ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿಗೆ ಮೂರು ಹಂತದ ಆಡಳಿತ ವ್ಯವಸ್ಥೆ

Published 2 ಜುಲೈ 2024, 19:07 IST
Last Updated 2 ಜುಲೈ 2024, 19:07 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪುನಾರಚನೆಯಾಗಿ ಹೊಸದಾಗಿ ಮೂರು ಹಂತದ ಆಡಳಿತ ವ್ಯವಸ್ಥೆ ಬರಲಿದೆ. ಸಮಗ್ರ ಬೆಂಗಳೂರಿನ ಆಡಳಿತ ನಿರ್ವಹಣೆಗೆ ಮೇಲಿನ ಹಂತದಲ್ಲಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ’(ಜಿಬಿಎ) ಇದ್ದರೆ, ಎರಡನೇ ಹಂತದಲ್ಲಿ ಮಹಾನಗರ ಪಾಲಿಕೆಗಳು ಹಾಗೂ ಮೂರನೇ ಹಂತದಲ್ಲಿ ವಾರ್ಡ್‌ಗಳು ಇರಲಿವೆ.

ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸುವ ಪ್ರಸ್ತಾವವಿದೆ. ಪಾಲಿಕೆ ಆಡಳಿತ ನಿರ್ವಹಣೆಯಲ್ಲಿ ಸಂಸದೀಯ ಮಾದರಿ ಅಳವಡಿಸಿಕೊಳ್ಳಲಿದ್ದು, ತಲಾ ಒಬ್ಬ ಮೇಯರ್‌, ಉಪ ಮೇಯರ್‌ ಜತೆಗೆ ಹತ್ತು ಸದಸ್ಯರ ಸಂಪುಟವೂ ಇರಲಿದೆ. ಆದರೆ, ಈಗ ಇರುವ ಸ್ಥಾಯಿ ಸಮಿತಿಗಳು ರದ್ದಾಗಲಿವೆ.

ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಮತ್ತು ಅದನ್ನು ವೆಚ್ಚ ಮಾಡುವ ಸಂಪೂರ್ಣ ಅಧಿಕಾರವನ್ನು ಹೊಂದಿರಲಿದೆ. ಆದರೆ, ಒಂದು ಪಾಲಿಕೆಗೂ ಮತ್ತೊಂದು ಪಾಲಿಕೆಗೂ ಆಸ್ತಿ ತೆರಿಗೆಯ ದರಗಳಲ್ಲಿ ಶೇಕಡ 5ರಿಂದ ಶೇ 10ರಷ್ಟು ವ್ಯತ್ಯಾಸಗಳಿರುವ ಸಾಧ್ಯತೆ ಇರುತ್ತದೆ.

ಮೂಲಗಳ ಪ್ರಕಾರ, ‘ಬಿಬಿಎಂಪಿ ಪುನರ್‌ರಚನೆ ಸಮಿತಿಯು (ಬ್ರ್ಯಾಂಡ್‌ ಬೆಂಗಳೂರು ಸಮಿತಿ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಮಹಾನಗರ ಪಾಲಿಕೆಗಳನ್ನಾಗಿ ಪುನರ್‌ ರಚಿಸಲು ಯೋಚಿಸಿದೆ. ಪ್ರತಿ ಪಾಲಿಕೆಗೂ ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಆಯುಕ್ತರು ಮತ್ತು ಪ್ರತಿ ವಲಯಕ್ಕೆ ಒಬ್ಬ ವಲಯ ಆಯುಕ್ತರು ಇರುತ್ತಾರೆ. ಆಡಳಿತ ನಿರ್ವಹಣೆಗಾಗಿ ಲೆಕ್ಕಪತ್ರ ಸಮಿತಿ ಮತ್ತು ವಿಷಯ ನಿರ್ವಹಣಾ ಸಮಿತಿಗಳು ಇರಲಿವೆ’.

ಪ್ರತಿ ವಾರ್ಡ್‌ನಲ್ಲೂ ವಾರ್ಡ್‌ ಸಮಿತಿ ರಚಿಸಲಾಗುತ್ತದೆ. ಶೇ 10ರಷ್ಟು ಮತದಾರರಿಗೆ ಒಬ್ಬರಂತೆ ವಾರ್ಡ್‌ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆಯಾ ವಾರ್ಡ್‌ನ ಸದಸ್ಯರೇ ವಾರ್ಡ್‌ ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ. ಪ್ರತಿ ಸಮಿತಿಯಲ್ಲೂ ತಲಾ ಹತ್ತು ಮಂದಿ ಮತದಾರರ ಗುಂಪಿನ ಪ್ರತಿನಿಧಿಗಳು ಮತ್ತು ನಾಮನಿರ್ದೇಶನ ಹೊಂದಿದ ಸದಸ್ಯರು ಇರಬೇಕೆಂಬ ಶಿಫಾರಸನ್ನು ಮಾಡಲು ಪುನರ್‌ರಚನಾ ಸಮಿತಿ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ಪ್ರತಿ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸುವಾಗ ವಾರ್ಡ್‌ ಸಮಿತಿ ಸದಸ್ಯರ ಆಯ್ಕೆಯಲ್ಲಿ ಆದ್ಯತೆ ಮೇಲೆ ಪರಿಗಣಿಸಲು ಮೂವರ ಹೆಸರನ್ನು ನಾಮನಿರ್ದೇಶನ ಮಾಡಬೇಕು. ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುವ ಅಭ್ಯರ್ಥಿ ಗಳಿಸುವ ಮತಗಳ ಅನುಪಾತಕ್ಕೆ ತಕ್ಕಂತೆ ಆತನಿಂದ ಶಿಫಾರಸು ಮಾಡಲಾದ ವ್ಯಕ್ತಿಗಳನ್ನು ವಾರ್ಡ್‌ ಸಮಿತಿಗಳಿಗೆ ಆಯ್ಕೆ ಮಾಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

ಸಂಗ್ರಹಿಸಿದ ಆಸ್ತಿ ತೆರಿಗೆಯಲ್ಲಿ ಒಂದು ಭಾಗವನ್ನು ವಾರ್ಡ್‌ ಸಮಿತಿಗಳಿಗಾಗಿ ವೆಚ್ಚ ಮಾಡಬೇಕೆಂಬ ಪ್ರಸ್ತಾವ ಮಂಡಿಸಲು ವಾರ್ಡ್‌ ಸಮಿತಿಗಳಿಗೆ ಅಧಿಕಾರ ಇರಲಿದೆ. ವಿಶೇಷವಾಗಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಪೂರಕವಾಗಿ ವಾರ್ಡ್‌ ಸಮಿತಿಗಳು ಈ ಹಣ ಬಳಸಬಹುದು.

ಬಿಬಿಎಂಪಿ ಪುನರ್‌ರಚನಾ ಕರಡಿನಲ್ಲಿ ಏನಿದೆ?

5; ಮಹಾನಗರ ಪಾಲಿಕೆಗಳ ಸಂಖ್ಯೆ

2; ಪ್ರತಿ ಪಾಲಿಕೆಯಲ್ಲಿರುವ ವಲಯಗಳು

400; ಒಟ್ಟು ವಾರ್ಡ್‌ಗಳ ಸಂಖ್ಯೆ

80; ಪ್ರತಿ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ

900ರಿಂದ 1,050 ಕಿ.ಮೀ.; ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ

200 ಚದರ ಕಿ.ಮೀ.; ಪ್ರತಿ ಪಾಲಿಕೆಯ ವ್ಯಾಪ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT