ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ಮೇಲೆ ನಿಂತು ‘ಟಿಕ್‌ಟಾಕ್‌'; ಇಬ್ಬರ ದುರ್ಮರಣ

ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಘಡ
Last Updated 27 ಸೆಪ್ಟೆಂಬರ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಳಿ ಮೇಲೆ ನಿಂತು ‘ಟಿಕ್‌ಟಾಕ್‌’ ಆ್ಯಪ್‌ನಲ್ಲಿ ವಿಡಿಯೊ ಮಾಡುತ್ತಿದ್ದ ವೇಳೆಯಲ್ಲೇ ರೈಲು ಹರಿದು ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ.

ರಾಮಕೃಷ್ಣ ಹೆಗಡೆ ನಗರದ ಅಫ್ತಾಬ್ ಷರೀಫ್ (19) ಹಾಗೂ ಮೊಹಮ್ಮದ್ ಮತೀಮ್ (23) ಮೃತರು. ಅವಘಡದಲ್ಲಿ ಜಬೀವುಲ್ಲಾ (21) ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮೃತ ಅಫ್ತಾಬ್ ಅವರು ಫುಡ್ ಡೆಲಿವರಿ ಬಾಯ್ ಆಗಿದ್ದರು. ಮತೀಮ್,ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಟಿಕ್‌ಟಾಕ್ ಆ್ಯಪ್‌ನಲ್ಲಿ ವಿಡಿಯೊ ಮಾಡುವುದಕ್ಕಾಗಿ ಸ್ನೇಹಿತರೆಲ್ಲರೂ ಶುಕ್ರವಾರ ಸಂಜೆ ರೈಲು ಹಳಿಯತ್ತ ಹೋಗಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ಹಳಿ ಸಮೀಪದಲ್ಲೇ ಬಿದ್ದಿದ್ದ ಮೃತದೇಹಗಳು: ‘ಶಿವರಾಮ್ ಕಾರಂತ ನಗರ ಎರಡನೇ ಹಂತ ಸಮೀಪದ ಶ್ರೀರಾಮಪುರ ರೈಲ್ವೆ ಗೇಟ್‌ ಬಳಿ ಇರುವ ಹಳಿ ಮೇಲೆ ನಿಂತು ಯುವಕರು ‘ಟಿಕ್‌ಟಾಕ್‌’ನಲ್ಲಿ ವಿಡಿಯೊ ಮಾಡುತ್ತಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಸಂಜೆ 5.30ರ ಸುಮಾರಿಗೆಕೋಲಾರದಿಂದ ಬೆಂಗಳೂರಿನತ್ತ ಪ್ಯಾಸೆಂಜರ್ ರೈಲು ಬರುತ್ತಿತ್ತು. ದೂರದಿಂದಲೇ ರೈಲು ನೋಡಿದ್ದ ಯುವಕರು, ಎದುರಿಗೆ ಮೊಬೈಲ್‌ ಇಟ್ಟುಕೊಂಡು ವಿಡಿಯೊ ಮಾಡಲಾರಂಭಿಸಿದ್ದರು. ಕೆಲವೇ ಕ್ಷಣಗಳಲ್ಲಿ ವೇಗವಾಗಿ ಬಂದ ರೈಲು, ಮೂವರು ಯುವಕರಿಗೆ ಗುದ್ದಿತ್ತು’ ಎಂದು ಹೇಳಿದರು.

‘ಅಫ್ತಾಬ್‌ ಅವರ ಮೃತದೇಹ ಹಳಿ ಪಕ್ಕದ ವಿದ್ಯುತ್‌ ಕಂಬಕ್ಕೆ ಬಡಿದು ಕೆಳಗೆ ಬಿದ್ದಿತ್ತು. ಮತೀಮ್ ಅವರ ದೇಹ 20 ಅಡಿಯಷ್ಟು ದೂರದಲ್ಲಿ ಬಿದ್ದಿತ್ತು. ಅದನ್ನು ಕಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ಗಾಯಗೊಂಡಿರುವಜಬೀವುಲ್ಲಾ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಿತಿ ಗಂಭೀರವಾಗಿದೆ. ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ತಿಳಿಸಿದರು.

ಎರಡು ತಿಂಗಳ ಹಿಂದಷ್ಟೇತುಮಕೂರಿನಲ್ಲಿ ಯುವಕರೊಬ್ಬರು ಟಿಕ್‌ಟಾಕ್‌ ವಿಡಿಯೊ ಚಿತ್ರೀಕರಿಸುವಾಗ ಜಂಪಿಂಗ್ ಮಾಡಿ ಬೆನ್ನು ಮೂಳೆ ಮುರಿದುಕೊಂಡು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT