ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ATM ಪಿನ್‌ ಬದಲಾವಣೆಗೆ ಸಹಾಯದ ನೆಪದಲ್ಲಿ ವಂಚನೆ: ಬಿಹಾರದ ಇಬ್ಬರ ಬಂಧನ

ಆರೋಪಿಗಳಿಂದ 37 ಎಟಿಎಂ ಕಾರ್ಡ್‌ ಜಪ್ತಿ
Published 7 ಆಗಸ್ಟ್ 2024, 15:31 IST
Last Updated 7 ಆಗಸ್ಟ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಕಾರ್ಡ್‌ನ ಪಿನ್​ ನಂಬರ್ ಬದಲಾಯಿಸಲು ಸಹಾಯ ಮಾಡುವ ನೆಪದಲ್ಲಿ ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ನಗದು ಡ್ರಾ ಮಾಡಿಕೊಂಡು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಚುನಿಲಾಲ್ ಕುಮಾರ್ ಹಾಗೂ ವಿವೇಕ್ ಕುಮಾರ್ ಬಂಧಿತ ಆರೋಪಿಗಳು.

‘ಬಂಧಿತರಿಂದ ವಿವಿಧ ಬ್ಯಾಂಕ್‌ಗಳ ‌ನಿಷ್ಕ್ರಿಯಗೊಂಡಿರುವ 37 ಎಟಿಎಂ ಕಾರ್ಡ್‌ ಹಾಗೂ ₹7,500 ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಬ್ಬರೂ ಗಾರೆ ಕೆಲಸ‌ ಮಾಡಿಕೊಂಡಿದ್ದರು. ಬಳಿಕ ವಂಚನೆಗೆ ಇಳಿದಿದ್ದರು. ಎಟಿಎಂ ಕೇಂದ್ರಗಳಿಗೆ ಬರುವ ವೃದ್ಧರನ್ನು ಗುರಿಯಾಗಿಸಿ, ಸಹಾಯ ಮಾಡುವ ನೆಪದಲ್ಲಿ ವಂಚಿಸಿ ಹಣ ಡ್ರಾ ಮಾಡಿಕೊಂಡು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಹೇಗೆ ವಂಚಿಸುತ್ತಿದ್ದರು?: ‘ಜುಲೈ 15ರಂದು ಸಂಜಯ್‌ ಸಿಂಗ್‌ ಅವರು ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಗೆ ₹ 50 ಸಾವಿರ ಜಮೆ ಮಾಡಿದ್ದರು. ನಂತರ, ಬ್ಯಾಂಕ್‌ ಮುಂಭಾಗದಲ್ಲಿದ್ದ ಎಟಿಎಂ ಕೇಂದ್ರಕ್ಕೆ ತೆರಳಿ ಪಿನ್‌ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು. ಅದೇ ವೇಳೆ ಕೇಂದ್ರದ ಒಳಕ್ಕೆ ಬಂದ ಆರೋಪಿಗಳು, ಪಿನ್‌ ಬದಲಾವಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು. ಆರೋಪಿಗಳ ಮಾತು ನಂಬಿದ ಸಂಜಯ್ ಸಿಂಗ್ ತಮ್ಮ ಎಟಿಎಂ ಕಾರ್ಡ್‌ ಅನ್ನು ಅವರಿಗೆ ನೀಡಿದರು. ಆರೋಪಿಗಳು ಕಾರ್ಡ್‌ ಪಡೆದು ಪಿನ್‌ ಬದಲಾವಣೆ ಮಾಡಿದರು. ಅದಾದ ಮೇಲೆ ಬೇರೊಂದು ಎಟಿಎಂ ಕಾರ್ಡ್‌ ಅನ್ನು ಸಂಜಯ್‌ ಅವರಿಗೆ ನೀಡಿದ್ದರು. ಸಂಜಯ್ ಅಲ್ಲಿಂದ ತೆರಳಿದ ಮೇಲೆ ₹75 ಸಾವಿರ ಡ್ರಾ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಹಣ ಕಳೆದುಕೊಂಡಿದ್ದ ವ್ಯಕ್ತಿ ನೀಡಿದ ದೂರು ಆಧರಿಸಿ ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ ವಂಚಕರ ಚಹರೆ ಪತ್ತೆಯಾಗಿತ್ತು.‌ ವಿವಿಧ ಸ್ಥಳಗಳ ಸಿ.ಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇಬ್ಬರು ಬಿಎಂಟಿಸಿ ಬಸ್ ಹತ್ತಿ ಚಿಕ್ಕದಾಸನಪುರ ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಿರುವುದು ಗೊತ್ತಾಗಿತ್ತು‌‌. ಅಲ್ಲಿ ತೆರಳಿ ಪರಿಶೀಲಿಸಿದಾಗ ಆರೋಪಿಗಳು ಬಿಹಾರಕ್ಕೆ ಹೋಗಿರುವುದು ದೃಢಪಟ್ಟಿತ್ತು. ಹಣ ಖಾಲಿಯಾದ ಮೇಲೆ ನಗರಕ್ಕೆ ವಾಪಸ್ ಆಗಿದ್ದ ಆರೋಪಿಗಳು, ಮತ್ತೆ ವಂಚನೆಗೆ ಮುಂದಾಗಿದ್ದರು. ಆಗ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT