ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕ್ವಾರಂಟೈನ್: 36 ಮಂದಿ ವಿರುದ್ಧ ಎಫ್‌ಐಆರ್

8 ಸಾವಿರಕ್ಕೂ ಅಧಿಕ ಮಂದಿಯಿಂದ ನಿಯಮ ಉಲ್ಲಂಘನೆ
Last Updated 14 ಜೂನ್ 2020, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಕ್ವಾರಂಟೈನ್‌ನ 14 ದಿನಗಳ‌ ಅವಧಿಯಲ್ಲಿ ಈವರೆಗೆ 8,425 ಮಂದಿ ನಿಯಮ ಉಲ್ಲಂಘಿಸಿ, ಮನೆಯಿಂದ ಹೊರಗಡೆ ಬಂದಿದ್ದಾರೆ. ಅವರಲ್ಲಿ 36 ಮಂದಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರೋಗ್ಯ ಇಲಾಖೆ ರೂಪಿಸಿರುವ ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕು.

ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಉಳಿದವರನ್ನು ಮನೆ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಸೋಂಕು ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕವಾಗಿ ವಾಸಿಸಬೇಕು. ಆದರೆ, ಕೆಲವರು ನಿಯಮ ಗಾಳಿಗೆ ತೂರಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರೆ. ಅಂತಹವರಲ್ಲಿ ಕೆಲವರನ್ನು ಗುರುತಿಸಿ, ಎಚ್ಚರಿಕೆ ನೀಡಲಾಗಿದೆ.

ಜೂ.11ರವರೆಗಿನ ಮಾಹಿತಿ ಪ್ರಕಾರ ಹಾಸನದಲ್ಲಿ ಅತೀ ಹೆಚ್ಚು ಮಂದಿ (1,574) ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ. ಅದೇ ರೀತಿ, ಕಲಬುರ್ಗಿ (1,200), ಬೆಂಗಳೂರು (915) ಹಾಗೂ ಬೀದರ್‌ನಲ್ಲಿ (860) ಅಧಿಕ ಮಂದಿ ನಿಯಮ ಪಾಲಿಸಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪದೇ ಪದೇ ನಿಯಮಗಳನ್ನು ಗಾಳಿಗೆ ತೂರಿದ 818 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 5,349 ಮಂದಿಗೆ ಎಚ್ಚರಿಕೆ ನೀಡಿ, ನಿರ್ದಿಷ್ಟ ಅವಧಿಗೆ ಮನೆಯಲ್ಲಿರಲು ಸೂಚಿಸಲಾಗಿದೆ.

ಕಾನೂನು ಕ್ರಮ: ಮನೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ಮೇಲೆಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮವನ್ನು ಕೈಗೊಳ್ಳಲು ಅವಕಾಶವಿದೆ. ಕಲಬುರ್ಗಿಯಲ್ಲಿ 28 ಮಂದಿ, ದಕ್ಷಿಣ ಕನ್ನಡ ಹಾಗೂ ರಾಯಚೂರಿನಲ್ಲಿ ತಲಾ 3 ಮಂದಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

‘ಮನೆ ಕ್ವಾರಂಟೈನ್‌ಗೆ ಒಳಗಾದವರ ಕೈಗಳಿಗೆ ಮುದ್ರೆಗಳನ್ನು ಹಾಕಲಾಗುತ್ತದೆ. ಅದೇ ರೀತಿ, ಮನೆಯ ಹೊರ ಗೋಡೆಯ ಮೇಲೆ ಭಿತ್ತಿ ಪತ್ರವನ್ನು ಅಂಟಿಸಲಾಗುತ್ತದೆ. ಅವರ ಚಲನವಲನದ ಮೇಲೆ ಅಕ್ಕಪಕ್ಕದ ನಿವಾಸಿಗಳು ನಿಗಾ ಇಡಬೇಕು. ಒಂದು ವೇಳೆ ಅವರು ಮನೆಯಿಂದ ಹೊರಗಡೆ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT