ಭಾನುವಾರ, ನವೆಂಬರ್ 28, 2021
20 °C
16 ತಿಂಗಳಿಂದ ನಡೆಯುತ್ತಿರುವ ತಡೆಗೋಡೆ, ಮೋರಿ ನಿರ್ಮಾಣ ಕಾಮಗಾರಿ

ಮೈಸೂರು ರಸ್ತೆಯಲ್ಲಿ ಆಮೆಗತಿ ಕಾಮಗಾರಿ; ಬಗೆಹರಿಯದ ಸಮಸ್ಯೆ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಗೇರಿ ಬಳಿ ಕಳೆದ ವರ್ಷ ಕೊಚ್ಚಿ ಹೋಗಿದ್ದ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಮರು ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರ ಪರದಾಟಕ್ಕೆ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣಗಳಿಲ್ಲ.

ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಇರುವ ರಾಜಕಾಲುವೆಯ ತಡೆಗೋಡೆ ‌2020ರ ಜೂನ್ 25ರಂದು ಉಕ್ಕಿದ ವೃಷಭಾವತಿ ರಾಜಕಾಲುವೆ ನೀರಿಗೆ ಕೊಚ್ಚಿ ಹೋಗಿತ್ತು. ಹಳೆಯದಾಗಿದ್ದ ತಡೆಗೋಡೆಯ ಮೇಲೆಯೇ ಹೊಸ ತಡೆಗೋಡೆ ನಿರ್ಮಿಸಲಾಗಿತ್ತು. ಜೋರು ಮಳೆಯಲ್ಲಿ ರಭಸವಾಗಿ ನೀರು ನುಗ್ಗಿದ್ದರಿಂದ ತಡೆಗೋಡೆ ನೀರು ಪಾಲಾಗಿತ್ತು. ಮೈಸೂರು ರಸ್ತೆಗೆ ನೀರು ತುಂಬಿಕೊಂಡು ಮೆಟ್ರೊ ಮಾರ್ಗದ ಪಿಲ್ಲರ್‌ಗೆ ತೊಂದರೆಯಾಗುವ ಆತಂಕ ಎದುರಾಗಿತ್ತು.

ದುಬಾಸಿಪಾಳ್ಯ ಕಡೆಯಿಂದ ಬರುವ ಕಾಲುವೆ ಮೈಸೂರು ರಸ್ತೆಯನ್ನು ಇದೇ ಜಾಗದಲ್ಲಿ ಹಾದು ವೃಷಭಾವತಿ ರಾಜಕಾಲುವೆ ತಲುಪಬೇಕು. ರಸ್ತೆಗೆ ಅಡ್ಡಲಾಗಿ ಒಂದೇ ಒಂದು ಪೈಪ್ ಅಳವಡಿಸಲಾಗಿತ್ತು. ಇಡೀ ಕಾಲುವೆಯ ನೀರು ಅದೇ ಪೈಪ್‌ನಿಂದ ರಾಜಕಾಲುವೆಗೆ ಸೇರಬೇಕಿತ್ತು. ಹೆಚ್ಚಿನ ನೀರು ಬಂದಾಗ ರಸ್ತೆಯ ಮೇಲೆಯೇ ಹರಿಯುತ್ತಿತ್ತು.

ಅದನ್ನು ತಪ್ಪಿಸಲು ಹೊಸದಾಗಿ ತಡೆಗೋಡೆ ಮತ್ತು ದುಬಾಸಿಪಾಳ್ಯ ಕಡೆಯಿಂದ ಬರುವ ಕಾಲುವೆ ನೀರು ಹರಿದು ಹೋಗಲು ರಸ್ತೆಗೆ ಅಡ್ಡಲಾಗಿ ದೊಡ್ಡದಾದ ಬಾಕ್ಸ್ ಮೋರಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳು ಆರಂಭವಾಗಿ ಒಂದು ವರ್ಷ ನಾಲ್ಕು ತಿಂಗಳು ಕಳೆದಿವೆ.

ತಡೆಗೋಡೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ರಸ್ತೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಒಂದು ಬದಿಯಲ್ಲಿ ಮಾತ್ರ ಆರಂಭಿಸಲಾಗಿದ್ದು, ಅದು ಕೂಡ ಪೂರ್ಣಗೊಂಡಿಲ್ಲ. ಒಂದು ಬದಿಯಲ್ಲಿ ಕಾಮಗಾರಿ ಪೂರ್ಣಗೊಂಡರೆ ವಾಹನಗಳ ಸಂಚಾರಕ್ಕೆ ಆ ಭಾಗದಲ್ಲಿ ಅವಕಾಶ ಕಲ್ಪಿಸಿ ಇನ್ನೊಂದು ಭಾಗದಲ್ಲಿ ಸೇತುವೆ ನಿರ್ಮಾಣ ಆಗಬೇಕಿದೆ.

‘ಒಂದು ಭಾಗದ ಕಾಮಗಾರಿ ಮುಗಿಸಲು 16 ತಿಂಗಳು ಕಳೆದರೂ ಸಾಧ್ಯವಾಗಿಲ್ಲ. ಇದು ಪೂರ್ಣಗೊಂಡು ಇನ್ನೊಂದು ಭಾಗದ ಕಾಮಗಾರಿ ಆರಂಭಿಸಿ ಅದನ್ನು ಪೂರ್ಣಗೊಳಿಸಲು ಇನ್ನೂ ಎಷ್ಟು ವರ್ಷ ಬೇಕಿದೆಯೋ’ ಎಂದು ವಾಹನ ಸವಾರರು ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

‘ತಡೆಗೋಡೆ ನಿರ್ಮಾಣ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಒಂದು ಬದಿಯ ಮೋರಿ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅ.31ರೊಳಗೆ ಅವಕಾಶ ಕಲ್ಪಿಸಲು ಸೂಚಿಸಲಾಗಿತ್ತು. ಸತತ ಮಳೆ ಸುರಿಯುತ್ತಿರುವುದರಿಂದ ಗಡುವಿನೊಳಗೆ ಕಾಮಗಾರಿ ಮುಗಿಯುವುದು ಅನುಮಾನ. ಆದರೆ, ಡಿಸೆಂಬರ್ ಅಂತ್ಯದೊಳಗೆ ಎರಡೂ ಬದಿಯ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ವಾಹನ ಸಂಚಾರಕ್ಕೆ ನಿತ್ಯ ತಿಣುಕಾಟ

ಮೈಸೂರು–ಬೆಂಗಳೂರು ರಸ್ತೆ ಎಂದರೆ ಮೊದಲೇ ವಾಹನ ದಟ್ಟಣೆಯ ರಸ್ತೆ. ಮೈಸೂರು ಕಡೆಯಿಂದ ನಗರಕ್ಕೆ ಬರುವ ಮಾರ್ಗದಲ್ಲೇ ಮೈಸೂರು ಕಡೆಗೆ ಹೋಗುವ ಮಾರ್ಗಕ್ಕೂ ಅವಕಾಶ ಕಲ್ಪಿಸಲಾಗಿದೆ. ವಾಹನ ದಟ್ಟಣೆ ಸಂದರ್ಭದಲ್ಲಿ ವಾಹನಗಳು ಗಂಟೆಗಟ್ಟಲೆ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

‘ಏಕಮುಖ ರಸ್ತೆಯಲ್ಲೇ ಎರಡು ಕಡೆಯ ವಾಹನಗಳ ಸಂಚಾರ ಮಾಡಬೇಕಾದ ಇಕ್ಕಟ್ಟನ್ನು ಬಿಬಿಎಂಪಿ ವರ್ಷಗಟ್ಟಲೆಯಿಂದ ಸೃಷ್ಟಿಸಿದೆ. ಪ್ರಮುಖವಾದ ಈ ರಸ್ತೆಯಲ್ಲಿ ಕಾಮಗಾರಿಯನ್ನು ತ್ವರಿತವಾಗಿ ನಡೆಸಬೇಕು ಎಂಬ ಕನಿಷ್ಠ ಜ್ಞಾನವೂ ಪಾಲಿಕೆಗೆ ಇಲ್ಲ’ ಎಂದು ಬೈಕ್ ಸವಾರ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು