ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಗಳಲ್ಲಿ ‘ಟೋಕನ್ ಪದ್ಧತಿ’ಗೆ ಚಿಂತನೆ

ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶ l ಆದ್ಯತೆ ಮೇಲೆ ಪ್ರಕರಣಗಳ ಇತ್ಯರ್ಥ
Last Updated 3 ಜುಲೈ 2019, 20:34 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಜೊತೆಗೆ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶದಿಂದ ದೂರುದಾರರಿಗೆ ‘ಟೋಕನ್ ಪದ್ಧತಿ‘ ಮತ್ತು ‌‘ಫೀಡ್ ಬ್ಯಾಕ್ ಪದ್ಧತಿ‘ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಪೊಲೀಸ್‌ ಕಮಿಷನರ್‌ ಅಲೋಕ್ ಕುಮಾರ್ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಪೊಲೀಸ್‌ ಠಾಣೆಗಳಿಗೆ ನಿತ್ಯ ನೂರಾರು ಜನರು ಬಂದು ತಮ್ಮ ಸಮಸ್ಯೆ ಪರಿಹರಿಸುವಂತೆ ಅರ್ಜಿ ಅಥವಾ ದೂರು ದಾಖಲಿಸುತ್ತಾರೆ. ನಿಯಮದ ಪ್ರಕಾರ ಸ್ವೀಕೃತಿ ರಸೀದಿ ನೀಡಲಾಗುತ್ತದೆ. ಅದರ ಜೊತೆಗೆ ಇನ್ನು ಮುಂದೆ ಟೋಕನ್ ಕೊಡಲು ನಿರ್ಧರಿಸಲಾಗಿದೆ’ ಎಂದರು.

‘ಈ ವ್ಯವಸ್ಥೆ ಜಾರಿಗೆ ಬಂದರೆ ಆದ್ಯತೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಅಲ್ಲದೆ, ವಿಲೇವಾರಿಯಾಗದ ದೂರುಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಬಹುದು. ಹಿರಿಯ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ಚರ್ಚಿಸಿ, ಈ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಉದ್ದೇಶದಿಂದ ‘ಫೀಡ್ ಬ್ಯಾಕ್ ಪದ್ಧತಿ' ಜಾರಿಗೆ ತರಲಾಗುತ್ತದೆ. ಜನರು ತಮ್ಮ ಸಮಸ್ಯೆಗಳ ಸಮೇತ ಠಾಣೆಗಳ ಬದಲು ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಸುತ್ತಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಠಾಣೆಗಳಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂಬ ಭಾವನೆ ಮೂಡಿಸಲು ಈ ಹೊಸ ಯೋಜನೆಗೆ ರೂಪು ನೀಡಲಾಗಿದೆ. ತಮ್ಮ ಪ್ರಕರಣದ ತನಿಖೆಯ ಕುರಿತು ಪೊಲೀಸ್ ಠಾಣೆ ಅಥವಾ ಹಿರಿಯ ಅಧಿಕಾರಿಗಳಿಗೆ ಮೌಖಿಕ ಅಥವಾ ಲಿಖಿತ ರೂಪದಲ್ಲಿ ದೂರುದಾರರು ಅಭಿಪ್ರಾಯ ನೀಡಬಹುದು. ಕೆಲವು ಪೊಲೀಸ್ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು.

‘ಠಾಣಾ ವ್ಯಾಪ್ತಿಯಲ್ಲಿರುವ ಬೀಟ್ ಸಿಬ್ಬಂದಿಯನ್ನು ಪ್ರತಿ ತಿಂಗಳು ಬೇರೆ ಬೇರೆ ಸ್ಥಳಗಳಲ್ಲಿ ನಿಯೋಜಿಸುವುದರಿಂದ ನಿರ್ದಿಷ್ಟ ಪ್ರದೇಶದ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಒಬ್ಬ ಸಿಬ್ಬಂದಿಗೆ ಸೂಚಿಸಿದ ಜಾಗವನ್ನು ಆತ ಬೇರೆ ಠಾಣೆಗೆ ವರ್ಗಾವಣೆಯಾಗುವವರೆಗೂ ಬದಲಿಸದಂತೆ ಸೂಚಿಸಲಾಗಿದೆ. ಇದರಿಂದ ಸಿಬ್ಬಂದಿ ತನ್ನ ಪ್ರದೇಶದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಸೇರಿದಂತೆ ಎಲ್ಲರ ಮಾಹಿತಿ ಪಡೆದುಕೊಳ್ಳಲು ನೆರವಾಗಲಿದೆ’ ಎಂದು ವಿವರಿಸಿದರು.

ನಿರ್ಲಕ್ಷ್ಯ ವಹಿಸಿದರೆ ಕ್ರಮ: ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ, ಲೋಹ ಪರಿಶೋಧಕ ಯಂತ್ರ ಸೇರಿ ಕೆಲವು ಭದ್ರತಾ ಉಪಕರಣಗಳನ್ನು ಅಳವಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಮಸೀದಿ, ಚರ್ಚ್ ಹಾಗೂ ದೇವಸ್ಥಾನ, ಮಾಲ್, ಬಸ್‍ ನಿಲ್ದಾಣ ಸೇರಿದಂತೆ ಜನದಟ್ಟಣೆಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಆದರೆ, ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಷ್ಟೇ ಅಲ್ಲ, ದಂಡ ಹಾಗೂ ಸಂಬಂಧಿಸಿದ ಇಲಾಖೆಗೆ ಪರವಾನಗಿ ರದ್ದು ಮಾಡುವಂತೆ ಸೂಚಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT