ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ಪ್ರತಿಭಟನೆ: ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ, ಜನ ಹೈರಾಣ

Last Updated 10 ಜನವರಿ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಸಾಲು ಸಾಲು ಪ್ರತಿಭಟನೆಗಳು ನಡೆದವು. ಹೆಣ್ಣೂರು ಕ್ರಾಸ್‌– ನಾಗವಾರ ಜಂಕ್ಷನ್ ರಸ್ತೆಯಲ್ಲಿ ಮೆಟ್ರೊ ಪಿಲ್ಲರ್ ನಿರ್ಮಿಸಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಬಿದ್ದಿತ್ತು. ಇದರಿಂದಾಗಿ ನಗರದ ಹಲವೆಡೆ ವಿಪರೀತ ದಟ್ಟಣೆ ಉಂಟಾಗಿ, ರಸ್ತೆ ದಾಟಲು ಜನರು ಹೈರಾಣಾದರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪರವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ವಿರುದ್ಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮೆರವಣಿಗೆ ಸಾಗುತ್ತಿದ್ದ ಮೇಲ್ಸೇತುವೆ ಹಾಗೂ ಶೇಷಾದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಹೀಗಾಗಿ, ಮೆರವಣಿಗೆ ಸಾಗುತ್ತಿದ್ದ ಅವಧಿಯಲ್ಲಿ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ನಿಂತಲೇ ನಿಲ್ಲಬೇಕಾಯಿತು.

ಮೆಜೆಸ್ಟಿಕ್, ಗಾಂಧಿನಗರ, ಮೈಸೂರು ಬ್ಯಾಂಕ್ ವೃತ್ತ, ಬಸವೇಶ್ವರ ವೃತ್ತ, ಸ್ಯಾಂಕಿ ರಸ್ತೆ, ಶಿವಾನಂದ ವೃತ್ತ, ಆನಂದರಾವ್ ವೃತ್ತ, ಓಕಳಿಪುರ, ಶೇಷಾದ್ರಿಪುರ, ಮಲ್ಲೇಶ್ವರ, ರೇಸ್‌ಕೋರ್ಸ್ ರಸ್ತೆ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕೆಂಪೇಗೌಡ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿಪರೀತ ದಟ್ಟಣೆ ಕಂಡುಬಂತು.

ರಾಜ್ಯದ ವಿವಿಧ ನಗರಗಳಿಂದ ಬಸ್ ಹಾಗೂ ಕಾರುಗಳಲ್ಲಿ ಪ್ರತಿಭಟನಕಾರರು ನಗರಕ್ಕೆ ಬಂದಿದ್ದರು. ಅವರೆಲ್ಲರೂ ತಮ್ಮ ಬಸ್ ಹಾಗೂ ಕಾರುಗಳನ್ನು, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ನಿಲ್ಲಿಸಿದ್ದರು. ಇದು ಸಹ ದಟ್ಟಣೆಗೆ ಕಾರಣವಾಯಿತು. ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಸಹ ದಟ್ಟಣೆ ನಿಯಂತ್ರಿಸಲು ಪರದಾಡಿದರು.

ಕಚೇರಿ ಹಾಗೂ ಇತರೆ ಕೆಲಸಕ್ಕಾಗಿ ಹೊರಟಿದ್ದ ಜನ, ದಟ್ಟಣೆಯಲ್ಲಿ ಸಿಲುಕಿ ಪರಿತಪಿಸಿದರು. ಮುಖ್ಯರಸ್ತೆಯಲ್ಲಿದ್ದ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಒಳರಸ್ತೆಗಳಲ್ಲಿ ಮುಂದಕ್ಕೆ ಕಳುಹಿಸಲಾಯಿತು.

ಇದರಿಂದಾಗಿ, ಒಳ ರಸ್ತೆಗಳಲ್ಲೂ ದಟ್ಟಣೆ ಉಂಟಾಗಿ ವಾಹನಗಳು ನಿಂತಲೇ ನಿಲ್ಲಬೇಕಾಯಿತು. ಕೆಲಸ ಮುಗಿಸಿ ಸಂಜೆ ಮನೆಯತ್ತ ಹೊರಟಿದ್ದಾಗಲೂ ಜನರು ದಟ್ಟಣೆಯಲ್ಲಿ ಸಿಲುಕಿದ್ದರು. ಪ್ರತಿಭಟನಕಾರರು ಹಾಗೂ ಅವರ ವಾಹನಗಳು ಸ್ಥಳದಿಂದ ಹೊರಟ ಬಳಿಕವೇ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ತಲುಪಿತು.

ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ
ಹೆಣ್ಣೂರು ಕ್ರಾಸ್–ನಾಗವಾರ ಜಂಕ್ಷನ್‌ ರಸ್ತೆಯಲ್ಲಿ ಮೆಟ್ರೊ ಪಿಲ್ಲರ್ ನಿರ್ಮಿಸಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ–ಮಗು ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ಕಬ್ಬಿಣದ ಚೌಕಟ್ಟು ಬಿದ್ದಿದ್ದರಿಂದ, ಕೆಲ ಗಂಟೆಗಳವರೆಗೆ ವಾಹನಗಳ ಸಂಚಾರವೇ ಬಂದ್ ಆಗಿತ್ತು. ಹೊರವರ್ತುಲ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಉಂಟಾಗಿ, ಸ್ಥಳೀಯರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT