ಸೋಮವಾರ, ಸೆಪ್ಟೆಂಬರ್ 20, 2021
24 °C
ಕೂಡ್ಲು ಗ್ರಾಮ: 15 ದಿನಗಳಿಗೊಮ್ಮೆ ನೀರು ಪೂರೈಕೆ

ಡ್ರಮ್ ಇದ್ದರೆ ಮಾತ್ರ ನೀರು

ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ‘ನಮ್ಮ ಮನೆಯಲ್ಲಿ ಆರು ಜನ ಇದ್ದೀವಿ, 15 ದಿನಕ್ಕೊಮ್ಮೆ ಎರಡು ಡ್ರಮ್ ನೀರು ಕೊಡ್ತಾರೆ, ಇದು ಯಾವುದಕ್ಕೂ ಸಾಲುತ್ತಿಲ್ಲ, ಹೀಗಾಗಿ ಒಂದು ಕೊಡ ನೀರಿಗೆ ₹4 ಕೊಟ್ಟು ಖರೀದಿ ಮಾಡುತ್ತಿದ್ದೇವೆ, ಚುನಾವಣೆ ವೇಳೆ ಕಂಡ ರಾಜಕೀಯದವರು ಇದುವರೆಗೂ ಇತ್ತ ತಲೆ ಹಾಕಿಲ್ಲ, ನಮ್ಮ ಗೋಳು ಯಾರಿಗೇ ಹೇಳೋಣ?’ ಎಂದು ಮನೆ ಕೆಲಸ ಮಾಡುವ ರುಕ್ಮಿಣಿ ನೀರಿನ ಹಾಹಾಕಾರವನ್ನು ಬಿಚ್ಚಿಟ್ಟರು.

ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಸಿಂಗಸಂದ್ರ ವಾರ್ಡ್‌ಗೆ ಒಳಪಡುವ ಕೂಡ್ಲು ಗ್ರಾಮದ ಬಸವಲಿಂಗಪ್ಪ ಬಡಾವಣೆ ಹಾಗೂ ಮಗ್ಗದ ಬಡಾವಣೆ ನಿವಾಸಿಗಳು ನೀರಿಗಾಗಿ ರೋಧಿಸುತ್ತಿದ್ದಾರೆ.

ಬಿಬಿಎಂಪಿಯಿಂದ 15 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ಪ್ರತಿ ಮನೆಗೆ ಎರಡು ಡ್ರಮ್ ನೀರು ಕೊಡುತ್ತಾರೆ. ಡ್ರಮ್ ಇದ್ದವರಿಗೆ ಮಾತ್ರವೇ ನೀರು ನೀಡುವುದರಿಂದ, ನೀರು ತುಂಬಿಸಿಕೊಳ್ಳಲು ಬಡಾವಣೆಯ ಪ್ರತಿ ಮನೆಯಲ್ಲೂ ಸಾಲಾಗಿ ಜೋಡಿಸಿರುವ ಡ್ರಮ್ ಗಳು ಕಾಣುತ್ತವೆ! ಮನೆಯಲ್ಲಿನ ಒಬ್ಬರು ನೀರಿನ ಟ್ಯಾಂಕರ್ ಬರುವುದನ್ನೇ ಕಾಯುತ್ತಾ ಕೂರಬೇಕು. ಇಲ್ಲದಿದ್ದಲ್ಲಿ ನೀರು ಸಿಗುವುದಿಲ್ಲ!

ಅಗತ್ಯವಿರುವಷ್ಟು ನೀರು ಬೇಕಿದ್ದಲ್ಲಿ ಖಾಸಗಿ ಟ್ಯಾಂಕರ್ ನೀರು ಖರೀದಿಸಬೇಕು, ಒಂದು ಟ್ಯಾಂಕ್ ನೀರಿಗೆ ₹1000 ನೀಡಬೇಕು. ಬೇಸಿಗೆಯಲ್ಲಿ ಈ ದರ ದುಪ್ಪಟ್ಟಾಗುತ್ತದೆ. ಹೀಗಾಗಿ, ನೀರಿಗಾಗಿ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ ಎಂದು ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸವಿರುವ ಇಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

700 ಕುಟುಂಬಗಳು ವಾಸವಾಗಿರುವ ಬಡಾವಣೆಯ ನಿವಾಸಿಗಳು, ನೀರಿನ ಸಮಸ್ಯೆ ಬಗೆಹರಿಸುವಂತೆ ಬಿಬಿಎಂಪಿ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್, ಜಲಮಂಡಳಿ ಅಧಿಕಾರಿಗಳು, ಬಿಬಿಎಂಪಿ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾರೂ ಸಮಸ್ಯೆಗೆ ಸ್ಪಂದಿಸಿಲ್ಲ. 

ಪೈಪ್ ಲೈನ್ ಇದೆ, ನೀರು ಪೂರೈಕೆ ಇಲ್ಲ!: 110 ಹಳ್ಳಿ ಕಾವೇರಿ ನೀರು ಪೂರೈಕೆಗಾಗಿ ಮೂರು ವರ್ಷಗಳ ಹಿಂದೆಯೇ ಪೈಪ್ ಲೈನ್ ಹಾಕಲಾಗಿದ್ದರೂ ನೀರು ಪೂರೈಕೆ ಆಗುತ್ತಿಲ್ಲ. ಪಕ್ಕದಲ್ಲೇ ಇರುವ ಬೇರೊಂದು ವಾರ್ಡ್‌ಗೆ ಸೇರಲ್ಪಡುವ ಬಡಾವಣೆಗೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದರೂ ಇಲ್ಲಿಗೆ ನೀರು ಕೊಡಲು ತೊಂದರೆಯಾದರೂ ಏನು? ಎಂದು ಇಲ್ಲಿನವರು ಪ್ರಶ್ನಿಸುತ್ತಾರೆ.

‘ಕಾವೇರಿ ನೀರನ್ನು 2023ಕ್ಕೆ ಕೊಡುವುದಾಗಿ ಜಲಮಂಡಳಿ ಹೇಳುತ್ತಿದೆ. ಅಲ್ಲಿಯವರೆಗೆ ಕೊಳವೆಬಾವಿಗಳನ್ನು ತೋಡಿ ತಾತ್ಕಾಲಿಕವಾಗಿ ನೀರಿನ ಸಮಸ್ಯೆ ನಿವಾರಿಸಬಹುದಾಗಿತ್ತು. ಬೊಮ್ಮನಹಳ್ಳಿ ವಲಯದಲ್ಲಿ ಸಾಕಷ್ಟು ಎಸ್‌ಸಿಟಿಎಸ್‌ಪಿ ಅನುದಾನವಿದ್ದು, ಅದನ್ನು ಬಳಸಿ ಕೊಳವೆ ಬಾವಿ ಕೊರೆದು, ಈಗಿರುವ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ವಿಧಾನಸಭಾ ಕ್ಷೇತ್ರ ಹಾಗೂ ಪಾಲಿಕೆ ಎರಡೂ ಮೀಸಲು ಕ್ಷೇತ್ರಗಳು. ಹೀಗಿದ್ದರೂ ಸಮಸ್ಯೆ ಬಗೆಹರಿಸಲು ಇಬ್ಬರೂ ಪ್ರಯತ್ನಿಸಿಲ್ಲ’ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಆರ್.ಎಂ.ಎನ್ ರಮೇಶ್ ದೂರಿದರು.

‘ಸಮಸ್ಯೆ ಅಷ್ಟೇನೂ ಗಂಭೀರವಾಗಿಲ್ಲ. ಕಾವೇರಿ ಪೈಪ್ ಲೈನ್ ಅಳವಡಿಕೆ ಕಾರ್ಯ ನಿಧಾನವಾಗಿದ್ದರಿಂದ ಸ್ವಲ್ಪ ತೊಂದರೆಯಾಗಿದೆ. ಈಗಾಗಲೇ ಒಂದು ಕೊಳವೆಬಾವಿ ಕೊರೆಸಲಾಗಿದ್ದು, ಶೀಘ್ರವೇ ಸಂಪರ್ಕ ನೀಡಲಾಗುವುದು’ ಎಂದು ಆನೇಕಲ್ ಶಾಸಕ ಶಿವಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು