ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀನ್ಸ್‌ ಕೆ.ಜಿ.ಗೆ ₹160, ಕೊತ್ತಂಬರಿ ಕಂತೆಗೆ ₹70!

ಇತ್ತೀಚೆಗೆ ಸುರಿದ ಮಳೆಯಿಂದಾಗಿ ತರಕಾರಿ, ಸೊಪ್ಪಿನ ಬೆಳೆಗೆ ಹಾನಿ
Published 30 ಮೇ 2024, 23:21 IST
Last Updated 30 ಮೇ 2024, 23:21 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚಿಗೆ ಸುರಿದ ಮಳೆಗೆ ಸೊಪ್ಪು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಇದರ ಪರಿಣಾಮ ಮೊದಲೇ ಏರು ಹಾದಿಯಲ್ಲಿದ್ದ ಬೀನ್ಸ್‌ ದರ ಮತ್ತಷ್ಟು ಹೆಚ್ಚಾಗಿದ್ದು, ಕೆ.ಜಿಗೆ ₹160ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ ಒಂದು ಕಂತೆ ₹70ರಂತೆ ಬಿಕರಿಯಾಗುತ್ತಿದೆ.

ಮಳೆಯ ಕಾರಣಕ್ಕೆ ಸೊಪ್ಪಿನ ಬೆಲೆ ಏರಿಕೆಯಾಗಿದೆ. ಅದರಲ್ಲೂ ನಾಟಿ ಕೊತ್ತಂಬರಿ ಆವಕ ಕಡಿಮೆಯಾಗಿದೆ. ದಪ್ಪನೆಯ ಒಂದು ಕಂತೆಗೆ ₹60–70ರಂತೆ ಮಾರಾಟವಾಗುತ್ತಿದೆ. ಸಬ್ಬಸ್ಸಿಗೆ ಮತ್ತು ಮೆಂತೆ ಪ್ರತಿ ಕಂತೆಗೆ ₹ 50ರಂತೆ ಮಾರಾಟವಾಗುತ್ತಿದೆ. ಪಾಲಾಕ್ ದರದಲ್ಲೂ ಏರಿಕೆ ಕಂಡಿದೆ. ‘ಇನ್ನೂ ಕೆಲವು ದಿನ ಈ ಪರಿಸ್ಥಿತಿ ಮುಂದುವರಿಯಲಿದೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ವ್ಯಾಪಾರಿಗಳು.

ಬಿಸಿಲ ಬೇಗೆಯಿಂದಾಗಿ ಗಗನಮುಖಿಯಾಗಿದ್ದ ತರಕಾರಿ ದರ, ಕೆಲ ದಿನಗಳಿಂದ ಸುರಿದ ಮಳೆಯಿಂದ ಮತ್ತಷ್ಟು ತುಟ್ಟಿಯಾಗಿದೆ. ಬೀನ್ಸ್, ಬಟಾಣಿ, ಹಾಗಲಕಾಯಿ ದರದಲ್ಲಿ ಹೆಚ್ಚಳವಾಗಿದೆ. ಇನ್ನು ಶುಂಠಿ, ಬೆಳ್ಳುಳ್ಳಿ ದರ ದ್ವಿಶತಕ ದಾಟಿದೆ.

ಮಳೆ ಕೊರತೆಯಿಂದಾಗಿ ತರಕಾರಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆ ಆಗುತ್ತಿಲ್ಲ. ತರಕಾರಿ ಮತ್ತು ಸೊಪ್ಪಿನ ಬೆಲೆ ಏರಿಕೆಗೆ ಇದೂ ಒಂದು ಕಾರಣ. ಗ್ರಾಹಕರು ತರಕಾರಿ ದರ ಕೇಳಿ ಖರೀದಿಸಲು ಹಿಂದೇಟು ಹಾಕುವ ಪರಿಸ್ಥಿತಿ ಬಂದಿದೆ.

‘‍ಮಳೆಗಾಲದಲ್ಲಿ ಸೊಪ್ಪುಗಳು ಕೊಳೆಯುತ್ತವೆ. ಹಾಗಾಗಿ, ಪ್ರತಿ ಮಳೆಗಾಲದಲ್ಲೂ ಅವುಗಳ ದರ ಹೆಚ್ಚಾಗುತ್ತದೆ’ ಎಂದು ಸೊಪ್ಪು ಮಾರಾಟ ಮಾಡುವ ಸಂತೋಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬದನೆಕಾಯಿ, ಬೆಂಡೆಕಾಯಿ, ಗೆಡ್ಡೆ ಕೋಸು, ಕ್ಯಾರೆಟ್‌, ಕ್ಯಾಬೇಜ್, ತೊಂಡೆಕಾಯಿ ಪ್ರತಿ ಕೆ.ಜಿಗೆ ಅರ್ಧ ಶತಕದ ಗಡಿ ದಾಟಿವೆ. ಮೆಣಸಿನಕಾಯಿ ಪ್ರತಿ ಕೆ.ಜಿಗೆ ₹120 ರಂತೆ ಮಾರಾಟವಾಗುತ್ತಿದೆ. ಟೊಮೊಟೊ, ಆಲೂಗಡ್ಡೆ, ಈರುಳ್ಳಿ ದರಗಳು ಸ್ಥಿರವಾಗಿವೆ. ಟೊಮೆಟೊ ಕೆ.ಜಿ.ಗೆ ₹30ರಂತೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ಅಜೀಮ್‌ ಮತ್ತು ಮಂಜುನಾಥ್.

‘ಮೊದಲಿನಂತೆ ಅಗತ್ಯ ಪ್ರಮಾಣದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗಲು ಎರಡು ಮೂರು ವಾರದ ಸಮಯ ಬೇಕು. ಅಲ್ಲಿಯವರೆಗೆ ದರ ಏರಿಕೆ ತಪ್ಪಿದ್ದಲ್ಲ’ ಎಂದು ಅವರು ಮಾಹಿತಿ ನೀಡಿದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT