ತೋರಿಸಲು ಸಸಿ ನೆಟ್ಟರು. ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಂಡು, ಶಿಕ್ಷೆ ನೀಡಬೇಕು’ ಎಂದು ಪರಿಸರ ಕಾರ್ಯಕರ್ತ ಗೌಡಯ್ಯ ಒತ್ತಾಯಿಸಿದರು.

‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಗುತ್ತಿಗೆ ನೀಡುವಂತಿಲ್ಲ ಎಂದೆಲ್ಲ ಹೇಳುತ್ತಾರೆ. ಆದರೆ, ಬಿಡಿಎ ಅರಣ್ಯ ವಿಭಾಗದ ಅಧಿಕಾರಿಗಳು ಹಣ ಮಾಡಿಕೊಳ್ಳಲೆಂದೇ ಅವರಿಗೆ ಗುತ್ತಿಗೆ ನೀಡಿ ಕೋಟ್ಯಂತರ ರೂಪಾಯಿಗಳನ್ನು ಕಬಳಿಸಿದ್ದಾರೆ. ನಾವಲ್ಲ, ಹಿಂದೆ ಇದ್ದವರು ಮಾಡಿದ್ದಾರೆ ಎನ್ನುತ್ತಾರೆ. ಯಾರೇ ಮಾಡಿದ್ದರೂ ಎಲ್ಲವೂ ತನಿಖೆಯಾಗಿ, ಶಿಕ್ಷೆಯಾಗಲಿ’ ಎಂದು ಆಗ್ರಹಿಸಿದರು.

ಸಮೀಕ್ಷೆ ನಡೆಯುತ್ತಿದೆ: ಬಿಡಿಎ

‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಪಿಕೆಲ್‌) ಬೃಹತ್‌ ಸಂಖ್ಯೆಯ ಗಿಡಗಳು ಒಣಗಿರುವುದು ಗಮನಕ್ಕೆ ಬಂದಿದೆ. ಈ ಗಿಡಗಳನ್ನು ತೆಗೆದು, ಹೊಸ ಸಸಿಗಳನ್ನು ನೆಡಲಾಗುತ್ತದೆ’ ಎಂದು ಬಿಡಿಎ ಅರಣ್ಯ ವಿಭಾಗದ ಉಪ ನಿರ್ದೇಶಕ ಎನ್‌. ಚಿದಾನಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎನ್‌ಪಿಕೆಲ್‌ನಲ್ಲಿ ಮಾತ್ರವಲ್ಲ, ಬಿಡಿಎಯ ಎಲ್ಲ ಬಡಾವಣೆಗಳಲ್ಲೂ ಸಸಿಗಳನ್ನು ನೆಡಲು ಸುಮಾರು ₹30 ಕೋಟಿ ವೆಚ್ಚ ಮಾಡಲಾಗಿದೆ. ಕಡಿಮೆ ಅವಧಿಯಲ್ಲಿ ಕೆಲಸ ಮುಗಿಸಬೇಕಿದ್ದ ಕಾರಣದಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಗುತ್ತಿಗೆಗಳನ್ನು ನೀಡಲಾಗಿದೆ. ಕೆಲವು ಗುತ್ತಿಗೆಗಳ ಅವಧಿ ಮುಗಿದಿರಬಹುದು. ಎಲ್ಲವನ್ನೂ ಸಮೀಕ್ಷೆ ಮಾಡಲಾಗುತ್ತಿದೆ. ಹೊಸ ಸಸಿಗಳನ್ನು ನೆಡಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT