ಭಾನುವಾರ, ನವೆಂಬರ್ 28, 2021
19 °C

ದೆಹಲಿ ಹೋರಾಟದಿಂದ ಶ್ರಮಿಕ ವರ್ಗಗಳಲ್ಲಿ ಐಕ್ಯತೆ: ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೋದಿ ಸರ್ಕಾರದ ವಿರೋಧಿ ನೀತಿಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಶ್ರಮಿಕ ವರ್ಗಗಳಾದ ಕೈಗಾರಿಕಾ ಮತ್ತು ಕೃಷಿ ಕಾರ್ಮಿಕರಲ್ಲಿ ಐಕ್ಯತೆ ಮೂಡಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎಂ.ಎ.ಬೇಬಿ ಅಭಿ‍ಪ್ರಾಯಪಟ್ಟರು.

ಜನಶಕ್ತಿ ಪ್ರಕಾಶನವು ಆನ್‌ಲೈನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಹೋರಾಟಗಳ ನೂರು ವರುಷಗಳು’ ಹಾಗೂ ‘ಭಾರತದಲ್ಲಿ ಕಮ್ಯುನಿಸ್ಟ್‌ ಪಕ್ಷ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಲವೇ ದಿನಗಳಲ್ಲಿ ರೈತರ ಚಳವಳಿ 365 ದಿನಗಳನ್ನು ಪೂರ್ಣಗೊಳಿಸಲಿದೆ. ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರಲ್ಲಿ ಐಕ್ಯತೆ ಮೂಡಿರುವುದು ಉತ್ತಮ ಬೆಳವಣಿಗೆ. ದೇಶದಲ್ಲಿ ಆರ್ಥಿಕ ನೀತಿಗಳ ಮುಖಾಂತರ ದಾಳಿಗಳು ನಡೆಯುತ್ತಿದ್ದು, ಶ್ರಮಿಕ ವರ್ಗಗಳು ಒಗ್ಗೂಡಿ ಇವುಗಳನ್ನು ವಿರೋಧಿಸಬೇಕು’ ಎಂದರು.

‘ದೇಶದಲ್ಲಿ ಕೋಮುವಾದಿ ಶಕ್ತಿಗಳು ತೀವ್ರಗೊಳ್ಳುತ್ತಿದ್ದು, ಜನರ ಎಲ್ಲ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಚಳವಳಿಗೆ ದಾರಿ ತೋರಲು ಹಾಗೂ ಇತಿಹಾಸದ ಚಳವಳಿಗಳನ್ನು ನೆನಪಿಸಲು ಈ ಪುಸ್ತಕಗಳು ಪೂರಕವಾಗಿವೆ’ ಎಂದು ಹೇಳಿದರು. 

ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್,‘ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷ ಪುಸ್ತಕವು ಅಂದಿನ ಹೋರಾಟವನ್ನು ವಿಶ್ಲೇಷಿಸುತ್ತಾ ಸಾಗುವುದರಿಂದ ಭವಿಷ್ಯದಲ್ಲಿ ಚಳವಳಿ ಆರಂಭಿಸುವವರಿಗೆ, ಸಮ–ಸಮಾಜ ನಿರ್ಮಾಣದ ತುಡಿತ ಇರುವವರಿಗೆ ಪ್ರೇರಣೆಯಾಗಲಿದೆ’ ಎಂದರು.

ಸಿಪಿಎಂ ಮುಖಂಡ ಸುನಿಲ್‌ ಕುಮಾರ್ ಬಜಾಲ್,  ಟಿ.ಸುರೇಂದ್ರರಾವ್, ಗುರುರಾಜ್ ದೇಸಾಯಿ, ಎನ್.ಕೆ.ವಸಂತ ರಾಜ್ ಹಾಗೂ ಇತರರು ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು