ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಎಚ್ಚರಿಕೆ ಕಡೆಗಣನೆ: ತರಕಾರಿ ಆವಕ ಹೆಚ್ಚಳ, ಸಗಟು ದರ ಕುಸಿತ

ಚಿಲ್ಲರೆ ಮಾರಾಟ ದರ ದುಪ್ಪಟ್ಟು * ಜನರಿಗೆ ಹೊರೆ
Last Updated 1 ಏಪ್ರಿಲ್ 2020, 20:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದೆಲ್ಲೆಡೆ ಕೆಲ ಚಿಲ್ಲರೆ ವ್ಯಾಪಾರಿಗಳು ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗಷ್ಟೇ ಯಶವಂತಪುರದಿಂದ ದಾಸನಪುರಕ್ಕೆ ಸ್ಥಳಾಂತರಗೊಂಡಿರುವ ಎಪಿಎಂಸಿ ಮಾರುಕಟ್ಟೆ ಹಾಗೂ ಸಿಂಗೇನ ಅಗ್ರಹಾರ ಸಗಟು ಮಾರುಕಟ್ಟೆಗಳಲ್ಲಿ ತರಕಾರಿ ದರಗಳು ಪಾತಾಳಕ್ಕಿಳಿದಿವೆ.

ಏ.2ರಂದು ಶ್ರೀರಾಮನವಮಿ ಹಬ್ಬ ಇರುವ ಕಾರಣ ಮಾರುಕಟ್ಟೆಗೆ ಬುಧವಾರವೇ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಆವಕವಾಗಿದೆ. ಇದರಿಂದ ದರಗಳು ಏಕಾಏಕಿ ಕುಸಿದಿವೆ.

ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಆದರೂ, ಗ್ರಾಹಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಚಿಲ್ಲರೆ ವ್ಯಾಪಾರಿಗಳು ತರಕಾರಿ ದರಗಳನ್ನು ಮನಬಂದಂತೆ ಹೆಚ್ಚಿಸಿ, ಮಾರಾಟ ಮಾಡುತ್ತಿದ್ದಾರೆ. ಮೊದಲಿನಂತೆ ತರಕಾರಿ ಸಿಗದ ಕಾರಣ, ದುಬಾರಿಯಾದರೂ ಗ್ರಾಹಕರು ತರಕಾರಿ ಖರೀದಿಸುತ್ತಿದ್ದಾರೆ.

ದಾಸನಪುರ ಮಾರುಕಟ್ಟೆಗೆ ಬುಧವಾರ 70 ಸಾವಿರ ಚೀಲ ಈರುಳ್ಳಿ ಹಾಗೂ 20 ಸಾವಿರ ಚೀಲ ಆಲೂಗಡ್ಡೆ ಆವಕವಾಗಿದೆ. 125 ಕ್ಕೂ ಹೆಚ್ಚು ಅಧಿಕ ಸರಕು ಸಾಗಣೆ ವಾಹನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತರಕಾರಿಗಳು ಬಂದಿವೆ. ಸಿಂಗೇನ ಅಗ್ರಹಾರ ಸಗಟು ಮಾರುಕಟ್ಟೆಗೆ 20ಕ್ಕೂ ಹೆಚ್ಚು ವಾಹನಗಳಲ್ಲಿ ತರಕಾರಿಗಳು ಆವಕವಾಗಿವೆ.

ಟೊಮೆಟೊ, ಕ್ಯಾರೆಟ್, ಹಸಿಮೆಣಸಿನಕಾಯಿ, ಬೀನ್ಸ್, ಮೂಲಂಗಿ ಸೇರಿ ಇತರ ತರಕಾರಿಗಳು ಕೆ.ಜಿಗೆ ಕನಿಷ್ಠ ₹5ರಿಂದ ಗರಿಷ್ಠ ₹20ರಂತೆ ದಾಸನಪುರ ಮಾರುಕಟ್ಟೆಯಲ್ಲಿ ಬುಧವಾರ ಮಾರಾಟವಾಗಿವೆ. ಸೌತೆಕಾಯಿ ಪ್ರತಿ ಕೆ.ಜಿ.ಗೆ ₹10, ಕರ್ಬೂಜ ಕೆ.ಜಿ ಗೆ ₹10ರಂತೆ ಮಾರಾಟವಾಯಿತು. ನಿಂಬೆಹಣ್ಣು ಒಂದಕ್ಕೆ ₹2ರಂತೆ ಮಾರಾಟವಾಗಿದೆ.

ನಾಗರ ಹಾವು ಪ್ರತ್ಯಕ್ಷ
ಮಾರುಕಟ್ಟೆಯಲ್ಲಿ ಬುಧವಾರ ಬೆಳಿಗ್ಗೆ ನಾಗರಹಾವೊಂದು ಪ್ರತ್ಯಕ್ಷವಾಯಿತು. ಗ್ರಾಹಕರೊಬ್ಬರ ಕಾರಿನ ಎಂಜಿನ್ ಬಾನೆಟ್ ಒಳಗೆ ಸೇರಿಕೊಂಡು, ಕೆಲಕಾಲ ಅಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು.

ಹಾವಾಡಿಗನ ಸಹಾಯದಿಂದ ಹಾವನ್ನು ಸೆರೆಹಿಡಿದು ಸುರಕ್ಷಿತ ಜಾಗಕ್ಕೆಬಿಡಲಾಯಿತು.

‘ವ್ಯಾಪಾರ ನಡೆಸಲು ವರ್ತಕರಿಗೆ ಇಲ್ಲಿ ಸುರಕ್ಷತಾ ವಾತಾವರಣವಿಲ್ಲ. ದಯವಿಟ್ಟು ನಗರದ ಒಳಭಾಗದಲ್ಲೇ ವ್ಯಾಪಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಕಲಾಸಿಪಾಳ್ಯ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಮನವಿ ಮಾಡಿದರು.

ತರಕಾರಿ ದರ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)
ಟೊಮೆಟೊ: 5
ಕ್ಯಾರೆಟ್: 10
ಕ್ಯಾಪ್ಸಿಕಂ: 5
ಹಸಿಮೆಣಸಿನಕಾಯಿ: 10
ಗೆಡ್ಡೆಕೋಸು: 6
ಮೂಲಂಗಿ: 5
ಬಜ್ಜಿ ಮೆಣಸಿನಕಾಯಿ: 10
ಈರುಳ್ಳಿ: 14-20
ಆಲೂಗಡ್ಡೆ: 16-24
ಕೊತ್ತಂಬರಿ: 5 (ಪ್ರತಿ ಕಟ್ಟಿಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT