ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಶುಲ್ಕ ‌ವಸೂಲಿ ವಿರುದ್ಧ ಆಕ್ರೋಶ

ಜಲಮಂಡಳಿ ವಿರುದ್ಧ ಮುಖ್ಯಮಂತ್ರಿಗೆ ಪತ್ರ
Last Updated 15 ಜನವರಿ 2022, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬಳಕೆ ಮಾಡಿದ ನೀರಿನ ಜೊತೆಗೆ ಹೆಚ್ಚುವರಿಯಾಗಿ ಮಾಸಿಕ ಶೇ 50ರಷ್ಟು ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಶುಲ್ಕ ವಸೂಲಿ ಮಾಡುತ್ತಿರುವ ಜಲಮಂಡಳಿ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೇರೋಹಳ್ಳಿ ವಾರ್ಡ್‌ 72ರ ಬಿ.ಟಿ.ಎಸ್‌.ಬಡಾವಣೆ ನಿವಾಸಿಗಳು ಈ ಸಂಬಂಧ ಮುಖ್ಯಮಂತ್ರಿಯವರಿಗೂ ಪತ್ರ ಬರೆದಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್‌ 72 ಕೂಡ ಒಂದು. ನಮ್ಮ ಭಾಗಕ್ಕೆ ಒಂದು ವರ್ಷದ ಹಿಂದೆ ಕಾವೇರಿ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ.ಪ್ರತಿ ತಿಂಗಳ ನೀರಿನ ಬಿಲ್ಲಿನಲ್ಲಿ ಬಳಸಿದ ನೀರಿನ ಜೊತೆಗೆ ಹೆಚ್ಚುವರಿಯಾಗಿ ಶೇ 50ರಷ್ಟು ದರ ವಿಧಿಸಲಾಗುತ್ತಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣಪತ್ರ ತರಬೇಕೆಂದು ತಿಳಿಸುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಅದನ್ನು ಕೊಡಲು ಸಾಧ್ಯವಿಲ್ಲ ಎಂದು ತಿಳಿಸುತ್ತಿದ್ದಾರೆ. ಇದರಿಂದ ನಾವು ಪರಿತಪಿಸುವಂತಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

‘ಮನೆಗಳಿಗೆ ನೀರಿನ ಸಂಪರ್ಕ ಪಡೆದುಕೊಳ್ಳುವಾಗ ಲಕ್ಷಕ್ಕೂ ಅಧಿಕ ಮೊತ್ತ ಠೇವಣಿ ಇರಿಸಿಕೊಂಡಿದ್ದಾರೆ. ಈಗ ಮತ್ತೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

‘ಮಾಸಿಕ ಬಿಲ್‌ನಲ್ಲಿ ಒಳಚರಂಡಿ ವೆಚ್ಚ, ಮೀಟರ್‌ ವೆಚ್ಚ, ಬೋರ್‌ವೆಲ್‌ಗಳ ವೆಚ್ಚವನ್ನು ಸೇರಿಸುತ್ತಿದ್ದಾರೆ. ಇತರೆ ವೆಚ್ಚ ಎಂದು ನಮೂದಿಸಿ ಶೇ 50ರಷ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಪ್ರತಿ ತಿಂಗಳು ₹100ರ ಬದಲು ₹1,500ರಷ್ಟು ಹಣ ಪಾವತಿಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದೇವೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಲ್ಲಿ ಮನವಿ ಮಾಡಿದ್ದೇವೆ’ ಎಂದು ಬಿ.ಟಿ.ಎಸ್‌.ಬಡಾವಣೆ ನಿವಾಸಿ ಎಂ.ಉಮಾನಾಥ ಶಾಸ್ತ್ರಿ ಹೇಳಿದರು.

‘ನೀರಿನ ಬಳಕೆಯ ಪ್ರಮಾಣ ಹೆಚ್ಚಿದಂತೆಲ್ಲಾ ಮೀಟರ್‌ ದರವನ್ನೂ ಜಾಸ್ತಿ ಮಾಡುತ್ತಾರೆ. ಬಿ.ಇ.ಎಲ್‌.ಬಡಾವಣೆ, ಇನ್‌ಕಮ್‌ ಟ್ಯಾಕ್ಸ್‌ ಲೇಔಟ್‌, ಮುನೇಶ್ವರ ಬಡಾವಣೆ ಹೀಗೆ ಎಲ್ಲಾ ಬಡಾವಣೆಗಳ ನಿವಾಸಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಮನೆಗಳಿಗೆ ನೀರಿನ ಸಂಪರ್ಕ ಪಡೆಯುವಂತೆ ಅಧಿಕಾರಿಗಳು ಬಲವಂತಪಡಿಸಿದರು. ಈಗ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬ ಕಾರಣ ಹೇಳಿ ದುಬಾರಿ ದಂಡ ವಿಧಿಸುತ್ತಿದ್ದಾರೆ. ಇದನ್ನು ಮೊದಲೇ ಹೇಳಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT