ಭಾನುವಾರ, ಏಪ್ರಿಲ್ 2, 2023
33 °C
ನಗರದಲ್ಲಿ ವೈಕುಂಠ ಏಕಾದಶಿ ಸಂಭ್ರಮ * ವಿಷ್ಣು ದೇವಾಲಯಗಳಲ್ಲಿ ಭಕ್ತಸಾಗರ

ವೈಕುಂಠದ ಬಾಗಿಲಲ್ಲಿ ಭಗವಂತನ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ನಗರದ ವಿಷ್ಣು ದೇವಾಲಯಗಳಲ್ಲಿ ಮತ್ತು ಇಸ್ಕಾನ್‌ನಲ್ಲಿ ಸೋಮವಾರ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿತ್ತು. ಸೋಮವಾರ ಬೆಳಗಿನ ಜಾವದಿಂದ ರಾತ್ರಿಯವರೆಗೂ ದೇಗುಲಗಳು ಭಕ್ತರಿಂದ ತುಂಬಿ ತುಳುಕಿದವು.

ಬಹುತೇಕ ದೇವಾಲಯಗಳಲ್ಲಿ ವಿಶೇಷ ವೈಕುಂಠ ದ್ವಾರವನ್ನು ನಿರ್ಮಿಸಿ ಹೂವು-ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಈ ದ್ವಾರದ ಮೂಲಕ ಸಾಗಿದ ಭಕ್ತರು ಸ್ವಾಮಿಯ ದರ್ಶನ ಪಡೆದು ಮರಳುವಾಗ ತೂಗುಯ್ಯಾಲೆಯಲ್ಲಿದ್ದ ದೇವರ ಮೂರ್ತಿಗಳನ್ನು ತೂಗಿ, ತೀರ್ಥ-ಪ್ರಸಾದ ಸ್ವೀಕರಿಸಿದರು.


ಬನಶಂಕರಿ 3ನೇ ಹಂತದಲ್ಲಿರುವ
ವರಪ್ರದ ವೆಂಕಟೇಶ್ವರ ಸ್ವಾಮಿ ದೇವಾಲಯ

ರಾಜಾಜಿನಗರದ ಇಸ್ಕಾನ್, ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನ, ಕೋಟೆ ವೆಂಕಟರಮಣ ದೇವಾಲಯ, ಜೆ.ಪಿ. ನಗರ 2ನೇ ಹಂತದಲ್ಲಿರುವ ತಿರುಮಲ ಗಿರಿ ದೇವಸ್ಥಾನ, ಸಂಜಯನಗರದ ರಾಧಾಕೃಷ್ಣ ಮಂದಿರ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಿಗೆ ಭಕ್ತರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡಿದ್ರು. ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ರಾಜಾಜಿನಗರದ ಶೇಷ ಶಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಭಿಷೇಕ, ಭಜನೆ, ವೈಕುಂಠ ದ್ವಾರ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬಡಾವಣೆಯ ನಾನಾ ಮಂದಿ ಇಲ್ಲಿಗೆ ಬಂದು ದೇವರ ದರ್ಶನ ಪಡೆದರು. 

ಭಕ್ತರ ಸಾಲು: ಗುಳಕಮಲೆಯ ಶ್ರೀವೀರಾಂಜನೇಯಸ್ವಾಮಿ ಭಕ್ತ ಮಂಡಳಿಯು ವೈಕುಂಠ ಏಕಾದಶಿ ಪ್ರಯುಕ್ತ ನಿರ್ಮಿಸಿದ್ದ ವೈಕುಂಠ ದ್ವಾರದಲ್ಲಿ ಬೆಳಿಗ್ಗೆ 5ರಿಂದ ರಾತ್ರಿ 8ರವರೆಗೆ ಭಕ್ತರು ಸಾಲುಗಟ್ಟಿ ಬಂದು ದೇವರ ದರ್ಶನ ಪಡೆದರು. ಮರಿಯಪ್ಪನಪಾಳ್ಯದ ವಿಘ್ನೇಶ್ವರ ಕಲಾ ಸಂಘವು `ಕುರುಕ್ಷೇತ್ರ /ಧರ್ಮರಾಜ್ಯ ಸ್ಥಾಪನೆ' ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಿತ್ತು.


ಶ್ರೀನಗರದ ವೆಂಕಟರಮಣಸ್ವಾಮಿ ದೇವಸ್ಥಾನ

ಶ್ರೀನಗರದ ವೆಂಕಟರಮಣಸ್ವಾಮಿ ದೇವಸ್ಥಾನ, ಹೊಸಕೆರೆಹಳ್ಳಿಯ ಶ್ರೀ ದುರ್ಗಾ ಹಾಗೂ ಶ್ರೀ ಲಕ್ಷೀ ವೆಂಕಟೇಶ್ವರ ದೇವಾಲಯ, ವಿಶ್ವೇಶ್ವರಪುರಂನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 4:30ರಿಂದ ತಡರಾತ್ರಿ 12ರವರೆಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. 

ಶ್ರೀರಾಮ ಭಜನಾ ಸಭಾದಿಂದ ಭಜನೆ ಹಾಗೂ ಸೃಷ್ಟಿ ಕಲಾ ಕೇಂದ್ರ ಇವರಿಂದ ಭರತನಾಟ್ಯ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಹಾಲಕ್ಷ್ಮೀಪುರದ ಶ್ರೀನಿವಾಸ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. 

ದರ್ಪಣ ಮಂದಿರದ ಆಕರ್ಷಣೆ


ರಾಜಾಜಿನಗರದ ಕೈಲಾಸ ವೈಕುಂಠ ಮಹಾಕ್ಷೇತ್ರ

ಚಾಮರಾಜಪೇಟೆಯ ಕೋಟೆ ದೇವಾಲಯದ ಪ್ರಂಗಣದಲ್ಲಿ ದರ್ಪಣ ಮಂದಿರ (ಗ್ಲಾಸ್‍ ಹೌಸ್) ನಿರ್ಮಿಸಿದ್ದು, ಒಂದೊಂದು ದಿಕ್ಕಿನತ್ತ ನೋಡಿದರೆ ಒಂದೊಂದು ದೇವರುಗಳ ದರ್ಶನ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಹಲವರು ಗಾಜಿನೊಳಗೆ ದೇವರ ಮೂರ್ತಿಗಳನ್ನು ಕಂಡು ಪುನೀತರಾದರು.  

ರಸ್ತೆಯಲ್ಲಿ ಭಕ್ತಸಾಗರ–ಸಂಚಾರ ದುಸ್ತರ 

ಚಳಿಯನ್ನು ಲೆಕ್ಕಿಸದೆ ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಪರಿಣಾಮ ಪ್ರತಿಷ್ಠಿತ ದೇವಸ್ಥಾನಗಳ ಆಸುಪಾಸಿ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲ ರಸ್ತೆಗಳಲ್ಲಿ ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಕೆಲವೆಡೆ ಬ್ಯಾರಿಕೇಡ್‍ಗಳನ್ನು ಹಾಕಿ ವಾಹನ ಸಂಚಾರವನ್ನೇ ‌ನಿಷೇಧಿಸಲಾಗಿತ್ತು. 

ತುಳಸಿ ಮಾಲೆಗೆ ಬೇಡಿಕೆ 


ಶ್ರೀನಗರದ ವೆಂಕಟರಮಣಸ್ವಾಮಿ ದೇವಸ್ಥಾನ

ವೈಕುಂಠ ಏಕಾದಶಿ ಅಂಗವಾಗಿ ವಿಷ್ಣುವಿಗೆ ಪ್ರಿಯವಾದ ತುಳಸಿ ಮಾಲೆಗಳ ಮಾರಾಟ ಮಳಿಗೆಗಳು ಎಲ್ಲಾ ದೇವಸ್ಥಾನಗಳ ಬಳಿಯೂ ಕಂಡುಬಂದವು. ಹೂವು, ಹಣ್ಣು, ಕಾಯಿ ಹಾಗೂ ಇತರೆ ಪೂಜಾ ಸಾಮಗ್ರಿಗಳ ಜತೆಗೆ ತುಳಸಿಗೆ ಹೆಚ್ಚು ಬೇಡಿಕೆಯಿತ್ತು. ದೇವಾಲಯಕ್ಕೆ ಬಂದವರು ಪೂಜಾ ಸಾಮಗ್ರಿಗಳನ್ನು ಖರೀದಿಸದಿದ್ದರೂ ತುಳಸಿ ಮಾಲೆಯನ್ನು ತಪ್ಪದೇ ಖರೀದಿಸುತ್ತಿದ್ದರು. ₹10ರಿಂದ ₹20ರಂತೆ ಮಾಲೆಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಕೆ.ಆರ್. ಮಾರುಕಟ್ಟೆ ಬಳಿಯ ಕೋಟೆ ವೆಂಕಟೇಶ್ವರ ದೇವಸ್ಥಾನಕ್ಕೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ‘16 ವರ್ಷಗಳಿಂದ ವೈಕುಂಠ ಏಕಾದಶಿಯ ದಿನ ತಪ್ಪದೇ ದೇವರ ದರ್ಶನ ಪಡೆಯುತ್ತಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 

ಪ್ರತಿಷ್ಠಾಪನೆ:

ವೈಕುಂಠ ಏಕಾದಶಿ ನಿಮಿತ್ತ ಕಾಚರಕನಹಳ್ಳಿಯ ಎಚ್‌ಬಿಆರ್ ಲೇಔಟ್‌ನಲ್ಲಿ ಸೋಮವಾರ ದಕ್ಷಿಣ ಅಯೋಧ್ಯಾ ದಕ್ಷಿಣ ಕೋದಂಡರಾಮ ಮಂದಿರ, ಕನ್ನಿಕಾ ಪರಮೇಶ್ವರಿ ಹಾಗೂ ಶಿವಾಲಯ ಮಂದಿರದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್‌ ಅಧ್ಯಕ್ಷ ಎಂ.ಎನ್. ರೆಡ್ಡಿ ತಿಳಿಸಿದರು. 

ಇಸ್ಕಾನ್‌ನಲ್ಲಿ ಸಂಭ್ರಮ

ನಗರದ ಇಸ್ಕಾನ್ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಮಾಡಲಾಯಿತು. ದೇವರಿಗೆ ಹಾಲು, ತುಪ್ಪ, ಮೊಸರು, ಹಣ್ಣಿನ ರಸದಿಂದ ವಿಶೇಷ ಅಭಿಷೇಕ ಮಾಡಲಾಯಿತು.

ವೈಕುಂಠ ದ್ವಾರ ನಿರ್ಮಾಣ ಮಾಡಿ, ಅದರ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಹಸ್ರಾರು ಭಕ್ತರು ಇಸ್ಕಾನ್‌ಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದರು.

ಇಸ್ಕಾನ್‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಕೆ.ಗೋಪಾಲಯ್ಯ, ಸೇರಿ ಹಲವು ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು. 

ಲಡ್ಡು, ಸಿಹಿ ಪೊಂಗಲ್‌ ವಿತರಣೆ:  ಇಸ್ಕಾನ್‌ನಲ್ಲಿ ಲಕ್ಷ ಲಡ್ಡುಗಳು ಹಾಗೂ ಎಂಟು ಟನ್‌ ಸಿಹಿ ಪೊಂಗಲ್‌ ವಿತರಿಸಲಾಯಿತು. ರಜೆ ದಿನ ಅಲ್ಲದಿದ್ದರೂ ಹರೇ ಕೃಷ್ಣಗಿರಿಗೆ ಜನಸಾಗರವೇ ಹರಿದು ಬಂದಿತ್ತು. ಮುಖ್ಯ ಮಂದಿರದ ಪ್ರವೇಶದಲ್ಲಿ ಭಕ್ತರು ಸಾಗಲು ವಿಶೇಷ ವೈಕುಂಠ ದ್ವಾರವನ್ನು ನಿರ್ಮಿಸಲಾಗಿತ್ತು.

ಬೆಳಿಗ್ಗೆ ಮತ್ತು ಸಂಜೆ ದೇವರ ಕಲ್ಯಾಣೋತ್ಸವ ನಡೆಯತು. ರುಕ್ಮಿಣಿ ಮತ್ತು ಸತ್ಯಭಾಮೆಯರನ್ನು ಶ್ರೀಕೃಷ್ಣ ವಿವಾಹವಾದ ಧಾರ್ಮಿಕ ವಿಧಿ–ವಿಧಾನಗಳನ್ನು ಆಚರಿಸಲಾಯಿತು.

***

ಪ್ರಧಾನಿ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ ಕರುಣಿಸಲಿ ಮತ್ತು ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ 
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.