ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಫ್‌ ಕ್ಲಬ್‌ನಲ್ಲಿ ಹಳೆಯ ಅಶ್ವಶಾಲೆ: ಹೈಕೋರ್ಟ್‌ಗೆ ವರದಿ ಸಲ್ಲಿಕೆ

Last Updated 6 ಜನವರಿ 2021, 19:18 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ) 50 ವರ್ಷಕ್ಕೂ ಹಳೆಯದಾದ ಅಶ್ವಶಾಲೆಗಳಿವೆ ಎಂದು ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ನೇಮಿಸಿದ್ದ ಅಧಿಕಾರಿಗಳ ತಂಡ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

2020ರ ನವೆಂಬರ್ 28 ಮತ್ತು 29ರಂದು ಕ್ಲಬ್‌ಗೆ ಭೇಟಿ ನೀಡಿದ್ದ ಕ್ಯಾಪ್ಟನ್ ರವಿ ರಾಯದುರ್ಗ ನೇತೃತ್ವದ ತಂಡ, ‘ಶೇ 80ರಷ್ಟು ಅಶ್ವಶಾಲೆಗಳ ಪರಿಸ್ಥಿತಿ ಇದೇ ರೀತಿ ಇದೆ. ಹೊಸದಾಗಿ ಅಶ್ವಶಾಲೆಗಳನ್ನು ತೆರೆಯುವ ತುರ್ತು ಇದೆ’ ಎಂದು ವರದಿ ನೀಡಿದೆ. ಈ ಸಂಬಂಧ ನಿಲುವು ಸ್ಪಷ್ಟಪಡಿಸುವಂತೆ ಟರ್ಫ್‌ ಕ್ಲಬ್ ಮತ್ತು ಎಡಬ್ಲ್ಯುಬಿಐಗೆ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿತು.

‘ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸುವುದರಿಂದ ಪ್ರಯೋಜನ ಆಗುವುದಿಲ್ಲ. ಆತ್ಯಾಧುನಿಕ ಶೈಲಿಯ ರಂಗಮಂದಿರ ರೀತಿಯ ಕಟ್ಟಡ ನಿರ್ಮಾಣದ ಅಗತ್ಯವಿದೆ. ಟ್ರ್ಯಾಕ್ ನಿರ್ವಹಣೆ ಮತ್ತು ಕುದುರೆಗಳಿಗೆ ನೀಡುತ್ತಿರುವ ಚಿಕಿತ್ಸೆ ತೃಪ್ತಿಕರವಾಗಿದೆ’ ಎಂದು ವರದಿ ಹೇಳಿದೆ.

‘ಕುದುರೆಗಳ ಓಟಕ್ಕೆ ಏಳು ಗಂಟೆಗಳ ಮೊದಲೇ ಆಹಾರ ಮತ್ತು ನೀರು ನೀಡುವುದನ್ನು ನಿಲ್ಲಿಸಲಾಗುತ್ತಿದೆ. ಚಾವಟಿಯಲ್ಲಿ ಹೊಡೆಯಲಾಗುತ್ತದೆ ಎಂಬ ಅರ್ಜಿದಾರರ ಆರೋಪಗಳಿಗೆ ಪುರಾವೆಗಳಿಲ್ಲ’ ಎಂದು ವರದಿ ಸ್ಪಷ್ಟಪಡಿಸಿದೆ.

‘ಕುದುರೆಗಳು ರೇಸ್‌ನಲ್ಲಿ ಓಡುವ ವಯಸ್ಸು ಮುಗಿದ ಬಳಿಕ ಅವುಗಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಅರ್ಜಿದಾರರು ಎತ್ತಿರುವ ಪ್ರಶ್ನೆಗಳಿಗೆ ಪಶುಸಂಗೋಪನಾ ಇಲಾಖೆ ಮತ್ತು ಎಡಬ್ಲ್ಯುಬಿಐ ನಿರ್ದೇಶನಗಳನ್ನು ನೀಡಬೇಕಾಗುತ್ತದೆ’ ಎಂದು ವರದಿ ತಿಳಿಸಿದೆ.

ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಂಪಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಸಿಯುಪಿಎ), ‘ಟರ್ಫ್‌ ಕ್ಲಬ್‌ನಲ್ಲಿ ಕುದುರೆಗಳಿಗೆ ಸೌಲಭ್ಯದ ಕೊರತೆ ಇದೆ. ದೋಷಯುತ ಔಷಧಿಗಳನ್ನು ನೀಡಲಾಗುತ್ತಿದೆ. ಈ ಕಾರಣದಿಂದ ಕುದುರೆಗಳು ಸಂವೇದನಾ ಗ್ರಂಥಿಗಳನ್ನು ಕಳೆದುಕೊಂಡಿವೆ’ ಎಂದು ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT