ಕೋಣನಕುಂಟೆ: ಕಾರ್ಮಿಕರಿಬ್ಬರ ಅನುಮಾನಾಸ್ಪದ ಸಾವು

ಬೆಂಗಳೂರು: ಕೋಣನಕುಂಟೆ ಬಳಿಯ ‘ಪ್ರೆಸ್ಟೀಜ್ ಪಾಲ್ಕನ್ ಸಿಟಿ’ ಅಪಾರ್ಟ್‌ಮೆಂಟ್ ಸಮುಚ್ಚಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ವಹಣೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ಕಾರ್ಮಿಕರಿಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
‘ಹೊಸಕೋಟೆ ಗೊಲ್ಲರಹಟ್ಟಿಯ ರವಿಕುಮಾರ್ ಹಾಗೂ ಒಡಿಶಾದ ದಿಲೀಪ್‌ಕುಮಾರ್ ಜನಾ ಮೃತರು. ಇವರಿಬ್ಬರು ಎಸ್‌ಟಿಪಿ ಬಳಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅದನ್ನು ನೋಡಿದ್ದ ಸಹೋದ್ಯೋಗಿಯೊಬ್ಬರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಅಂಬುಲೆನ್ಸ್ ಸಿಬ್ಬಂದಿ, ಇಬ್ಬರನ್ನೂ ತಪಾಸಣೆ ನಡೆಸಿದಾಗ ಮೃತಪಟ್ಟಿದ್ದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಸಾವಿನ ಬಗ್ಗೆ ರವಿಕುಮಾರ್ ಅವರ ಪತ್ನಿ ದೂರು ನೀಡಿದ್ದಾರೆ. ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಬಯೊ ಸೆಂಟ್ರೊ ಇಂಡಿಯಾ ಕಂಪನಿಯ ಮಾಲೀಕ ಮುಕ್ತಿಯಾರ್ ಅಹಮ್ಮದ್, ಕಂಪನಿಯ ಉಸ್ತುವಾರಿ ಪ್ರಭು, ಫೀಲ್ಡ್ ಆಫೀಸರ್ ರಮೇಶ್, ‘ಪ್ರೆಸ್ಟೀಜ್ ಪಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ಸಮುಚ್ಚಯದ ಮಾಲೀಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು
ಹೇಳಿದರು.
‘ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.
ಸಾವಿನ ಕಾರಣ ನಿಗೂಢ: ‘ಎಸ್‌ಟಿಪಿ ಸುತ್ತಮುತ್ತ ವಿದ್ಯುತ್ ತಂತಿಗಳಿವೆ. ಗುಂಡಿ ಮೇಲ್ಭಾಗದ ಜಾಗದಲ್ಲಿ ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಬ್ಬರು ವಿದ್ಯುತ್ ತಾಗಿ ಮೃತಪಟ್ಟಿರಬಹುದು ಅಥವಾ ಎಸ್‌ಟಿಪಿ ಗುಂಡಿಯಿಂದ ಬಿಡುಗಡೆಯಾದ ವಿಷಾನಿಲ ಸೇವಿಸಿ ಮೃತಪಟ್ಟಿರಬಹುದೆಂಬ ಅನುಮಾನವಿದೆ. ಮರಣೋತ್ತರ ಪರೀಕ್ಷೆ ವರದಿಯಂದಲೇ ನಿಖರ ಕಾರಣ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಸೂಚನೆಯಂತೆ ಕೆಲಸ: ‘ತುಮಕೂರು ಜಿಲ್ಲೆ ಕೊರಟಗೆರೆಯ ರವಿಕುಮಾರ್, ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಪತ್ನಿ ಜೊತೆ ಹೊಸಕೋಟೆ ಗೊಲ್ಲರಹಟ್ಟಿಯಲ್ಲಿ ವಾಸವಿದ್ದರು. ಇನ್ನೊಬ್ಬ ಕಾರ್ಮಿಕ ದಿಲೀಪ್‌ಕುಮಾರ್, ಒಡಿಶಾದಿಂದ ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದರು. ಇವರಿಬ್ಬರು, ಬಯೊ ಸೆಂಟ್ರೊ ಇಂಡಿಯಾ ಕಂಪನಿಯಡಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಪ್ರೆಸ್ಟೀಜ್ ಪಾಲ್ಕನ್ ಸಿಟಿ’ ಅಪಾರ್ಟ್‌ಮೆಂಟ್ ಸಮುಚ್ಚಯದ ಎಸ್‌ಟಿಪಿ ನಿರ್ವಹಣೆ ಜವಾಬ್ದಾರಿಯನ್ನು ಬಯೊ ಸೆಂಟ್ರೊ ಇಂಡಿಯಾ ಕಂಪನಿ ವಹಿಸಿಕೊಂಡಿತ್ತು. ಉಸ್ತುವಾರಿ ಹಾಗೂ ಕ್ಷೇತ್ರ ಅಧಿಕಾರಿ ಸೂಚನೆಯಂತೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಬಂದಿದ್ದ ರವಿಕುಮಾರ್ ಹಾಗೂ ದಿಲೀಪ್‌ಕುಮಾರ್, ಎರಡನೇ ಪಾಳಿಯಲ್ಲಿ ಎಂದಿನಂತೆ ಎಸ್‌ಟಿಪಿ ಬಳಿ ಕೆಲಸದಲ್ಲಿ ತೊಡಗಿದ್ದರು’ ಎಂದು ತಿಳಿಸಿದರು.
‘ರಾತ್ರಿ 8 ಗಂಟೆಗೆ ರವಿಕುಮಾರ್ ಹಾಗೂ ದಿಲೀಪ್‌ಕುಮಾರ್ ಅವರ ಕೆಲಸದ ಪಾಳಿ ಮುಗಿಯುತ್ತಿತ್ತು. ರಾತ್ರಿ ಪಾಳಿ ಕೆಲಸಕ್ಕೆ ಬಂದಿದ್ದ ಸಹೋದ್ಯೋಗಿ, ಎಸ್‌ಟಿಪಿ ಗುಂಡಿ ಬಳಿ ಹೋಗಿದ್ದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಇಬ್ಬರನ್ನೂ ಗಮನಿಸಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ರಾತ್ರಿಯಾದರೂ ಪತಿ ಮನೆಗೆ ಬಾರದಿದ್ದರಿಂದ ಪತ್ನಿ, ಫೀಲ್ಡ್ ಆಫೀಸರ್ ರಮೇಶ್‌ಗೆ ಕರೆ ಮಾಡಿದ್ದರು. ಅವಾಗಲೇ ಕಾರ್ಮಿಕರು ಮೃತಪಟ್ಟಿದ್ದ ಸಂಗತಿ ಗೊತ್ತಾಗಿದೆ’ ಎಂದರು.
ಎಸ್‌ಟಿಪಿ ಬಳಿ ಕೆಟ್ಟ ವಾಸನೆ: ‘ಮಾಹಿತಿ ಬರುತ್ತಿದ್ದಂತೆ ಎಸ್‌ಟಿಪಿ ಬಳಿ ಹೋಗಿ ಪರಿಶೀಲನೆ ನಡೆಸಲಾಯಿತು. ಘಟಕದ ಬಳಿ ಕೆಟ್ಟ ವಾಸನೆ ಬರುತ್ತಿತ್ತು. ಆದರೆ, ಇದಕ್ಕೆ ಕಾರಣವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.