ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರ ಉತ್ತೇಜಿಸಲು ಸ್ವದೇಶಿ ವಸ್ತು ಬಳಸಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಸ್ವದೇಶಿ ಮೇಳಕ್ಕೆ ಚಾಲನೆ: ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
Last Updated 6 ಏಪ್ರಿಲ್ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗೃತ ಮನಸ್ಸುಗಳು ಆರಂಭಿಸಿರುವ ಅಭಿಯಾನದಿಂದಾಗಿ ಜನರು ಸ್ವದೇಶಿ ವಸ್ತು ಬಳಸಲು ಒಲವು ತೋರುತ್ತಿದ್ದಾರೆ. ಇದರಿಂದ, ಸ್ಥಳೀಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಂತಾಗುತ್ತದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

‘ಸ್ವದೇಶಿ ಜಾಗರಣ ಮಂಚ್‌–ಕರ್ನಾಟಕ’ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ (ಶಾಲಿನಿ ಮೈದಾನ) ಆಯೋಜಿಸಿರುವ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡಬೇಕು. ಪಾಶ್ಚಾತ್ಯರ ಅನುಕರಣೆ ಕಡಿಮೆ ಮಾಡಿದರೆ ದೇಶಕ್ಕೆ ಕೊಡುವ ಭಕ್ತಿ ಇದಾಗಲಿದೆ’ ಎಂದು ಸಲಹೆ ನೀಡಿದರು.

‘ಭಾರತ ಈಗ ಸ್ವಾವಲಂಬನೆ ರಾಷ್ಟ್ರವಾಗಿದೆ. ಈ ಹಿಂದೆ ಎಲ್ಲ ವಸ್ತುಗಳಿಗೂ ಇತರ ರಾಷ್ಟ್ರಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇತ್ತು. ಆದರೆ, ಕಾಲ‌ ಬದಲಾದಂತೆ ಜನರಿಗೆ ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಬೆಳೆದು ಸ್ವದೇಶಿ ವಸ್ತುಗಳನ್ನು ಕಡೆಗಣಿಸಿದರು. ಈಗ ಪರಿಸ್ಥಿತಿ ಮತ್ತೆ ಬದಲಾಗುತ್ತಿದೆ. ಸ್ವದೇಶಿ ವಸ್ತುಗಳ ಬಗ್ಗೆ ಅರಿವು ಮೂಡುತ್ತಿದೆ’
ಎಂದರು.

ಮೇಳ ಉದ್ಘಾಟಿಸಿದ ಶಾಸಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಮೇಳದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯ. ಜತೆಗೆ, ಪೂರ್ಣ
ಪ್ರಮಾಣದ ಸ್ವಾಲಂಬನೆ ಸಾಧಿಸುವ ಮೂಲಕ ರಾಷ್ಟ್ರವನ್ನು ಸದೃಢಗೊಳಿಸಬಹುದು’ ಎಂದರು.

ಅರ್ಥಶಾಸ್ತ್ರಜ್ಞ ಪ್ರೊ. ಬಿ. ಕುಮಾರಸ್ವಾಮಿ ಮಾತನಾಡಿ, ‘ದೇಶದಲ್ಲಿ ಕಿರು ಉದ್ಯಮ ವಿಸ್ತಾರವಾದ ಜಾಲವನ್ನು ಹೊಂದಿದೆ. ಕಿರು ಕೈಗಾರಿಕೆಯಲ್ಲಿ ಶೇ 51ರಷ್ಟು ಗ್ರಾಮೀಣ ಹಾಗೂ ಶೇ 49ರಷ್ಟು ನಗರ ಪ್ರದೇಶದಲ್ಲಿವೆ. ಸಣ್ಣ ಉದ್ಯಮದ ಉತ್ಪನ್ನಗಳಲ್ಲಿ ಶೇ 48ರಷ್ಟು ವಿದೇಶಿ ರಫ್ತು ಮಾಡಲಾಗುತ್ತಿದೆ. ಆದರೆ, ನಮ್ಮಲ್ಲಿ ಇಂದಿಗೂ ದೊಡ್ಡ ಕೈಗಾರಿಕೆಯಿಂದಲೇ ಅಭಿವೃದ್ಧಿಯಾಗುತ್ತಿದೆ ಎನ್ನುವ ಭ್ರಮೆಯಲ್ಲಿದ್ದೇವೆ’
ಎಂದರು.

‘ಅಭಿವೃದ್ಧಿಯಲ್ಲಿ‌ ಮುಖ್ಯ ಪಾತ್ರವಹಿಸಿರುವುದು ಕಿರು ಉದ್ಯಮ. ಪಠ್ಯ ಪುಸ್ತಕಗಳಲ್ಲಿಯೂ ಕೇವಲ ಬೃಹತ್‌ ಕೈಗಾರಿಕೆ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಇದರಿಂದಾಗಿ ಯುವಜನರಿಗೆ ಕಿರು ಉದ್ಯಮದ ಬಗ್ಗೆ ಮಾಹಿತಿ ಕೊರತೆಯಿಂದ ದೂರ ಉಳಿದಿದ್ದಾರೆ’ ಎಂದು ವಿವರಿಸಿದರು.

ಸೆಲ್ಕೋ ಕಂಪನಿ ಸಂಸ್ಥಾಪಕ ಹರೀಶ್ ಹಂದೆ ಮಾತನಾಡಿ, ‘ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ತಯಾರು ಮಾಡುವುದಕ್ಕೆ ಸ್ವದೇಶಿ ಅಭಿಯಾನ ಸಹಕಾರಿಯಾಗಿದೆ. ಕೃಷಿ ಜೀವನ ನಡೆಸುವವರಿಗೆ ಹೆಚ್ಚಿನ ಗೌರವ ನೀಡಬೇಕು.
ಕೃಷಿಕರಿಗೆ ಹೆಚ್ಚಿನ ಜ್ಞಾನ ಇರುತ್ತದೆ. ಅವರನ್ನು ಗೌರವಿಸಿ
ಡಾಕ್ಟರೇಟ್ ಪದವಿ ನೀಡುವ ಮೂಲಕ ಹೊಸ ಆಂದೋಲನ ಆರಂಭಿಸಬೇಕು’ ಎಂದು ಹೇಳಿದರು.

ಏಪ್ರಿಲ್‌ 10ರವರೆಗೆ ಸ್ವದೇಶಿ ಮೇಳವು ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT