ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಮಗ್ಗಗಳಿಗೆ ಸಿಗದ ಸಹಾಯಧನ: ನೇಕಾರರ ಸಂಕಷ್ಟ

ಬೆಸ್ಕಾಂ – ಜವಳಿ ಇಲಾಖೆ ನಡುವೆ ತಿಕ್ಕಾಟ
Last Updated 7 ಜನವರಿ 2021, 19:16 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ತಂದಿತ್ತ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹೊಸ ವಿದ್ಯುತ್‌ ಮಗ್ಗಗಳಿಗೆ ಸರ್ಕಾರ ಸಹಾಯಧನ ನೀಡದೇ ಇರುವುದರಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಏಕ ಮಾಲೀಕತ್ವದ ಉದ್ಯಮಗಳಿಗೆ ಕೇಂದ್ರ ಸರ್ಕಾರ ಹಲವು ನೆರವು ನೀಡುತ್ತಿದೆ. ಅದರಂತೆ, 1ರಿಂದ 20 ಎಚ್‌ಪಿ ಸಾಮರ್ಥ್ಯದ ವಿದ್ಯುತ್‌ ಮಗ್ಗಗಳಿಗೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸಲಾಗುತ್ತಿದೆ. ಯುನಿಟ್‌ಗೆ ₹1.25ಕ್ಕೆ ಬೆಸ್ಕಾಂ ವಿದ್ಯುತ್‌ ಪೂರೈಸುತ್ತದೆ. ವಿದ್ಯುತ್‌ನ ನಿಗದಿತ ದರ ಹಾಗೂ ರಿಯಾಯಿತಿ ದರದ ಮಧ್ಯದ ವ್ಯತ್ಯಾಸದ ಹಣವನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಬೆಸ್ಕಾಂಗೆ ನೀಡುತ್ತದೆ. ಲಾಕ್‌ಡೌನ್‌ ನಂತರ ಈ ವ್ಯತ್ಯಾಸ ಮೊತ್ತ ಅಂದರೆ ಸುಮಾರು ₹200 ಕೋಟಿಯಷ್ಟು ಹಣ ಇಲಾಖೆಯಿಂದ ಬಂದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ’ ಎಂದು ಗೊಟ್ಟಿಗೆರೆಯಲ್ಲಿರುವ ವಿದ್ಯುತ್‌ ಮಗ್ಗವೊಂದರ ಮಾಲೀಕ ಲಕ್ಷ್ಮೀನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಹಳೆಯ ಮಗ್ಗಕ್ಕೆ ಈ ಸೌಲಭ್ಯ ಸಿಗುತ್ತಿದೆ. ಆದರೆ, ಹೊಸ ಮಗ್ಗಗಳಿಗೆ ಸಿಗುತ್ತಿಲ್ಲ. ಕಾರ್ಯಾರಂಭ ಮಾಡಿದರೂ ಪರವಾನಗಿಯನ್ನೇ ಕೊಡುತ್ತಿಲ್ಲ. ಒಟ್ಟು ವಿದ್ಯುತ್‌ ಶುಲ್ಕದಲ್ಲಿ ಮೊದಲು ನಾವು ಯುನಿಟ್‌ಗೆ ₹1.25 ಮಾತ್ರ ಪಾವತಿಸುತ್ತಿದ್ದೆವು. ಈಗ ಸಾಮಾನ್ಯ ದರ ಅಂದರೆ, ಯುನಿಟ್‌ಗೆ ₹7 ಪಾವತಿಸಬೇಕಾಗಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಪರಿಸ್ಥಿತಿ ಹೀಗೇ ಮುಂದುವರಿದರೆ ಮಗ್ಗಗಳನ್ನು ಮುಚ್ಚುವ ಪರಿಸ್ಥಿತಿ ಬರಲಿದೆ’ ಎಂದು ಅವರು ಅಳಲು ತೋಡಿಕೊಂಡರು.

ಬೆಂಗಳೂರು ನವನಿರ್ಮಾಣ ಪಕ್ಷದ (ಬಿಎನ್‌ಪಿ) ಮುಖಂಡ, ಗೊಟ್ಟಿಗೆರೆಯ ಸುಬ್ಬು ಹೆಗ್ಡೆ, ‘ಸಹಾಯಧನ ನೀಡಲು ಕೋರಿ ನೇಕಾರರು ಸಲ್ಲಿಸಿರುವ 175ಕ್ಕೂ ಹೆಚ್ಚು ಅರ್ಜಿಗಳು ಇತ್ಯರ್ಥವಾಗಿಲ್ಲ’ ಎಂದರು.

‘ಪರವಾನಗಿ ಪಡೆಯದ ಘಟಕಗಳಿಗೆ ಮಾತ್ರ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸುತ್ತಿಲ್ಲ. ಉಳಿದ ಘಟಕಗಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಬಾಕಿ ಹಣ ಬಂದ ನಂತರ, ಹೊಸದಾಗಿ ಪರವಾನಗಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಇತ್ಯರ್ಥ ಮಾಡಲಾಗುವುದು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT