ಬೆಂಗಳೂರು: ಅಗತ್ಯ ವಸ್ತುಗಳ ಖರೀದಿ, ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ವೀಕ್ಷಣೆ ಹಾಗೂ ನಗರದಲ್ಲಿ ವಾರಾಂತ್ಯದ ಸುತ್ತಾಟಕ್ಕೆಂದು ಶನಿವಾರ ಜನರು ಮನೆಯಿಂದ ಹೊರಬಂದಿದ್ದರಿಂದ ನಗರದ ಬಹುತೇಕ ಕಡೆಗಳಲ್ಲಿ ದಟ್ಟಣೆ ಕಂಡುಬಂತು.
ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಇತ್ತು. ಸಿಗ್ನಲ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲುಗಳು ಪ್ರಯಾಣಿಕರಿಂದ ತುಂಬಿದ್ದವು. ಮಳೆ ಬಿಡುವು ನೀಡಿದ್ದು ಹೊರಗೆ ಓಡಾಟ ನಡೆಸಲು ಅನುಕೂಲಕರ ವಾತಾವರಣವಿದೆ. ಅದೇ ಕಾರಣದಿಂದ ಹೆಚ್ಚಿನ ಜನರು ಮನೆಯಿಂದ ಹೊರಬಂದಿದ್ದಾರೆ. ಇದು ದಟ್ಟಣೆಗೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳಿದರು.
ಲಾಲ್‌ಬಾಗ್‌ನಲ್ಲಿ ಇದೇ 15ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದರ ವೀಕ್ಷಣೆಗೆ ಶನಿವಾರ ಸಾವಿರಾರರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಲಾಲ್‌ಬಾಗ್ ಸುತ್ತಮುತ್ತ ದಟ್ಟಣೆ ಕಂಡುಬಂತು. ಸಂಚಾರ ಪೊಲೀಸರು ದಟ್ಟಣೆ ನಿಯಂತ್ರಣಕ್ಕೆ ಹೈರಾಣುಗೊಂಡರು. ಜೆ.ಸಿ. ರಸ್ತೆ, ಪುರಭವನ ಎದುರಿನ ವೃತ್ತ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಶಿವಾಜಿನಗರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು. ಬಳ್ಳಾರಿ, ತುಮಕೂರು ರಸ್ತೆ, ಮೈಸೂರು ರಸ್ತೆಯಲ್ಲೂ ವಾಹನಗಳು ಸಾಲುಗಟ್ಟಿದ್ದವು.
ಚಿಕ್ಕಪೇಟೆಯಲ್ಲಿ ಕಾಲಿಡಲು ಸ್ಥಳದ ಕೊರತೆಯಿತ್ತು. ವಾರಾಂತ್ಯದಲ್ಲಿ ಜವಳಿ ವ್ಯಾಪಾರವು ಭರ್ಜರಿಯಾಗಿ ನಡೆಯಿತು. ಎಂ.ಜಿ ರಸ್ತೆ, ಚರ್ಚ್ ರಸ್ತೆ, ರೆಸಿಡೆನ್ಸಿ ರಸ್ತೆಗಳಿಗೂ ಯುವಕ–ಯುವತಿಯರು ಬಂದಿದ್ದರು. ಇದರಿಂದ ಪಬ್‌ಗಳಲ್ಲಿ ಹೆಚ್ಚಿನ ವ್ಯಾಪಾರ ನಡೆಯಿತು.
ಯುವಕರ ಹೊಡೆದಾಟ: ಎಂ.ಜಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಶನಿವಾರ ಸಂಜೆ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು, ಆಟೊ ಚಾಲಕರು ಹಾಗೂ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದರು. ಒಂದು ಗುಂಪಿನ ಯುವಕರು, ಯುವಕನೊಬ್ಬನಿಗೆ ಥಳಿಸಿದ್ದಾರೆ. ಕಾರಣ ತಿಳಿದುಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.