ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಹಳ್ಳಿ: ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ಕನ್ನ

Published 12 ಏಪ್ರಿಲ್ 2024, 16:10 IST
Last Updated 12 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರಹಳ್ಳಿಯ ಬಿಎಚ್‌ಸಿಎಸ್‌ ಲೇಔಟ್‌ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ರೌಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ರಾಜಗೋಪಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಣಿ ಅಲಿಯಾಸ್ ಕಳ್ಳ ಮಣಿ, ದೀಕ್ಷಿತ್, ಕೀರ್ತಿ ಹಾಗೂ ಅಜಯ್ ಅಲಿಯಾಸ್ ಕ್ಯಾಟು ಬಂಧಿತ ಆರೋಪಿಗಳು.

ಬಂಧಿತರಿಂದ ₹28.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಣ ಹಾಗೂ ₹50 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಲಗ್ಗೆರೆ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ಸಿಬ್ಬಂದಿ ಗಸ್ತಿನಲ್ಲಿದ್ದರು. ಅದೇ ರಸ್ತೆಯಲ್ಲಿದ್ದ ಚಿನ್ನಾಭರಣ ಮಳಿಗೆ ಎದುರು ಇಬ್ಬರು ಅನುಮಾನಸ್ಪದ ರೀತಿಯಲ್ಲಿ ಓಡಾಟ ನಡೆಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ, ಚಿನ್ನದ ಆಭರಣಗಳು ಇರುವುದು ಪತ್ತೆಯಾಗಿತ್ತು. ನಂತರ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಮೂವರ ಬಂಧನ

ಸಂಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನರಸಿಂಹರೆಡ್ಡಿ, ಕಾರ್ತಿಕ್ ಹಾಗೂ ನರಸಿಂಹ ಬಂಧಿತ ಆರೋಪಿಗಳು. ಬಂಧಿತರಿಂದ ₹10 ಲಕ್ಷ ಮೌಲ್ಯದ 151 ಗ್ರಾಂ ಚಿನ್ನಾಭರಣ, ಒಂದು ಬೈಕ್‌ ಜಪ್ತಿ ಮಾಡಿಕೊಳ್ಳಲಾಗಿದೆ.

‘ಮಾರ್ಚ್ 30ರಂದು ಸಂಜಯನಗರ ವ್ಯಾಪ್ತಿಯ ಡಾಲರ್ಸ್ ಕಾಲೊನಿ 3ನೇ ಮುಖ್ಯರಸ್ತೆಯಲ್ಲಿ ಮನೆಯೊಂದರ ಬಾಗಿಲಿನ ಲಾಕ್ ಒಡೆದಿದ್ದ ಆರೋಪಿಗಳು ಅಲ್ಮೇರಾದಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದರು. ನೆಲಮಂಗಲದ ಗುಡೇಮಾರನಹಳ್ಳಿ ಬಳಿ ಮೂವರನ್ನು ಬಂಧಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಬಂಧಿತರ ಪೈಕಿ ಒಬ್ಬಾತ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ. 2012ರಿಂದಲೂ ಈತ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ವಿಜಯನಗರ, ಬ್ಯಾಟರಾಯನಪುರ, ಗಿರಿನಗರ, ರಾಜರಾಜೇಶ್ವರಿನಗರ, ಸಿ.ಕೆ. ಅಚ್ಚುಕಟ್ಟು, ಕೆಂಗೇರಿ, ಸುಬ್ರಮಣ್ಯಪುರ, ಮೈಕೋ ಲೇಔಟ್, ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆಗೆ ಸಂಚು, ಕೊಲೆ ಯತ್ನ, ದೊಂಬಿ, ಸುಲಿಗೆ, ಕೊಲೆ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ. ಈತನ ವಿರುದ್ಧ ಒಟ್ಟು 36 ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT