ಶನಿವಾರ, ಜನವರಿ 29, 2022
18 °C
ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಕಾಮಗಾರಿಗೆ ಅನುಮೋದನೆ: ಆರೋಪ

ಟೆಂಡರ್ ಆಹ್ವಾನಿಸದೆಯೇ ವೈಟ್‌ಟಾಪಿಂಗ್

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

ವೈಟ್‌ಟಾಪಿಂಗ್

ಬೆಂಗಳೂರು: ವೈಟ್‌ ಟಾಪಿಂಗ್ ಎರಡನೇ ಹಂತದ ಯೋಜನೆಯಲ್ಲಿ ₹35.50 ಕೋಟಿ ಮೊತ್ತದ ಬದಲಿ ಕಾಮಗಾರಿಯನ್ನು ಟೆಂಡರ್ ಪ್ರಕ್ರಿಯೆ ನಡೆಸದೆಯೇ ನಿರ್ವಹಿಸಲು ಬಿಬಿಎಂಪಿ ಮುಂದಾಗಿದ್ದು, ಸರ್ಕಾರ ಕೂಡ ಇದಕ್ಕೆ ಅನುಮೋದನೆ ನೀಡಿದೆ.

ಬೆಂಗಳೂರಿನ ವಿಶೇಷ ಮೂಲಸೌಕರ್ಯ ಯೋಜನೆಯಡಿ 2017–18ರಲ್ಲಿ ಸರ್ಕಾರ ₹2,191 ಕೋಟಿ ಮಂಜೂರು ಮಾಡಿತ್ತು. ಈ ಮೊತ್ತದಲ್ಲಿ ಎರಡನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಪ್ಯಾಕೇಜ್‌ನಲ್ಲಿ ಇಲ್ಲದ ಕಾಮಗಾರಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಉಲ್ಲಂಘಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ತೂರಿಸಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್‌ಸಿಂಗ್ ಅವರಿಗೆ  2021ರ ಆ.17ರಂದು ಪತ್ರವೊಂದನ್ನು ಬರೆದಿದ್ದಾರೆ.

‘ನಾಗರಬಾವಿ, ವಿಶ್ವೇಶ್ವರಯ್ಯ ಬಡಾವಣೆ, ಉಲ್ಲಾಳು, ರಾಜರಾಜೇಶ್ವರಿನಗರ, ಕೆಂಗೇರಿ ಮತ್ತು ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಜ್ಞಾನಭಾರತಿ ಆವರಣದ ಮೂಲಕ ಹಾದು ಹೋಗುತ್ತಿದೆ. ಮೈಸೂರು ರಸ್ತೆಯಲ್ಲಿ ಮೆಟ್ರೊ ರೈಲು ನಿಲ್ದಾಣ ಕೂಡ ಇದ್ದು, ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತಿದೆ. ಈಗಿರುವ ರಸ್ತೆ ಹಾಳಾಗಿರುವುದರಿಂದ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಪತ್ರದಲ್ಲಿ ಕೋರಿದ್ದರು.

ಈಗಾಗಲೇ ಅನುಮೋದನೆಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಯೋಜನೆಯಲ್ಲಿ ಉಳಿತಾಯ ಆಗಿರುವ ಮೊತ್ತ ಇದ್ದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಈ ಕಾಮಗಾರಿ ಕೈಗೆತ್ತಿಕೊಳ್ಳಲು 2021ರ ಆ.16ರಂದು ನಡೆದ ಪ್ರಗತಿ ಪರಿಶೀಲನಾ ತೋಟಗಾರಿಕಾ ಸಚಿವ ಮುನಿರತ್ನ ಕೂಡ ಸೂಚನೆ ನೀಡಿದ್ದರು.

ಉಳಿತಾಯ ಮೊತ್ತದಲ್ಲಿ ಜ್ಞಾನಭಾರತಿ ಆವರಣದಲ್ಲಿ 1.03 ಕಿಲೋ ಮೀಟರ್‌ ಉದ್ದದ ಆರು ಪ‍ಥಗಳ ರಸ್ತೆ, ಸೈಕಲ್ ಪಥ, ಪಾದಚಾರಿ ಮಾರ್ಗ, ಚರಂಡಿ ಸೇರಿ ₹35.50 ಕೋಟಿ ಮೊತ್ತದ ಯೋಜನೆ ರೂಪಿಸಿ ಸರ್ಕಾರಕ್ಕೆ ಬಿಬಿಎಂಪಿ ಮುಖ್ಯ
ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆ ಅನುಮೋದಿಸಿ 2021ರ ಅ.29ರಂದು ಆದೇಶ ಹೊರಡಿಸಿದ ಸರ್ಕಾರ, ‘ಹೊಸದಾಗಿ ಡಿಪಿಆರ್ ಸಿದ್ಧಪಡಿಸಿ, ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ಟೆಂಡರ್ ಕರೆದು ಕಾಮಗಾರಿ ಅನುಷ್ಠಾನಗೊಳಿಸಬೇಕು’ ಎಂದು ತಿಳಿಸಿತ್ತು.‌

ನ.17ರಂದು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತರು, ಟೆಂಡರ್ ಕರೆಯಬೇಕು ಎಂಬ ಷರತ್ತು ಸಡಿಲಿಸಬೇಕು ಎಂದು ಮನವಿ ಮಾಡಿದ್ದರು. ‘ಹೊಸದಾಗಿ ಟೆಂಡರ್ ಕರೆದರೆ ಮೂಲ ಗುತ್ತಿಗೆದಾರರಾದ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಪ್ರವೈಟ್‌ ಲಿಮಿಟೆಡ್‌ನಿಂದ ₹35.50 ಕೋಟಿ ವಾಪಸ್ ಪಡೆಯಬೇಕಾಗುತ್ತದೆ. ಗುತ್ತಿಗೆದಾರರು ನ್ಯಾಯಾಲಯದ ಮೊರೆ
ಹೋಗುವ ಸಾಧ್ಯತೆಯೂ ಇರುತ್ತದೆ. ಹೊಸದಾಗಿ ಟೆಂಡರ್ ಕರೆಯಲು ಮುಂದಾದರೆ ಮೊತ್ತ ಕೂಡ ಹೆಚ್ಚಾಗಲಿದೆ’ ಎಂದು ಕಾರಣ ನೀಡಿದ್ದರು. ಈ ಪಸ್ತಾವನೆಯನ್ನು ಮುಖ್ಯಮಂತ್ರಿ  ಅದೇ ದಿನ ಅನುಮೋದಿಸಿದ್ದಾರೆ.

‘ಬೇರೆಡೆಗೆ ಮಂಜೂರಾಗಿದ್ದ ಕಾಮಗಾರಿಯನ್ನು ಇಲ್ಲಿಗೆ ಬದಲಾವಣೆ ಮಾಡಲಾಗಿದೆ. ಆದರೆ, ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್‌ ಕರೆಯುವುದರಿಂದ ವಿನಾಯಿತಿ ಪಡೆಯಲು ಉಳಿತಾಯ ಮೊತ್ತ ಎಂದು ತೋರಿಸಲಾಗುತ್ತಿದೆ. ಹೀಗೆ ಮಾಡುವುದು ಕೂಡ ಕಾಯ್ದೆಯ ಉಲ್ಲಂಘನೆ’ ಎಂದು ಬಿಬಿಎಂಪಿ ಹಿರಿಯ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಪ್ಯಾಕೇಜ್ ಸಿದ್ಧಪಡಿಸುವಾಗ ತಜ್ಞರಿಂದ ಸಲಹೆ ಪಡೆಯಲಾಗುತ್ತದೆ. ₹35.50 ಕೋಟಿ ಉಳಿತಾಯ ಎನ್ನುವುದಾದರೆ ಈ ಹಿಂದೆ ಕುರುಡಾಗಿ ಅಂದಾಜು ಮಾಡಲಾಗಿದೆಯೇ’ ಎಂದು ಅವರು ಪ್ರಶ್ನಿಸುತ್ತಾರೆ.

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

‘1 ಕಿ.ಮೀಗೆ ₹35 ಕೋಟಿ ಏಕೆ’

‘1 ಕಿಲೋ ಮೀಟರ್‌ ಉದ್ದದ ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿ ನಿರ್ವಹಿಸಲು ₹35.50 ಕೋಟಿ ಖರ್ಚು ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಬಿಜೆಪಿ ಮುಖಂಡ ಎನ್‌.ಆರ್. ರಮೇಶ್ ಹೇಳಿದರು.

‘ಈ ಮೊತ್ತದಲ್ಲಿ 4 ಕಿಲೋ ಮೀಟರ್‌ ವೈಟ್‌ಟಾಪಿಂಗ್ ರಸ್ತೆ ಅಭಿವೃದ್ಧಿಪಡಿಸಬಹುದು. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ವ್ಯಯ ಮಾಡಬಾರದು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇನೆ’ ಎಂದರು.

‘₹1 ಲಕ್ಷಕ್ಕೂ ಹೆಚ್ಚಿನ ಮೊತ್ತದ ಕಾಮಗಾರಿಯನ್ನು ಟೆಂಡರ್ ಇಲ್ಲದೆ ನಿರ್ವಹಿಸಲು ಸಾಧ್ಯವೇ ಇಲ್ಲ. ತಡೆಯುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.‘ಉಳಿತಾಯ ಮೊತ್ತದ ಕಾಮಗಾರಿಯಾದರೂ ಟೆಂಡರ್ ಕರೆಯಲೇಬೇಕು. ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸುವುದು ಕಾನೂನಿನ ಉಲ್ಲಂಘನೆ’ ಎಂದು ಕಾಂಗ್ರೆಸ್ ಮುಖಂಡ ಎಂ. ಶಿವರಾಜು ಹೇಳಿದರು.

ಟೆಂಡರ್ ಅಗತ್ಯವಿಲ್ಲ: ಸಚಿವ ಮುನಿರತ್ನ

‘ಉಳಿತಾಯ ಮೊತ್ತದಲ್ಲಿ ಅದೇ ಗುತ್ತಿಗೆದಾರರಿಂದ ಕಾಮಗಾರಿ ನಿರ್ವಹಿಸಲು ಕೆಟಿಪಿಪಿ ಕಾಯ್ದೆಯಲ್ಲೇ ಅವಕಾಶ ಇದೆ. ಇದು ಕಾನೂನಿನ ಉಲ್ಲಂಘನೆ ಅಲ್ಲ’ ಎಂದು ತೋಟಗಾರಿಕಾ ಸಚಿವ ಮುನಿರತ್ನ ಸ್ಪಷ್ಟಪಡಿಸಿದರು.

‘ಗುತ್ತಿಗೆ ರದ್ದುಗೊಳಿದರೆ, ಏಜೆನ್ಸಿ ಬದಲಾವಣೆಯಾದರೆ ಅಥವಾ ಕ್ರಿಯಾಯೋಜನೆ ಬದಲಾಯಿಸಿದರೆ ಮಾತ್ರ ಟೆಂಡರ್ ಕರೆಯಬೇಕಾಗುತ್ತದೆ. ಮೂಲ ಟೆಂಡರ್ ಮೊತ್ತದಲ್ಲೇ ಕಾಮಗಾರಿ ನಿರ್ವಹಿಸಲು ಮರು ಟೆಂಡರ್ ಬೇಕಿಲ್ಲ. ಆದರೂ ಸರ್ಕಾರದ ಗಮನಕ್ಕೆ ತಂದು ಮತ್ತೊಮ್ಮೆ ಅನುಮೋದನೆ ಪಡೆಯಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪಿಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು