ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆ ಸಂಕೀರ್ಣ: ರಸ್ತೆಯಲ್ಲಿಯೇ ಆಕ್ರಂದನ

ವಸತಿ, ಊಟ ಕಲ್ಪಿಸಲು ರೋಗಿಗಳ ಸಂಬಂಧಿಕರ ಒತ್ತಾಯ l ವಾಹನ ನಿಲುಗಡೆಗೂ ಸೂಕ್ತ ಸ್ಥಳ ಇಲ್ಲ l ದಾಖಲಾತಿ ವಿಳಂಬ ದೂರು
Last Updated 6 ಏಪ್ರಿಲ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗಗಳಲ್ಲೇ ವಿಶ್ರಾಂತಿ. ಊಟ–ತಿಂಡಿಗಾಗಿ ಮಕ್ಕಳು ಮತ್ತು ವೃದ್ಧರೊಂದಿಗೆ ಅಲೆದಾಟ. ತಮ್ಮವರಿಗಾಗಿ ಬಿಸಿಲು–ಮಳೆ ಲೆಕ್ಕಿಸದೆ ಆಸ್ಪತ್ರೆಯ ಆವರಣದಲ್ಲಿಯೇ ವಾಸ...

ಇದು ನಗರದ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಸಂಕೀರ್ಣದಲ್ಲಿ ಕಂಡುಬರುವ ದೃಶ್ಯ.ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ,ಟ್ರಾಮಾ ಕೇರ್ ಕೇಂದ್ರ, ನೆಫ್ರೊ–ಯೂರಾಲಜಿ ಸಂಸ್ಥೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆ ಹಾಗೂಇನ್‌ಸ್ಟಿಟ್ಯೂಟ್‌ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್‌ ಆಸ್ಪತ್ರೆ ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಚಿಕಿತ್ಸೆ ಪಡೆಯಲುಪ್ರತಿನಿತ್ಯ 2 ಸಾವಿರಕ್ಕೂ ಅಧಿಕ ರೋಗಿಗಳು ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ವಿಕ್ಟೋರಿಯಾ ಸಂಕೀರ್ಣದಲ್ಲಿ ರೋಗಿಗಳ ಕಡೆಯವರಿಗೆ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆಯಿಲ್ಲ. ಪಾದಚಾರಿ ಮಾರ್ಗಗಳನ್ನೇ ವಿಶ್ರಾಂತಿ ತಾಣವಾಗಿ ಬಳಸಬೇಕಾದ ಅನಿವಾರ್ಯ ಅವರದು.

ನಗರದಲ್ಲಿ 2020ರ ಮಾರ್ಚ್‌ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾದ ಬಳಿಕ ಅಕ್ಕಪಕ್ಕದ ಆಸ್ಪತ್ರೆಗಳಲ್ಲಿನ ಹಾಸಿಗೆಗಳನ್ನೂ ಕೋವಿಡ್ ಚಿಕಿತ್ಸೆಗೆ ಗುರುತಿಸಲಾಗಿತ್ತು. ಇದರಿಂದಾಗಿ ಕೋವಿಡೇತರ ರೋಗಿಗಳು ಸಮಸ್ಯೆ ಎದುರಿಸಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಅನ್ಯ ಕಾಯಿಲೆಗಳ ಚಿಕಿತ್ಸೆಗೆ ಈಗ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಇಲ್ಲಿಗೆ ರೋಗಿಗಳು ಚಿಕಿತ್ಸೆಗೆ ಬರಲಾರಂಭಿಸಿದ್ದಾರೆ. ರೋಗಿಯ ಕಡೆಯವರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಆಸ್ಪತ್ರೆಗಳ ಆವರಣ ಹಾಗೂ ಪಾರ್ಕಿಂಗ್ ಸ್ಥಳದಲ್ಲಿಯೇ ಬಹುತೇಕರು ಮಲಗುತ್ತಿದ್ದಾರೆ.

ವಿಕ್ಟೋರಿಯಾ ಸಂಕೀರ್ಣದಲ್ಲಿ ವಾಹನಗಳ ನಿಲುಗಡೆಗೂ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ, ಕೆಲವರು ರಸ್ತೆಯ ಅಕ್ಕಪಕ್ಕದಲ್ಲಿಯೇ ವಾಹನ ನಿಲ್ಲಿಸಿ, ತೆರಳುತ್ತಿದ್ದಾರೆ. ಇದರಿಂದಾಗಿರೋಗಿಗಳನ್ನು ಕರೆದೊಯ್ಯುವಾಗ ಅವರ ಸಂಬಂಧಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗ ನಿರ್ಮಿಸಿರುವುದರಿಂದ ಸಂಚಾರದ ಸಮಸ್ಯೆ ದೂರವಾಗಿದೆ. ಉದ್ಯಾನ ಸೇರಿದಂತೆ ವಿವಿಧ ಕಾಮಗಾರಿಗಳು ಬಾಕಿ ಉಳಿದಿವೆ.

ದಾಖಲಾತಿ ವಿಳಂಬ: ‘ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ ದಿನವಿಡೀ ಕಾಯಬೇಕಾಗುತ್ತದೆ. ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಕೂಡಲೆ ದಾಖಲಿಸಿಕೊಳ್ಳುತ್ತಾರೆ. ಸ್ಕ್ಯಾನಿಂಗ್‌ ಸೇರಿದಂತೆವಿವಿಧ ಪರೀಕ್ಷೆಗಳು ವಿಳಂಬವಾಗುತ್ತಿವೆ. ಹೀಗಾಗಿ, ಖಾಸಗಿ ಪ್ರಯೋಗಾಲ
ಯಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ವಾರ್ಡ್‌ಗಳಿಗೆ ಬರುವ ಸಿಬ್ಬಂದಿ ಅನಗತ್ಯವಾಗಿ ರೇಗಾಡುತ್ತಾರೆ. ವೈದ್ಯರು ಉತ್ತಮವಾಗಿ ಚಿಕಿತ್ಸೆ ಒದಗಿಸುತ್ತಿದ್ದಾರೆ’ ಎನ್ನುವುದು ರೋಗಿಗಳ ಅಭಿಮತ.

‌‘ಆಸ್ಪತ್ರೆಗೆ ಸಹೋದರನನ್ನು ದಾಖಲಿಸಿ ಎರಡು ವಾರಗಳಾಗಿವೆ. ರೋಗಿಯ ಜತೆಗೆ ಒಬ್ಬರಿಗೆ ಮಾತ್ರ ಇರಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ರಸ್ತೆಯಲ್ಲಿಯೇ ದಿನ ಕಳೆಯುತ್ತಿದ್ದೇನೆ. ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಊಟ–ತಿಂಡಿಯ ದರ ಕಡಿಮೆ ಇದ್ದರೂ ಗುಣಮಟ್ಟ ಇಲ್ಲ. ಬಿಸಿ ನೀರು ಸಿಗುತ್ತಿಲ್ಲ. ರೋಗಿಗಳ ಕಡೆಯವರಿಗೆ ಉಳಿಯಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು’ ಎಂದು ಅರಸೀಕರೆಯ ರಾಮಕೃಷ್ಣ ಹೇಳಿದರು.

‘ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ರೋಗಿಗಳ ದಟ್ಟಣೆ ಇರುವುದರಿಂದ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದೆ. ₹ 10 ಸಾವಿರದಲ್ಲಿ ಚಿಕಿತ್ಸೆ ದೊರೆತಿದೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ ಇದೇ ಚಿಕಿತ್ಸೆಗೆ ₹ 50 ಸಾವಿರಕ್ಕೂ ಅಧಿಕ ಹಣ ವೆಚ್ಚವಾಗುತ್ತಿತ್ತು’ ಎಂದು ಕೆಂಗೇರಿಯ ಮಂಜುನಾಥ್ ತಿಳಿಸಿದರು.

ಗಡುವು ಮುಗಿದರೂ ಕಾರ್ಯಾರಂಭವಿಲ್ಲ

ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 11 ಮಹಡಿಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಸಾವಿರ ಹಾಸಿಗೆಗಳ ಸೌಕರ್ಯ ಇರಲಿದೆ. 2019ರ ಡಿಸೆಂಬರ್‌ನಲ್ಲಿ ಈ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘2021ರ ಜೂನ್‌ಗೆ ಕಾಮಗಾರಿ ಪೂರ್ಣಗೊಳಿಸಿ, ಸೇವೆ ಆರಂಭಿಸಬೇಕು’ ಎಂದು ಸೂಚಿಸಿದ್ದರು. ಆದರೆ, ಕೋವಿಡ್‌ನಿಂದ ಈ ಕಾಮಗಾರಿಗೆ ಹಿನ್ನಡೆಯಾಗಿದೆ. ₹ 68.53 ಕೋಟಿ ವೆಚ್ಚದಲ್ಲಿ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ. ಸದ್ಯ 7 ಮಹಡಿಗಳ ಕಟ್ಟಡ ತಲೆಯೆತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

1897ರಲ್ಲಿ ಸ್ಥಾಪನೆ

ವಿಕ್ಟೋರಿಯಾ ರಾಣಿಯ 60 ವರ್ಷಗಳ ಆಳ್ವಿಕೆಯ ಸವಿನೆನಪಿಗಾಗಿ 1897ರ ಜೂನ್ 22 ರಂದು ವಿಕ್ಟೋರಿಯಾ ಆಸ್ಪತ್ರೆ ನಿರ್ಮಿಸಲಾಗಿದೆ. ಮೈಸೂರಿನ ಅಂದಿನ ಮಹಾರಾಣಿ ರಾಜಪ್ರತಿನಿಧಿ
ಕೆಂಪನಂಜಮ್ಮಣ್ಣಿ ಅವರು ಇದರ ರೂವಾರಿ. 1900ರ ಡಿಸೆಂಬರ್ 8ರಂದು ಅಂದಿನ ವೈಸ್‌ರಾಯ್ ಲಾರ್ಡ್ ಕರ್ಜನ್ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಗ 140 ಹಾಸಿಗೆಗಳನ್ನು ಈ ಆಸ್ಪತ್ರೆ ಒಳಗೊಂಡಿತ್ತು. ನರವಿಜ್ಞಾನ, ಮನೋವಿಜ್ಞಾನ, ಹೃದ್ರೋಗ ಸೇರಿದಂತೆ ವಿಭಾಗಗಳು ಆಸ್ಪತ್ರೆಯಲ್ಲಿವೆ. ಎಕ್ಸ್‌–ರೆ, ಸಿ.ಟಿ ಸ್ಕ್ಯಾನ್ ಸೇರಿದಂತೆ ವಿವಿಧ ಪರೀಕ್ಷೆಗಳು ಇಲ್ಲಿ ಲಭ್ಯ. ದೇಶದ ಅತೀ ದೊಡ್ಡ ಆಸ್ಪತ್ರೆಗಳಲ್ಲಿ ವಿಕ್ಟೋರಿಯಾ ಕೂಡ ಒಂದು.

‘ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ’

‘ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ರೋಗಿಗಳ ಸಂಬಂಧಿಗಳಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಹಡಿಯಲ್ಲಿಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಬಂದ ಬಳಿಕ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯ ಹಾಸಿಗೆಗಳು ಸಾಕಷ್ಟು ಖಾಲಿ ಇವೆ. ಐಸಿಯು ಹಾಸಿಗೆಗಳು ಭರ್ತಿಯಾದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆಯ ಮಾಹಿತಿ ಪಡೆದು, ಅಲ್ಲಿಗೆ ಅವರನ್ನು ಶಿಫಾರಸು ಮಾಡಲಾಗುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಮೇಶ್ ಕೃಷ್ಣ ತಿಳಿಸಿದರು.

‘ಹೊರ ರೋಗಿಗಳಿಗೆ ಚಿಕಿತ್ಸೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಎಲ್ಲ ವಿಭಾಗಗಳನ್ನುಒಂದೇ ಕಡೆ ತರಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆ ನಿರ್ಮಾಣವಾಗಿದೆ. ಉದ್ಯಾನ ಮತ್ತು ಬೀದಿ ದೀಪ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ’
ಎಂದರು.

ಅಂಕಿ–ಅಂಶಗಳು

530 – ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಸಾಮಾನ್ಯ ಹಾಸಿಗೆಗಳು

12 – ಕಾರ್ಯನಿರ್ವಹಿಸುತ್ತಿರುವ ಐಸಿಯು ಹಾಸಿಗೆಗಳು

15 – ನವೀಕರಣಗೊಳ್ಳುತ್ತಿರುವ ಐಸಿಯು ಹಾಸಿಗೆಗಳು

134 – ಟ್ರಾಮಾ ಕೇರ್ ಕೇಂದ್ರದಲ್ಲಿನ ಸಾಮಾನ್ಯ ಹಾಸಿಗೆಗಳು

36 – ಟ್ರಾಮಾ ಕೇರ್ ಕೇಂದ್ರದಲ್ಲಿನ ಐಸಿಯು ಹಾಸಿಗೆಗಳು

500–600 – ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುವ ಸರಾಸರಿ ಒಳರೋಗಿಗಳು

1,000–1,200 – ವಿಕ್ಟೋರಿಯಾಕ್ಕೆ ದಿನವೊಂದರಲ್ಲಿ ಭೇಟಿ ನೀಡುವ ಹೊರರೋಗಿಗಳ ಸರಾಸರಿ ಸಂಖ್ಯೆ

500 – ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT