ಬೆಂಗಳೂರು: ವೈಯಾಲಿಕಾವಲ್‌ನ ಬಸಪ್ಪ ಗಾರ್ಡನ್ 5ನೇ ಕ್ರಾಸ್‌ನ ಪೈಪ್‌ಲೈನ್ ರಸ್ತೆಯ ಮನೆಯಲ್ಲಿ ನಡೆದಿದ್ದ ಮಹಾಲಕ್ಷ್ಮಿ(29) ಅವರ ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ಕೇಂದ್ರ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು, ನಾಲ್ವರ ಪತ್ತೆಗೆ ಶೋಧ ಚುರುಕುಗೊಳಿಸಿದ್ದಾರೆ.
ತನಿಖಾ ತಂಡಕ್ಕೆ ಕೆಲವು ಸುಳಿವು ಸಿಕ್ಕಿದ್ದು ಆದನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ. ಕುಟುಂಬಸ್ಥರು ಹಾಗೂ ಮಹಾಲಕ್ಷ್ಮಿ ಅವರ ಸ್ನೇಹಿತರಿಂದ ಮಾಹಿತಿ ಕಲೆಹಾಕಿದ್ದಾರೆ. ಮಹಿಳೆಯ ಪ್ರಿಯಕರ ಸೇರಿದಂತೆ ನಾಲ್ವರ ಮೇಲೆ ಕೊಲೆಯ ಶಂಕೆ ಬಲವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಾಲಕ್ಷ್ಮಿ ಅವರ ತಾಯಿ ಮೀನಾ ಚರಣ್‌ಸಿಂಗ್ ಅವರು ನೀಡಿರುವ ದೂರು ಆಧರಿಸಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
‘ಹಂತಕರು ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದರು. ಶನಿವಾರ ಸಂಜೆ ಪರಿಶೀಲನೆ ನಡೆಸಿದಾಗ 30 ತುಂಡಾಗಿ ಕತ್ತರಿಸಲಾಗಿದೆ ಎಂದು ಅಂದಾಜಿಸಲಾಗಿತ್ತು. ಭಾನುವಾರ ನಡೆದ ಮರಣೋತ್ತರ ಪರೀಕ್ಷೆ ವೇಳೆ, 50 ತುಂಡಾಗಿ ಕತ್ತರಿಸಲಾಗಿದೆ ಎಂಬುದು ದೃಢಪಟ್ಟಿದೆ. ಹಂತಕರು ತಲೆಯನ್ನೂ ಮೂರು ಭಾಗವಾಗಿ ಮಾಡಿದ್ದರು. ಮಹಿಳೆಯ ಕಾಲುಗಳನ್ನು ಕತ್ತರಿಸಲಾಗಿತ್ತು. ಕರುಳು, ತಲೆಯ ಕೂದಲು ಸೇರಿದಂತೆ ಇತರೆ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿ ಇಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಎಫ್‌ಐಆರ್‌ನಲ್ಲಿ ಯಾರ ಹೆಸರೂ ಉಲ್ಲೇಖವಾಗಿಲ್ಲ. ಕುಟುಂಬಸ್ಥರು ನಾಲ್ವರ ಮೇಲೆ ಶಂಕೆ ವ್ಯಕ್ತಪಡಿಸಿ, ಮಾಹಿತಿ ನೀಡಿದ್ದಾರೆ. ಕೊಲೆಯಾದ ಮಹಿಳೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಪಡೆಯಲಾಗಿದೆ. ಆಕೆ ಯಾರೊಂದಿಗೆ ಚಾಟಿಂಗ್ ನಡೆಸಿದ್ದರು. ಯಾರಿಗೆಲ್ಲ ಕರೆ ಮಾಡಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಮನೆಯ ಆಸುಪಾಸಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪಡೆಯಲಾಗಿದೆ. ಮಹಿಳೆಯ ಬಳಿ ನಾಲ್ಕು ಸಿಮ್‌ಗಳಿದ್ದವು’ ಎಂದು ಪೊಲೀಸರು ಹೇಳಿದರು.
ಪತಿಯ ವಿಚಾರಣೆ: ‘ಒಂದು ವರ್ಷದಿಂದ ಪತ್ನಿಯಿಂದ ದೂರವಾಗಿ ಪ್ರತ್ಯೇಕವಾಗಿ ನೆಲಮಂಗದಲ್ಲಿಯೇ ವಾಸ ಮಾಡುತ್ತಿದ್ದೇನೆ. ನಾಲ್ಕು ವರ್ಷದ ಹೆಣ್ಣು ಮಗು ನನ್ನ ಜತೆಗಿದೆ. ನನ್ನಿಂದ ಪತ್ನಿ ದೂರವಾದ ಮೇಲೆ ಉತ್ತರಾಖಂಡದ ವ್ಯಕ್ತಿಯ ಜತೆಗೆ ಮಹಾಲಕ್ಷ್ಮಿ ಸಲುಗೆಯಿಂದ ಇದ್ದರು. ಅವರು ಕೆಲಸ ಮಾಡುತ್ತಿದ್ದ ಮಾಲ್‌ನ ಗಾರ್ಮೆಂಟ್ಸ್ ಸೇಲ್ಸ್ ವಿಭಾಗದಲ್ಲಿ ಆತ ಸಹ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ ನೆಲಮಂಗಲ ಠಾಣೆಗೆ ದೂರ ಸಹ ನೀಡಿದ್ದೆ’ ಎಂದು ಮಹಾಲಕ್ಷ್ಮಿ ಅವರ ಪತಿ ಹೇಮಂತ್ ದಾಸ್ ಅವರು ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.
‘ಮಹಾಲಕ್ಷ್ಮಿ ಕುಟುಂಬವು 35 ವರ್ಷಗಳಿಂದ ನೆಲಮಂಗಲದಲ್ಲಿ ವಾಸವಿದೆ. ಐದು ವರ್ಷಗಳ ಹಿಂದೆ ಮಹಾಲಕ್ಷ್ಮಿ ಅವರನ್ನು ಮದುವೆ ಆಗಿದ್ದೆ. ಅವರು ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಂಬತ್ತು ತಿಂಗಳ ಹಿಂದೆ ನನ್ನಿಂದ ಬೇರೆ ಆಗಿದ್ದರು’ ಎಂದೂ ದಾಸ್ ತಿಳಿಸಿದ್ದಾರೆ.
ಇನ್ನು ಪತಿಯೂ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆಗ ಮಹಾಲಕ್ಷ್ಮಿ ಅವರನ್ನು ನೆಲಮಂಗಲ ಠಾಣೆ ಪೊಲೀಸರು ಕರೆಸಿ ವಿಚಾರಣೆ ನಡೆಸಿ ಬುದ್ಧಿಮಾತು ಹೇಳಿ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಈ ಸಂಬಂಧ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಾಗಿತ್ತು.
ಮೆನ್ಸ್ ಪಾರ್ಲರ್ ಕೆಲಸಗಾರ ನಾಪತ್ತೆ: ‘ಮೆನ್ಸ್ ಪಾರ್ಲರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಜತೆಗೂ ಮಹಾಲಕ್ಷ್ಮಿ ಸಲುಗೆ ಮತ್ತು ಆತ್ಮೀಯತೆ ಹೊಂದಿದ್ದರು. ಆದರೆ, ಕೆಲವು ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಹೀಗಾಗಿ, ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಆತ ಸಹ ಸೆಪ್ಟೆಂಬರ್ ಮೊದಲ ವಾರದಿಂದ ನಾಪತ್ತೆ ಆಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಎರಡು ತಾಸು ನಡೆದ ಮರಣೋತ್ತರ ಪರೀಕ್ಷೆ
ಮಹಾಲಕ್ಷ್ಮಿ ಅವರನ್ನು ನೆನಪಿಸಿಕೊಂಡು ತಾಯಿ ಆಕೆಯ ಸಹೋದರಿ ಹಾಗೂ ಸಹೋದರರು ಶವಾಗಾರದ ಎದುರು ಕಣ್ಣೀರು ಹಾಕಿದರು. ‘ಆಕೆ ಒಳ್ಳೆಯ ಹುಡುಗಿ. ಕೃತ್ಯ ಎಸಗಿದವರಿಗೆ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ತುಂಡು ತುಂಡಾದ ದೇಹವನ್ನು ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಮೃತದೇಹವನ್ನು ಯಾವ ಆಯುಧದಿಂದ ಕತ್ತರಿಸಲಾಯಿತು ಎಂದು ಪರೀಕ್ಷಿಸಲಾಯಿತು. ಮಹಿಳೆ ಸತ್ತ ನಂತರ ಆಕೆಯ ದೇಹವನ್ನು ತುಂಡು ಮಾಡಲಾಗಿತ್ತೆ? ವಿಷಕಾರಿ ವಸ್ತು ನೀಡಲಾಗಿತ್ತೇ? ತಲೆಗೆ ಹೊಡೆದು ಕೊಲೆ ಮಾಡಲಾಯಿತೆ? ಅಥವಾ ಡ್ರಗ್ಸ್ ಕೊಟ್ಟು ಹತ್ಯೆ ಮಾಡಲಾಗಿತ್ತೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ. ಅಂತ್ಯ ಸಂಸ್ಕಾರ: ಮರಣೋತ್ತರ ಪರೀಕ್ಷೆ ಬಳಿಕ ಮಹಾಲಕ್ಷ್ಮಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ವಿಲ್ಸನ್ ಗಾರ್ಡನ್‌ನಲ್ಲಿರುವ ರುದ್ರಭೂಮಿಯಲ್ಲಿ ಕುಟುಂಬ ಸದಸ್ಯರು ಅಂತ್ಯ ಸಂಸ್ಕಾರ ನೆರವೇರಿಸಿದರು.
ರಕ್ತ ಸೋರಿ ಹುಳುಗಳ ಓಡಾಟ
‘ನೇಪಾಳದಿಂದ 35 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲಮಂಗಲದಲ್ಲಿ ನೆಲಸಿದ್ದೆವು. ಪತಿ ಚರಣ್‌ಸಿಂಗ್ ರಾಣಾ ಅವರು ವಯೋವೃದ್ಧರಾಗಿದ್ದು ಎಲ್ಲಿಯೂ ಕೆಲಸಕ್ಕೆ ಹೋಗುತ್ತಿಲ್ಲ. ನಮಗೆ ನಾಲ್ವರು ಮಕ್ಕಳಿದ್ದಾರೆ. ಮೊದಲ ಪುತ್ರಿ ಲಕ್ಷ್ಮಿ ಅಲಿಯಾಸ್ ಶಹೀದಾ ಬಷೀರ್ ಅವರು ನೆಲಮಂಗಲದ ಸೈಯದ್ ಇಮ್ರಾನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ದ್ವಿತೀಯ ಪುತ್ರಿ ಮಹಾಲಕ್ಷ್ಮಿ. ಈಕೆ ಹೇಮಂತ್ ದಾಸ್ ಅವರನ್ನು ಮದುವೆ ಆಗಿದ್ದರು. ಮೂರನೇ ಪುತ್ರ ಹುಕ್ಕುಂಸಿಂಗ್ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು ಮಾರತಹಳ್ಳಿಯಲ್ಲಿ ನೆಲಸಿದ್ದಾನೆ. ಕೊನೆಯ ಮಗ ನರೇಶ್ ನಮ್ಮೊಂದಿಗೆ ಇದ್ದಾನೆ. ಹುಕ್ಕುಂಸಿಂಗ್ ಹಾಗೂ ಅವರ ಪತ್ನಿ ದೀಪಿಕಾ ಅವರು ಮಹಾಲಕ್ಷ್ಮಿ ಮನೆಯಲ್ಲಿ ಈ ಹಿಂದೆ 15 ದಿನ ವಾಸವಿದ್ದರು. ಅವರೊಂದಿಗೂ ಗಲಾಟೆ ನಡೆದ ಮೇಲೆ ಮಹಾಲಕ್ಷ್ಮಿ ಒಬ್ಬಳೇ ಇದ್ದಳು’ ಎಂದು ತಾಯಿ ಮೀನಾ ರಾಣಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ‘ಸೆ.21ರಂದು ಲಕ್ಷ್ಮಿ ಕರೆ ಮಾಡಿ ನೀಡಿದ ಮಾಹಿತಿ ಆಧರಿಸಿ ಮಹಾಲಕ್ಷ್ಮಿ ಮನೆ ಬಳಿಗೆ ಹೋಗಿ ಪರಿಶೀಲಿಸಲಾಯಿತು. ಮನೆಗೆ ಬೀಗ ಹಾಕಲಾಗಿತ್ತು. ಮನೆ ಮಾಲೀಕರ ಬಳಿ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ನೋಡಿದಾಗ ಬಟ್ಟೆಗಳು ಮನೆಯ ತುಂಬ ಹರಡಿದ್ದವು. ಚಪ್ಪಲಿ ಬ್ಯಾಗ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸೂಟ್ ಕೇಸ್ ಸಹ ಬಿದ್ದಿತ್ತು. ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ತಳಭಾಗದಲ್ಲಿ ರಕ್ತ ಸೋರಿದಂತೆ ಆಗಿ ಹುಳುಗಳು ಮುತ್ತಿಕ್ಕಿದ್ದವು. ಫ್ರಿಡ್ಜ್ ಬಾಗಿಲು ತೆರೆದು ನೋಡಿದಾಗ ಪುತ್ರಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಲ್ಲ ಬಾಕ್ಸ್‌ನಲ್ಲಿ ತುಂಬಲಾಗಿತ್ತು’ ಎಂದು ಅವರು ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆ್ಯಕ್ಸೆಲ್ ಬ್ಲೇಡ್ ಹಾಗೂ ಮಚ್ಚಿನಿಂದ ದೇಹ ಕತ್ತರಿಸಲಾಗಿದೆ. ಕೃತ್ಯದ ನಡೆದ ಮನೆಯಲ್ಲಿ ಕೆಲವು ಸ್ಥಳಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದರು.
ದೇಹದ ತುಂಡು ಎಸೆಯಲು ಯತ್ನ
ಹಂತಕರು ಮಹಿಳೆಯ ದೇಹವನ್ನು ಕತ್ತರಿಸಿ ವಿಲೇವಾರಿ ಮಾಡಲು ಪ್ರಯತ್ನಿಸಿದ್ದಾರೆ. ಕೆಲವು ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿ ಇಡಲಾಗಿದೆ. ಅದು ಸಾಧ್ಯವಾಗದೇ ಇದ್ದಾಗ ಫ್ರಿಡ್ಜ್‌ನ ಎಲ್ಲ ಬಾಕ್ಸ್‌ಗಳಿಗೆ ತುಂಬಿಟ್ಟು ಆರೋಪಿಗಳು ಪರಾರಿ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.