ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪ್ರತ್ಯೇಕ ಪ್ರಕರಣ: ಇಬ್ಬರ ಕೊಲೆ

ಮದ್ಯಸೇವನೆ ವಿಚಾರಕ್ಕೆ ಬುದ್ಧಿಮಾತು ಹೇಳಿದ್ದಕ್ಕೆ ವ್ಯಕ್ತಿ ಕೊಲೆ
Published 10 ಏಪ್ರಿಲ್ 2024, 14:36 IST
Last Updated 10 ಏಪ್ರಿಲ್ 2024, 14:36 IST
ಅಕ್ಷರ ಗಾತ್ರ

ಬೆಂಗಳೂರು: ಯುಗಾದಿ ಹಬ್ಬದ ದಿನ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ.

ಮದ್ಯಪಾನ ಮಾಡಬೇಡಿ ಎಂದು ಬುದ್ಧಿಮಾತು ಹೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಯುವಕರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ರಾಮಚಂದ್ರಪುರದ ನಿವಾಸಿ ವೆಂಕಟೇಶ್‌ (45) ಕೊಲೆಯಾದವರು.

‘ಆರೋಪಿಗಳಾದ ರಾಮಚಂದ್ರಪುರದ ಪವನ್‌ ಕುಮಾರ್ (24) ಹಾಗೂ ನಂದ (21) ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಂಗಳವಾರ ರಾತ್ರಿ 10.30ರ ಸುಮಾರಿಗೆ ರಾಮಚಂದ್ರಪುರ ಆಟದ ಮೈದಾನದಲ್ಲಿ ವೆಂಕಟೇಶ್ ಅವರು ವಾಕಿಂಗ್‌ ಮಾಡುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರು ಆರೋಪಿಗಳು ಬಿಯರ್ ಬಾಟಲಿ ಹಿಡಿದು ಮದ್ಯ ಸೇವಿಸುತ್ತಿದ್ದರು. ಇದನ್ನು ಕಂಡ ವೆಂಕಟೇಶ್, ‘ಇನ್ನೂ ನಿಮಗೆ ಚಿಕ್ಕ ವಯಸ್ಸು. ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಬುದ್ಧಿಮಾತು ಹೇಳಿದ್ದರು. ಈ ಮಾತು ಹೇಳಿದ್ದಕ್ಕೆ ಕುಪಿತರಾದ ಆರೋಪಿಗಳಿಬ್ಬರು, ವೆಂಕಟೇಶ್‌ ಜೊತೆಗೆ ಗಲಾಟೆ ಮಾಡಿದರು. ಅದಾದ ಮೇಲೆ ಚಾಕುವಿನಿಂದ ಹೊಟ್ಟೆಭಾಗಕ್ಕೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ –ಕೊಲೆ:

ವೆಂಕಟೇಶ್ವರಪುರದಲ್ಲಿ ಮಂಗಳವಾರ ಭಾವಮೈದುನನ್ನು ಭಾವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕಿರಣ್ ಕುಮಾರ್ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಲಕ್ಷ್ಮಣ್‌ ಎಂದು ಗುರುತಿಸಲಾಗಿದೆ.

‘ಆರೋಪಿ ಲಕ್ಷ್ಮಣ್‌ ಮತ್ತು ಆತನ ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಭಾವ, ಭಾವಮೈದುನರ ನಡುವೆ ಮಂಗಳವಾರ ಸಹ ಗಲಾಟೆ ಆಗಿತ್ತು. ಹಬ್ಬದ ಪ್ರಯುಕ್ತ ವೆಂಕಟೇಶ್ವರಪುರದ ಗಲ್ಲಿಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಆರೋಪಿ, ಕಿರಣ್ ಕುಮಾರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಇಸ್ಪೀಟ್ ಎಲೆಗಳ ಮೇಲಿದ್ದ ಹಣವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಕಿರಣ್ ಕುಮಾರ್ ಬೆನ್ನಿಗೆ ಆರೋಪಿ ಇರಿದಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದ
ನಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT