ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಂದ್ರ ಹೆಸರಿನಲ್ಲಿ ಪ್ರಶಸ್ತಿ: 25ನೇ ಸಪ್ತಸ್ವರ ಸಂಗೀತ ಸಂಜೆಯಲ್ಲಿ ಹಂಸಲೇಖ

Published 23 ಫೆಬ್ರುವರಿ 2024, 20:37 IST
Last Updated 23 ಫೆಬ್ರುವರಿ 2024, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಗೀತ ಕ್ಷೇತ್ರದ ದಿಗ್ಗಜರಾದ ನಾಗೇಂದ್ರ ಅವರ ಹೆಸರನ್ನು ಚಿರಸ್ಥಾಯಿ ಮಾಡಬೇಕು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ನೆರವು ನೀಡಲಾಗುವುದು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು. 

ವಿಜಯ ಮ್ಯೂಸಿಕ್ ಸ್ಕೂಲ್‌, ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ವರ್ಷದ ಸಪ್ತಸ್ವರ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚಿತ್ರರಂಗದಲ್ಲಿ 45 ವರ್ಷಗಳ ಕಾಲ ಎಂದೆಂದೂ ಕುಗ್ಗದೆ, ಯಾರಿಗೂ ಅಪಚಾರ ಮಾಡದೆ ಬದುಕಿದವರು ರಾಜನ್–ನಾಗೇಂದ್ರ. ಇಷ್ಟು ವರ್ಷಗಳ ಕಾಲ ಚಿತ್ರೋದ್ಯಮದಲ್ಲಿ ಇರುವುದು ತಮಾಷೆಯ ವಿಷಯವಲ್ಲ. ಸುಶ್ರಾವ್ಯ ಗೀತೆಗಳು ಅಂದಾಕ್ಷಣ ರಾಜನ್‌–ನಾಗೇಂದ್ರ ಅವರ ಗೀತೆಗಳೇ ನಮ್ಮ ಕಣ್ಣ ಮುಂದೆ ಬರುತ್ತವೆ. ಭಾರತದ ಸಂಗೀತ ಕ್ಷೇತ್ರದಲ್ಲಿ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಜೋಡಿ ಬಿಟ್ಟರೆ ಈ ಜೋಡಿ ಮಾತ್ರ ಸುದೀರ್ಘ ಕಾಲ ಕೊಡುಗೆ ನೀಡಿತು. ನಾಗೇಂದ್ರ ಅವರನ್ನು ಗೌರವಿಸಿದರೆ ಇಡೀ ಚಿತ್ರರಂಗವನ್ನು ಗೌರವಿಸಿದಂತೆ’ ಎಂದು ಹೇಳಿದರು.  

‘ನಾಗೇಂದ್ರ ಅವರ ಹಾಡುಗಳು ಎಲ್ಲರ ಮನೆ, ಮನಸ್ಸಿನಲ್ಲಿವೆ. ನಾಗೇಂದ್ರ ಅವರ ಸೃಜನಶೀಲ ಕ್ರಿಯೆಗಳಿಂದ ಬಂದಂತಹ ಹಕ್ಕಿನ ಹಣವನ್ನು ಅವರ ಪತ್ನಿ ಜಯಲಕ್ಷ್ಮಿ ನಾಗೇಂದ್ರ ಅವರಿಗೂ ಇಂಡಿಯನ್ ಪರ್ಫಾರ್ಮಿಂಗ್ ರೈಟ್ಸ್ ಸೊಸೈಟಿ ಹಂಚಬೇಕು. ನಾಗೇಂದ್ರ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆಗೆ ವಿಜಯ ಮ್ಯೂಸಿಕ್ ಸ್ಕೂಲ್ ಕ್ರಮವಹಿಸಿದರೆ ಪ್ರಶಸ್ತಿಗೆ ಅಗತ್ಯ ಹಣವನ್ನು ನೀಡುತ್ತೇವೆ’ ಎಂದು ತಿಳಿಸಿದರು. 

ಚಲನಚಿತ್ರ ನಟ ಶಶಿಕುಮಾರ್, ‘ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ. ರಾಜಕೀಯ, ಉದ್ಯಮ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದವರೂ ಒತ್ತಡದಿಂದ ಹೊರ ಬರಲು ಸಂಗೀತದ ಮೊರೆ ಹೋಗುತ್ತಾರೆ. ರಾಜನ್‌–ನಾಗೇಂದ್ರ ಅವರ ಗೀತೆಗಳು ಇಂದಿಗೂ ಸೂಪರ್ ಹಿಟ್’ ಎಂದರು. 

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಚಲನಚಿತ್ರ ನಟಿ ಭವ್ಯ ಅವರು ಸಂಗೀತ ಕ್ಷೇತ್ರಕ್ಕೆ ರಾಜನ್‌–ನಾಗೇಂದ್ರ ಅವರ ಕೊಡುಗೆ ಸ್ಮರಿಸಿದರು. 

ರಾಜನ್–ನಾಗೇಂದ್ರ ಅವರ ಗೀತೆಗಳನ್ನು ವಿವಿಧ ಗಾಯಕರು ಹಾಡಿ, ರಂಜಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT