ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಕಾರ್ಯ: ತುಮಕೂರು ರಸ್ತೆ ಮೇಲ್ಸೇತುವೆ ಸಂಚಾರಕ್ಕೆ 10 ದಿನ ನಿರ್ಬಂಧ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮುಂದುವರಿದ ದುರಸ್ತಿ ಕಾರ್ಯ
Last Updated 4 ಜನವರಿ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಂತ ವಾಹನ ದಟ್ಟಣೆ ಇರುವ ತುಮಕೂರು ರಸ್ತೆಯ ಎಲಿವೇಟೆಡ್‌ ಕಾರಿಡಾರ್‌ನ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಎರಡು ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ನಲ್ಲಿ ಕಂಡುಬಂದಿರುವ ದೋಷ ಸರಿಪಡಿಸುವ ಕಾಮಗಾರಿ ಮುಂದುವರಿದಿದ್ದು, ಈ ಮೇಲ್ಸೇತುವೆ ಮೇಲೆ ಇನ್ನೂ 10 ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ.

ದುರಸ್ತಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್ಎಐ) ಅಧಿಕಾರಿಗಳ ಮನವಿ ಮೇರೆಗೆ ಮೇಲ್ಸೇತುವೆಯಲ್ಲಿ ಜ.14ರ ತನಕ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಯಶವಂತಪುರ ಸಂಚಾರ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘8ನೇ ಮೈಲಿ ಜಂಕ್ಷನ್‌ನ ಸ್ವಾತಿ ಪೆಟ್ರೋಲ್ ಬಂಕ್ ಮುಂಭಾಗದ 102 ಮತ್ತು 103ನೇ ಕಂಬಗಳ ನಡುವೆ ಸಂಪರ್ಕ ಕಲ್ಪಿಸುವ ಸೆಗ್‌ಮೆಂಟ್‌ಗಳ ಒಳಗೆ ಆರು ಕೇಬಲ್‌ಗಳಿವೆ. ಆ ಕೇಬಲ್‌ಗಳೇ ಕಾಂಕ್ರಿಟ್‌ ಸೆಗ್‌ಮೆಂಟ್‌ಗಳನ್ನು ಜಾರದಂತೆ ಹಿಡಿದಿಟ್ಟಿವೆ. ಒಂದು ಕಂಬದಿಂದ ಇನ್ನೊಂದು ಕಂಬದ ತನಕ ಪ್ರತಿ ಕೇಬಲ್‌ನಲ್ಲೂ 14 ಜೋಡಣೆಗಳಿರುತ್ತವೆ. ಅವುಗಳಲ್ಲಿ ಎರಡು ಕೇಬಲ್‌ಗಳು ಸ್ವಲ್ಪ ಬಾಗಿದಂತೆ ಮತ್ತು ಸಣ್ಣದಾಗಿ ಸವೆದಂತೆ ಕಾಣಿಸುತ್ತಿವೆ. ಅದನ್ನು ಬದಲಿಸುವ ಕಾರ್ಯ ನಡೆಯುತ್ತಿದೆ’ ಎಂದು ಎನ್‌ಎಚ್ಎಐ ಮೂಲಗಳು ತಿಳಿಸಿವೆ.

‘ರಸ್ತೆ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಪರಿಣಿತರನ್ನು ಕರೆಸಿ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ. 102ನೇ ಕಂಬದ ಪಕ್ಕದಲ್ಲಿರುವ ಸೆಗ್‌ಮೆಂಟ್‌ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದ್ದು, ಅದರ ಮೂಲಕ ಮೇಲ್ಸೇತುವೆ ಒಳಗೆ ಪ್ರವೇಶಿಸಿ ಕಾಮಗಾರಿಯನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಸೆಗ್‌ಮೆಂಟ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದರೆ ಸರಿಪಡಿಸಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಆದರೆ, ಅಂತಹ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಅತ್ಯಂತ ಸೂಕ್ಷ್ಮವಾಗಿ ಕಾಮಗಾರಿ ನಿರ್ವಹಿಸಬೇಕಿದೆ. ಆದ್ದರಿಂದ ಇನ್ನೂ 10 ದಿನಗಳ ಕಾಲಾವಕಾಶ ಬೇಕಾಗಲಿದೆ’ ಎಂದು ಹೇಳಿವೆ.

‘ಪ್ರತಿ ಮಳೆಗಾಲದ ಬಳಿಕ ಸಾಮಾನ್ಯವಾಗಿ ಮೇಲ್ಸೇತುವೆ ಸ್ಥಿತಿಗತಿ ಪರಿಶೀಲನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಡೆಸುತ್ತಾರೆ. ಅದರಂತೆ ಜ.25ರಂದು ಪರಿಶೀಲನೆ ನಡೆಸುತ್ತಿದ್ದಾಗ ಈ ದೋಷ ಪತ್ತೆಯಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ನಿರ್ಬಂಧಿಸಿ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ದಟ್ಟಣೆಯಲ್ಲಿ ಸವಾರರ ಪರದಾಟ

ಉತ್ತರ ಭಾಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ನೈಸ್ ರಸ್ತೆ ಜಂಕ್ಷನ್‌ನಿಂದಲೇ ಸರ್ವಿಸ್ ರಸ್ತೆಗೆ ಹೊರಳುವ ವಾಹನಗಳು ಗೊರಗುಂಟೆಪಾಳ್ಯ ಸಿಗ್ನಲ್‌ಗಳನ್ನು ದಾಟಿ ಬರಲು ಗಂಟೆಗಟ್ಟಲೆ ತಿಣುಕಾಡಬೇಕಾದ ಸ್ಥಿತಿ ಇದೆ.

ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಎಂಟನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಜಂಕ್ಷನ್‌ ದಾಟಲು ಸವಾರರು ಪರದಾಡುತ್ತಿದ್ದಾರೆ. ಪ್ರತಿ ಜಂಕ್ಷನ್‌ ದಾಟಲು ಕನಿಷ್ಠ 20 ನಿಮಿಷ ಕಾಲ ಹಿಡಿಯುತ್ತಿದೆ.

ನಗರದಿಂದ ಹೊರ ಹೋಗುವ ವಾಹನಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನಲ್ಲಿ ಕಿಲೋ ಮೀಟರ್ ಉದ್ದದ ಸಾಲಿನಲ್ಲಿ ನಿಲ್ಲುವುದು ಸವಾರರಿಗೆ ಅನಿವಾರ್ಯವಾಗಿದೆ. ಜಾಲಹಳ್ಳಿ ಕ್ರಾಸ್‌ನಿಂದ ದಾಸರಹಳ್ಳಿ ವೃತ್ತದ ತನಕವೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಸಂಚಾರ ದಟ್ಟಣೆ ನಿಭಾಯಿಸಲು ಪೊಲೀಸರೂ ಹರಸಾಹಸ ಮುಂದುವರಿಸಿದ್ದಾರೆ.

ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ವಾಹನ ಸವಾರರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT