ಮಂಗಳವಾರ, ಸೆಪ್ಟೆಂಬರ್ 21, 2021
25 °C
ಕೊಳವೆಗಳಲ್ಲಿ ತುಂಬಿದ್ದ ಹೂಳು ತೆರವು

ಟಿನ್ ಫ್ಯಾಕ್ಟರಿ ಜಂಕ್ಷನ್: ನೀರು ಕಟ್ಟಿಕೊಳ್ಳುವ ಸಮಸ್ಯೆಯಿಂದ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆ.ಆರ್.ಪುರ ಬಳಿಯ ಪೈ ಬಡಾವಣೆ ಮತ್ತು ಟಿನ್‌ಫ್ಯಾಕ್ಟರಿ ಜಂಕ್ಷನ್ ಬಳಿಯ ಮೇಲ್ಸೇತುವೆಯ ಕೆಳಭಾಗದಲ್ಲಿ ನೀರು ಕಟ್ಟಿಕೊಳ್ಳುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಇಲ್ಲಿನ 80 ಮೀಟರ್ ಉದ್ದದ ಮೂರು ಕೊಳವೆಗಳಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ಪ್ರದೇಶ ಜಲಾವೃತಗೊಳ್ಳುತ್ತಿತ್ತು.  ಸುಮಾರು 8 ವರ್ಷಗಳಿಂದಲೂ ಈ ಸಮಸ್ಯೆ ಇತ್ತು. ತಿಂಗಳ ಹಿಂದೆ ಸುರಿದ ಮಳೆಗೆ ಈ ಪ್ರದೇಶದಲ್ಲಿ ನೀರು ತುಂಬಿ ಸುಮಾರು ನಾಲ್ಕೈದು ಅಡಿಗಳಷ್ಟು ನೀರು ರಸ್ತೆ ಮೇಲೆ ನಿಂತಿತ್ತು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸುವಂತೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಸೂಚಿಸಿದ್ದರು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮೂರೂ ಕೊಳವೆಗಳಲ್ಲಿನ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಬಳಿಕ ಯಾವುದೇ ಅಡೆ ತಡೆ ಇಲ್ಲದೆಯೇ ನೀರು ಸರಾಗವಾಗಿ ಹರಿಯುತ್ತಿದೆ. ಈ ಪ್ರದೇಶವು ಈ ಬಾರಿ ಮಳೆಗೆ ಜಲಾವೃತವಾಗಿಲ್ಲ.

ಈ ಸ್ಥಳಕ್ಕೆ ಮೇಯರ್‌ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರನ್ನು ಅನೇಕ ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆ ಬಗೆಹರಿಸಿದ್ದಕ್ಕೆ ಮುಖ್ಯ ಎಂಜಿನಿಯರ್‌ ಪರಮೇಶ್ವರ್‌ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಒಳಹರಿವು ಕಾಲುವೆಗಳಲ್ಲಿ ತುಂಬಿಕೊಳ್ಳುವ ಹೂಳನ್ನು ಆಗಿಂದಾಗ್ಗೆ ತೆರವುಗೊಳಿಸುತ್ತಿರಬೇಕು. ನೀರು ಕಟ್ಟಿಕೊಳ್ಳುವ ಇತರ ಪ್ರದೇಶಗಳಲ್ಲಿಯೂ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಕ್ರಮ ಕೈಕೊಳ್ಳಬೇಕು’ ಎಂದು ಮೇಯರ್‌ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು