ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಸಂಭ್ರಮ–ಸಡಗರದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ

ದೇವಾಲಯಗಳಲ್ಲಿ ಸರತಿ ಸಾಲಿನಲ್ಲಿ ದರ್ಶನ ಪಡೆದ ಭಕ್ತರು
Published : 16 ಆಗಸ್ಟ್ 2024, 16:03 IST
Last Updated : 16 ಆಗಸ್ಟ್ 2024, 16:03 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ಮಾರುಕಟ್ಟೆಯಲ್ಲಿ ಒಂದೆಡೆ ಬೆಲೆ ಏರಿಕೆಯ ಬಿಸಿಯಿದ್ದರೂ, ಹೂವಿನ ಬೆಲೆ ಗಗನಕ್ಕೆ ಏರಿದ್ದರೂ, ನಗರದಲ್ಲಿ ಹಬ್ಬದ ಆಚರಣೆಗೆ ಯಾವುದೇ ರೀತಿಯ ಕುಂದುಂಟಾಗಲಿಲ್ಲ. ಮನೆ ಹಾಗೂ ದೇವಾಲಯಗಳಲ್ಲಿ ಹಬ್ಬದ ಸಡಗರ ಇಮ್ಮಡಿಗೊಂಡಿತ್ತು. ಲಕ್ಷ್ಮೀದೇವಿ ಆರಾಧಿಸಿದ ಭಕ್ತರು, ಸಮೃದ್ಧಿ, ಸುಖ–ಶಾಂತಿ ಹಾಗೂ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದರು. 

ಮಹಿಳೆಯರು ಮುಂಜಾನೆಯೇ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಅಂಗಳವನ್ನು ಚಿತ್ತಾಕರ್ಷಕಗೊಳಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು. ‌ಹಲವು ಮಂದಿ ಕಳಸವಿಟ್ಟು ಪೂಜಿಸಿದರೆ, ಮತ್ತೆ ಕೆಲವರು ಕಳಸಕ್ಕೆ ಸೀರೆಯುಡಿಸಿ, ಆಭರಣಗಳನ್ನು ಹಾಕಿ ಭಕ್ತಿಭಾವ ಮೆರೆದರು. ಕೆಲವೆಡೆ ಲಕ್ಷ್ಮಿಯ ಮೊಗವಾಡ ಇರಿಸಿ ಪೂಜಿಸಿದರು. ‌

ಮನೆಯಲ್ಲಿನ ದೇವರ ಕೋಣೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಲಕ್ಷ್ಮಿದೇವಿ ಫೋಟೊ ಎದುರು ಹಣ, ಒಡವೆ, ಸಿಹಿ ತಿಂಡಿ ಹಾಗೂ ವಿವಿಧ ಬಗೆಯ ಹಣ್ಣು–ಹೂವು ಇಟ್ಟು ಪೂಜೆ ಸಲ್ಲಿಸಿದರು. ಕೆಲ ಮನೆಗಳಲ್ಲಿ ಲಕ್ಷ್ಮಿ ಕಳಶ ಪ್ರತಿಷ್ಠಾಪಿಸಿ, ಸೀರೆ ಹಾಗೂ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಆರ್ಥಿಕವಾಗಿ ಸ್ಥಿತಿವಂತರಾದವರ ಮನೆಗಳಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟು ಪೂಜೆ ಮಾಡಿದರೆ, ಬಡ ಹಾಗೂ ಮಧ್ಯಮ ವರ್ಗದ ಜನರು ಹೂವು, ಹಣ್ಣುಗಳಿಂದ ಸಂಪತ್ತಿನ ಅಧಿದೇವತೆಯನ್ನು ಆರಾಧಿಸಿದರು. ಅಕ್ಕಪಕ್ಕದ ಮನೆಗಳ ಮಹಿಳೆಯರನ್ನು ಮನೆಗೆ ಕರೆದು ಅರಿಶಿಣ, ಕುಂಕುಮ, ಬಳೆ, ಹೂವು ಹಾಗೂ ತಾಂಬೂಲ ಕೊಟ್ಟು ಸತ್ಕರಿಸಿದರು.

ಶ್ಯಾವಿಗೆ ಪಾಯಸ, ಅಕ್ಕಿ ಪಾಯಸ, ಒಬ್ಬಟ್ಟು, ಕೋಸಂಬರಿ, ಹಪ್ಪಳ, ತರಕಾರಿ ಪಲ್ಯ ಮತ್ತಿತರ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಮಾಡಿದರು. ವಾಣಿಜ್ಯ ಮಳಿಗೆಗಳು, ಅಂಗಡಿಗಳಲ್ಲಿ ವರಮಹಾಲಕ್ಷ್ಮಿ ಪೂಜೆ ಜೋರಾಗಿತ್ತು. ಬ್ಯಾಂಕುಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ದರ್ಶನ ಪಡೆದ ಭಕ್ತರು: ಹಬ್ಬದ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಹಿಳೆಯರು ಹಾಗೂ ಮಕ್ಕಳು ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ತೆರಳಿ, ದೇವರ ದರ್ಶನ ಪಡೆದರು. ಬನಶಂಕರಿ ದೇವಸ್ಥಾನದಲ್ಲಿ ಭಕ್ತರ ದಂಡು ಸೇರಿತ್ತು.

ಮಹಾಲಕ್ಷ್ಮೀ ಬಡಾವಣೆಯ ಪ್ರಸನ್ನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಹಾಗೂ ಪೂಜೆ  ನೆರವೇರಿಸಲಾಯಿತು. ಶೇಷಾದ್ರಿಪುರ ಹಾಗೂ ಗುಟ್ಟಹಳ್ಳಿಯ ಮಹಾಲಕ್ಷ್ಮೀ ದೇವಾಲಯ, ಮಲ್ಲೇಶ್ವರದ ಮಹಾಲಕ್ಷ್ಮೀ ದೇವಾಲಯ, ಕೋಟೆ ಶಿವ ದೇವಾಲಯ, ಶೃಂಗೇರಿ ಶಂಕರಮಠ ಶಾರದಾಂಬೆ ದೇವಸ್ಥಾನ ಹಾಗೂ ಕೋಟೆ ವೆಂಕಟರಮಣ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬಹುತೇಕ ದೇವಾಲಯಗಳ ಮುಂದೆ ಉದ್ದನೆಯ ಸರತಿ ಸಾಲು ಕಂಡುಬಂದಿತು.

ಸದಾಶಿವ ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು – ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ
ಸದಾಶಿವ ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು – ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT