ಬೆಂಗಳೂರು: ಎನ್.ಆರ್. ಕಾಲೊನಿ ಬಸ್ ನಿಲ್ದಾಣದಿಂದ ನೆಟ್ಟಕಲ್ಲಪ್ಪ ವೃತ್ತದವರೆಗೆ ಬಿಬಿಎಂಪಿಯಿಂದ ಚರಂಡಿ ನಿರ್ಮಿಸಲಾಗುತ್ತಿದ್ದು, ಏಕಕಾಲದಲ್ಲಿ ರಸ್ತೆಯ ಎರಡೂ ಕಡೆ ಗೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ವಾಹನ ಸಂಚಾರ, ಅಂಗಡಿಗಳ ವ್ಯಾಪಾರ, ವಾಹನಗಳ ನಿಲುಗಡೆ, ಮನೆ ಆವರಣ ಪ್ರವೇಶ ಎಲ್ಲಕ್ಕೂ ಪಡಿಪಾಟಲು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿ ರಸ್ತೆ ಮೂಲಸೌಕರ್ಯ ಯೋಜನೆಯಡಿ ನಗರದ ವಿವಿಧೆಡೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. ಅದರಲ್ಲಿ ಈ ರಸ್ತೆಯೂ ಸೇರಿದೆ. ಈ ಯೋಜನೆಯ ಭಾಗವಾಗಿ ಮಳೆ ನೀರು ಹರಿದುಹೋಗಲು ರೈಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಒಂದು ಬದಿಯಲ್ಲಿ ಕಾಮಗಾರಿ ಮುಗಿಸಿ ಇನ್ನೊಂದು ಬದಿಯ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು, ಒಂದೇ ಬಾರಿಗೆ ಎರಡೂ ಕಡೆ ಕಾಮಗಾರಿ ನಡೆಸುತ್ತಿರುವುದೇ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.
ಒಳರಸ್ತೆಗಳು ಈ ರಸ್ತೆಯನ್ನು ಸಂಪರ್ಕಿಸುವಲ್ಲಿಯೇ ಅಗೆದು ಹಾಕಿರುವುದರಿಂದ ಒಳರಸ್ತೆಗಳಿಗೆ ವಾಹನಗಳು ಹೋಗಲು, ಅತ್ತ ಕಡೆಯಿಂದ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ವಾಹನಗಳು ನೆಟ್ಟಕಲ್ಲಪ್ಪ ವೃತ್ತಕ್ಕೆ ಬಂದು, ಪಕ್ಕದ ರಸ್ತೆ ಮೂಲಕ ಸಾಗಬೇಕಿದೆ. ಪರಿಣಾಮವಾಗಿ ನೆಟ್ಟಕಲ್ಲಪ್ಪ ವೃತ್ತ–ಎನ್.ಆರ್. ಕಾಲೊನಿ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗಿದೆ.
‘ಕಾಮಗಾರಿ ನಡೆಯುವಾಗ ಸಾರ್ವಜನಿಕರಿಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ. ವಾಹನ ದಟ್ಟಣೆಯ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಸಮಸ್ಯೆ ಹೆಚ್ಚಾದರೆ ವಾಹನ ಸಂಚಾರವನ್ನು ಬಂದ್ ಮಾಡಿ ಬೇರೆ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ಸದ್ಯ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆಯಾದರೂ ಸ್ವಲ್ಪ ಹೊತ್ತಿನಲ್ಲಿಯೇ ಮುಂದಕ್ಕೆ ಸಾಗುತ್ತಿವೆ’ ಎಂದು ಬಸವನಗುಡಿ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದರು.
‘ಬಿಬಿಎಂಪಿ ಕಾಮಗಾರಿ ನಡೆಸುತ್ತಿದೆ. ಒಂದು ಬದಿಯಲ್ಲಿ ಮಾತ್ರ ಕೆಲಸ ಮಾಡುವಂತೆ ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಆದರೆ, ಸಂಚಾರ ದಟ್ಟಣೆಯ ಸಮಯದಲ್ಲಿಯೂ ಕೆಲವು ಬಾರಿ ಪೊಲೀಸರೇ ಇರುವುದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
‘ರಸ್ತೆ ಚೆನ್ನಾಗಿತ್ತು. ಸರಿ ಇರುವ ರಸ್ತೆಯನ್ನೇ ಅಭಿವೃದ್ಧಿ ಹೆಸರಲ್ಲಿ ಅಗೆದು ಹಾಳು ಮಾಡಲಾಗುತ್ತಿದೆ. ಇಲ್ಲಿನ ಅಂಗಡಿ, ಹೋಟೆಲ್‌ಗಳಿಗೆ ಮಾತ್ರವಲ್ಲ, ಮನೆಗಳಿಗೂ ಹೋಗುವುದು ಕಷ್ಟವಾಗುವಂತೆ ಅಗೆದು ಗೇಟ್ ಮುಂದೆಯೇ ಹಾಕುತ್ತಿದ್ದಾರೆ. ಪೈಪ್ ಅಳವಡಿಸಿದ ನಂತರ ಮುಚ್ಚುತ್ತಿದ್ದಾರೆ. ಅಗೆದು ಹಾಕಿದಲ್ಲಿಂದ ಮುಚ್ಚುವವರೆಗೆ ವಾಹನಗಳನ್ನು ಮನೆಯ ಆವರಣದ ಒಳಗೆ ಒಯ್ಯುವುದು ಹೇಗೆ’ ಎಂದು ಸ್ಥಳೀಯ ನಿವಾಸಿ ರಂಗಪ್ಪ ಪ್ರಶ್ನಿಸಿದರು.
ಜನರು ಏನಂತಾರೆ?
ಒಂದು ಕಡೆ ರಸ್ತೆ ಅಗೆದಿದ್ದರೆ ಇನ್ನೊಂದು ಬದಿಯಲ್ಲಾದರೂ ವಾಹನಗಳನ್ನು ನಿಲ್ಲಿಸಲು ಅವಕಾಶ ಸಿಗುತ್ತಿತ್ತು. ಈಗ ಎರಡೂ ಕಡೆ ನಿಲ್ಲಿಸಲು ಅವಕಾಶ ಇಲ್ಲದ ಕಾರಣ ಒಂದು ವಾರದಿಂದ ಇಲ್ಲಿನ ಯಾವ ಅಂಗಡಿಗಳಿಗೂ ವ್ಯಾಪಾರವೇ ಇಲ್ಲದಂತಾಗಿದೆ. ಶುಕ್ರವಾರ ‘ಸ್ಟಾಕ್’ ಬಂದಿತ್ತು. ಅದನ್ನು ವಾಹನದಿಂದ ಇಳಿಸಿಕೊಳ್ಳುವುದಕ್ಕೂ ಪರದಾಡುವಂತಾಯಿತು.
–ರಮೇಶ್ ವ್ಯಾಪಾರಿ
ಯಾವ ಕಾಮಗಾರಿ ಎಂದು ಸ್ಥಳೀಯರಿಗೆ ಮಾಹಿತಿಯೇ ಇಲ್ಲ. ಬರುತ್ತಾರೆ ಅಗೆದು ಹಾಕುತ್ತಾರೆ. ನಾನು ಬೀದಿ ವ್ಯಾಪಾರಿ. ಇಲ್ಲಿ ಅಗೆದರೆ ಮುಂದೆ ಹೋಗಿ ವ್ಯಾಪಾರ ಮಾಡ್ತೇನೆ. ಅಂಗಡಿ ಹೋಟೆಲ್‌ನವರಿಗೆ ಹಾಗೆ ಮಾಡಲು ಆಗುವುದಿಲ್ಲ. ಒಂದು ಬದಿಯಿಂದ ಕಾಮಗಾರಿ ನಡೆಸಿದ್ದಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ.
–ದೇವದತ್ತ ಆರ್ಯ ಉಂಗುರ ವ್ಯಾಪಾರಿ
ಎರಡು ವಾರದಿಂದ ಕಾಮಗಾರಿ ನಡೆಯುತ್ತಿದೆ. ಎಲ್ಲ ಕಡೆ ಅಗೆದು ಹಾಕಿರುವುದರಿಂದ ಸಮಸ್ಯೆ ಉಂಟಾಗಿದೆ. ನಿಜವಾದ ಸಮಸ್ಯೆ ಇನ್ನು ಮುಂದೆ ಶುರುವಾಗಲಿದೆ. ಯಾಕೆಂದರೆ ಈಗ ಅಗೆದು ಪೈಪ್ ಹಾಕಿ ಮುಚ್ಚಿದ್ದಾರೆ. ಮಳೆ ಬಂದರೆ ಕೆಸರು ಒಣಗಿದರೆ ದೂಳು ಉಂಟಾಗಿ ಜನರು ಕಷ್ಟಪಡುವ ದಿನಗಳು ಮುಂದಿರುವಂತೆ ಕಾಣುತ್ತಿದೆ.
–ಕಾಂತರಾಜ್ ಎಳನೀರು ವ್ಯಾಪಾರಿ
ರಸ್ತೆ ಅಗೆದು ಹಾಕಿರುವುದರಿಂದ ಆಟೊಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಆಟೊಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಸಮಸ್ಯೆಯೂ ಎದುರಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ ಸಂಕಷ್ಟದಿಂದ ಪಾರಾಗಬಹುದು.
–ಶಿವಕುಮಾರ್ ಆಟೊ ಚಾಲಕ
ಕಾಮಗಾರಿ ವೇಗವಾಗಿ ನಡೆಯುತ್ತಿದೆ
ದೀರ್ಘಾವಧಿಯ ಕಾಮಗಾರಿ ‘ಈಗ ಚರಂಡಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸಲು ಹೆಚ್ಚು ಸಮಯ ತೆಗೆದುಕೊಂಡಷ್ಟೂ ಸಮಸ್ಯೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಎರಡೂ ಬದಿಯಲ್ಲಿ ಏಕಕಾಲದಲ್ಲಿ ಅಗೆದು ಪೈಪ್ ಅಳವಡಿಸಿ ಮುಚ್ಚಲಾಗುತ್ತಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು. ‘ವೈಟ್ ಟಾಪಿಂಗ್ ಕಾಮಗಾರಿ ಆಗಿರುವುದರಿಂದ ಕಾಮಗಾರಿ ಪೂರ್ಣಗೊಳ್ಳಲು ಸಮಯ ಹಿಡಿಯುತ್ತದೆ. ಯುಟಿಲಿಟಿ ಪೈಪ್ ಅಳವಡಿಕೆ ಚರಂಡಿ ಕಾಮಗಾರಿ ಮುಗಿದ ಬಳಿಕ ರಸ್ತೆ ಕಾಂಕ್ರೀಟೀಕರಣ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳು ನಡೆಯಲಿವೆ’ ಎಂದು ವಿವರ ನೀಡಿದರು.
ಓಡಾಟಕ್ಕೆ ತೊಂದರೆಯಾಗದಂತೆ ಮಾಡಲಾಗುವುದು
‘ತ್ವರಿತವಾಗಿ ಕೆಲಸ ಮುಗಿಸಲು ಕ್ರಮ’ ‘ಎನ್.ಆರ್. ಕಾಲೊನಿ ರಸ್ತೆಯ ಎರಡೂ ಬದಿ ಒಂದೇ ಬಾರಿಗೆ ಕೆಲಸ ಆರಂಭಿಸಿರುವುದರಿಂದ ಸಮಸ್ಯೆ ಆಗಿದ್ದರೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ವಾಹನಗಳ ಸಂಚಾರ ಮಾರ್ಗ ಬದಲಾವಣೆ ಬಸ್ ಸಂಚಾರ ನಿರ್ಬಂಧ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಸ್ಥಳೀಯರ ಓಡಾಟಕ್ಕೆ ತೊಂದರೆಯಾಗದಂತೆ ಮಾಡಲಾಗುವುದು’ ಎಂದು ಬಿಬಿಎಂಪಿ ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ಪ್ರಮುಖ ರಸ್ತೆಗಳು) ಬಿ.ಎಂ. ಧರಣೇಂದ್ರಕುಮಾರ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.