ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಲಾರಿ-ಬೈಕ್‌ ಮಧ್ಯೆ ಅಪಘಾತ: ಮೂವರು ವಿದ್ಯಾರ್ಥಿಗಳ ಸಾವು

ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು: ಲಾರಿ ಚಕ್ರ ಹರಿದು ದೇಹಗಳು ಛಿದ್ರ
Published : 12 ಸೆಪ್ಟೆಂಬರ್ 2024, 15:52 IST
Last Updated : 12 ಸೆಪ್ಟೆಂಬರ್ 2024, 15:52 IST
ಫಾಲೋ ಮಾಡಿ
Comments

ಬೆಂಗಳೂರು: ಚಿಕ್ಕಜಾಲ ಮೇಲ್ಸೇತುವೆ ಬಳಿ ಬುಧವಾರ ತಡರಾತ್ರಿ ಲಾರಿ ಹಾಗೂ ಬೈಕ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಬ್ಬಾಳದ ಕೆಂಪಾಪುರದ ನಿವಾಸಿ ಸುಚಿತ್‌(22), ಕೋಲಾರ ಜಿಲ್ಲೆಯ ಕೆಜಿಎಫ್‌ನ ಹರ್ಷವರ್ಧನ್‌(21) ಹಾಗೂ ಚಿಕ್ಕಬಳ್ಳಾಪುರದ ರೋಹಿತ್‌(21) ಮೃತಪಟ್ಟ ವಿದ್ಯಾರ್ಥಿಗಳು.

ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯವು ನಗರದ ಹೆಬ್ಬಾಳದ ಜಿ.ಕೆ.ವಿ.ಕೆ ಆವರಣದಲ್ಲಿ ತೆರೆದಿರುವ ಅಧ್ಯಯನ ಕೇಂದ್ರದಲ್ಲಿ ಬಿಎಸ್ಸಿ(ತೋಟಗಾರಿಕೆ)ಯ ಪದವಿಯ ಅಂತಿಮ ವರ್ಷದಲ್ಲಿ ಮೂವರೂ ವ್ಯಾಸಂಗ ಮಾಡುತ್ತಿದ್ದರು. ಎಲ್ಲರೂ ಸ್ನೇಹಿತರಾಗಿದ್ದರು. ರಾತ್ರಿ 1.30ರ ಸುಮಾರಿಗೆ ವಿಮಾನ ನಿಲ್ದಾಣ ರಸ್ತೆಯ ಕೋಟೆ ಕ್ರಾಸ್‌ ಬಳಿ ಅಪಘಾತವಾಗಿದೆ.

‘ಮೂವರೂ ಹೆಲ್ಮೆಟ್‌ ಧರಿಸಿದ್ದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕೆಳಕ್ಕೆ ಬಿದ್ದ ಮೂವರ ಮೇಲೂ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

‘ಬುಧವಾರ ತರಗತಿ ಮುಗಿಸಿಕೊಂಡು ಐವರು ಗೆಳೆಯರು ಎರಡು ಬೈಕ್‌ನಲ್ಲಿ ಸ್ನೇಹಿತರೊಬ್ಬರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪಾರ್ಟಿಗೆ ಹೋಗಿದ್ದರು. ತಡರಾತ್ರಿವರೆಗೂ ನಡೆದ ಪಾರ್ಟಿ ಮುಗಿಸಿಕೊಂಡು ಬೈಕ್‌ನಲ್ಲಿ ‘ಜಾಲಿ ರೈಡ್‌’ ಹೊರಟಿದ್ದರು ಎನ್ನಲಾಗಿದೆ. ಇಬ್ಬರು ಒಂದು ಬೈಕ್‌ನಲ್ಲಿ, ಮತ್ತೊಂದು ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು. ಕೋಟೆ ಕ್ರಾಸ್‌ ಬಳಿ ಅತಿವೇಗವಾಗಿ ಬಂದ ಲಾರಿ, ಮೂವರಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಲಾರಿಯ ಹಿಂದಿನ ಚಕ್ರ ಮೂವರ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿಗಳ ದೇಹಗಳು ಛಿದ್ರಗೊಂಡಿದ್ದವು’ ಎಂದು ಪೊಲೀಸರು ತಿಳಿಸಿದರು.

ಅಪಘಾತ ನಡೆದಿದ್ದನ್ನು ಗಮನಿಸಿದ ಚಹಾ ಅಂಗಡಿಯವರು ಹಾಗೂ ಆಟೊ ಚಾಲಕರು ಸಂಚಾರ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.

ಚಾಲಕ ವಶಕ್ಕೆ: ‘ಅಪಘಾತವಾದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದ. ಟೋಲ್‌ ಸೇರಿದಂತೆ ವಿವಿಧೆಡೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ವಾಹನದ ನೋಂದಣಿ ಸಂಖ್ಯೆ ಪತ್ತೆ ಹಚ್ಚಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪೋಷಕರ ಆಕ್ರಂದನ: ವಿದ್ಯಾರ್ಥಿಗಳ ಪರ್ಸ್‌ನಲ್ಲಿದ್ದ ಗುರುತಿನ ಚೀಟಿ ಆಧರಿಸಿ, ವಿದ್ಯಾರ್ಥಿಗಳ ವಿಳಾಸ ಪತ್ತೆ ಮಾಡಲಾಯಿತು. ಬಳಿಕ, ಅವರ ಪೋಷಕರಿಗೆ ಮಾಹಿತಿ ನೀಡಲಾಯಿತು.

ಮಕ್ಕಳ ಮೃತದೇಹ ಕಂಡು ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT