‘ಆತ್ಮಹತ್ಯೆಗೂ ಮುನ್ನ ವಿಧಾನಸೌಧದಲ್ಲಿ ದೂರು’
ಅಧೀಕ್ಷಕ ಪಿ. ಚಂದ್ರಶೇಖರ್ ಅವರು ಆತ್ಮಹತ್ಯೆಗೂ ಮುನ್ನ ವಿಧಾನಸೌಧದಲ್ಲಿ ಪ್ರಭಾವಿಯೊಬ್ಬರನ್ನು ಭೇಟಿಯಾಗಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಪಟ್ಟಂತೆ ದೂರು ನೀಡಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ‘ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರ್ ಅವರಿಗೆ ಹಣ ಅಕ್ರಮ ವರ್ಗಾವಣೆ ಬಗ್ಗೆ ತಡವಾಗಿ ಗೊತ್ತಾಗಿತ್ತು. ಈ ಬಗ್ಗೆ ಅವರು ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ (55) ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ (40) ಜೊತೆ ಚರ್ಚಿಸಿದ್ದರು. ಆದರೆ ಪದ್ಮನಾಭ ಹಾಗೂ ಪರಶುರಾಮ್ ಅವರ ಸಹಿ ಹಾಗೂ ಮೊಹರು ಇದ್ದ ಚೆಕ್ ಮೂಲಕವೇ ಹಣ ವರ್ಗಾವಣೆ ಆಗಿದ್ದು ತದನಂತರ ಗೊತ್ತಾಗಿತ್ತು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ‘ಹಣ ಅಕ್ರಮ ವರ್ಗಾವಣೆ ಬಗ್ಗೆ ತಮಗೇನು ಗೊತ್ತಿಲ್ಲದಂತೆ ನಟಿಸಿದ್ದ ಪರಶುರಾಮ್ ‘ಈ ಬಗ್ಗೆ ನಿಗಮದ ಉನ್ನತ ಹುದ್ದೆಯಲ್ಲಿರುವ ಪ್ರಭಾವಿಗೆ ದೂರು ನೀಡೋಣ. ಅವರು ತನಿಖೆ ಮಾಡಿಸುತ್ತಾರೆ. ನಮ್ಮ ಕೆಲಸಕ್ಕೆ ಯಾವುದೇ ಕುತ್ತು ಬರುವುದಿಲ್ಲ’ ಎಂದು ಚಂದ್ರಶೇಖರ್ ಅವರಿಗೆ ಹೇಳಿದ್ದ. ನಂತರ ಚಂದ್ರಶೇಖರ್ ಹಾಗೂ ಪರಶುರಾಮ್ ಅವರು ಪ್ರಭಾವಿಗೆ ಕರೆ ಮಾಡಿ ಭೇಟಿಗೆ ಸಮಯ ಪಡೆದುಕೊಂಡಿದ್ದರು.’ ‘ವಿಧಾನಸೌಧದಲ್ಲಿರುವ ಸಚಿವರೊಬ್ಬರ ಕೊಠಡಿಯಲ್ಲಿ ಇರುವುದಾಗಿ ಹೇಳಿದ್ದ ಪ್ರಭಾವಿ ಮೇ 24ರಂದು ಬೆಳಿಗ್ಗೆ 10.30 ಗಂಟೆಗೆ ಚಂದ್ರಶೇಖರ್ ಹಾಗೂ ಪರಶುರಾಮ್ ಅವರನ್ನು ಕರೆಸಿಕೊಂಡಿದ್ದ. ಮಧ್ಯಾಹ್ನ 12 ಗಂಟೆಯವರೆಗೂ ಇಬ್ಬರೂ ಪ್ರಭಾವಿ ಜೊತೆಗಿದ್ದರು’ ಎಂದು ಮೂಲಗಳು ತಿಳಿಸಿವೆ. ‘ಹಣ ಅಕ್ರಮ ವರ್ಗಾವಣೆ ಸಂಬಂಧ ಪ್ರಭಾವಿಗೆ ದಾಖಲೆಗಳನ್ನು ನೀಡಿದ್ದ ಇಬ್ಬರೂ ‘ನಿಗಮದ ಹಣ ದುರುಪಯೋಗವಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ. ಸೂಕ್ತ ಕಾನೂನು ಕ್ರಮ ಜರುಗಿಸಿ’ ಎಂಬುದಾಗಿ ಕೋರಿದ್ದರು. ದಾಖಲೆ ಪರಿಶೀಲಿಸಿದ್ದ ಪ್ರಭಾವಿ ‘ನಿಗಮದ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು ಅಕ್ರಮ ಮಾಡಿದ್ದೀರಾ. ನಿಮ್ಮ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು. ಅಕ್ರಮದ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಲುಪಿಸುತ್ತೇನೆ’ ಎಂದಿದ್ದರು. ಇದರಿಂದ ಪರುಶುರಾಮ್ ಹಾಗೂ ಚಂದ್ರಶೇಖರ್ ಹೆದರಿದ್ದರು. ಅವರನ್ನು ಹೆದರಿಸಿದ್ದ ಪ್ರಭಾವಿಯನ್ನೂ ವಿಚಾರಣೆ ನಡೆಸಿ ಮಾಹಿತಿ ಪಡೆಯಬೇಕಿದೆ’ ಎಂದು ಮೂಲಗಳು ಹೇಳಿವೆ. ‘ವಿಧಾನಸೌಧದಲ್ಲಿ ಪ್ರಭಾವಿ ಭೇಟಿ ನಂತರ ಚಂದ್ರಶೇಖರ್ ನೊಂದಿದ್ದರು. ಹಣವನ್ನು ಹೇಗಾದರೂ ಮಾಡಿ ಹೊಂದಾಣಿಕೆ ಮಾಡುವಂತೆ ಹಾಗೂ ಸುಳ್ಳು ರಶೀದಿಗಳನ್ನು ಸೃಷ್ಟಿಸಿ ಹಣ ಮಂಜೂರಾತಿ ಮಾಡುವಂತೆ ಚಂದ್ರಶೇಖರ್ ಮೇಲೆ ಒತ್ತಡ ಹೇರಲಾಗಿತ್ತು. ಇದರಿಂದ ಚಂದ್ರಶೇಖರ್ ಅವರು ಮತ್ತಷ್ಟು ಬೇಸತ್ತಿದ್ದರು’ ಎಂದು ತಿಳಿಸಿವೆ.