ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಪತಿ ಕೊಲೆಗೆ ಸುಪಾರಿ

ಮಹಿಳೆಯರ ಚಿನ್ನಾಭರಣ ಕದಿಯುತ್ತಿದ್ದಾಕೆ ಸೇರಿ ನಾಲ್ವರ ಬಂಧನ
Last Updated 17 ಡಿಸೆಂಬರ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಕಾರಣಕ್ಕೆ ಕೋಪಗೊಂಡು, ಮಾಜಿ ಪತಿಯ ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ, ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿ, ಸದ್ಯ ಮೈಸೂರಿನ ಕೂಡಗಳ್ಳಿಯ ಮಂಜುಳಾ ಅಲಿಯಾಸ್‌ ಕಳ್ಳ ಮಂಜಿ (44), ಆಕೆಯ ಪ್ರಿಯಕರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಿವಾಸಿ, ಸದ್ಯ ಕೂಡಗಳ್ಳಿಯಲ್ಲಿ ನೆಲೆಸಿರುವ ಚಲುವರಾಯ ಅಲಿಯಾಸ್‌ ಚಲುವ (45), ಆನೇಕಲ್‌ ನಿವಾಸಿಗಳಾದ ಗಣೇಶ್ ಅಲಿಯಾಸ್‌ ಗಣಿ (25) ಮತ್ತು ಮಂಜುನಾಥ್‌ ಅಲಿಯಾಸ್‌ ಮಂಜು (27) ಬಂಧಿತರು.

ಆರೋಪಿಗಳಿಂದ ₹ 6.99 ಲಕ್ಷ ಮೌಲ್ಯದ 233.1 ಗ್ರಾಂ ಚಿನ್ನ, ₹ 5,630 ನಗದು, ಮಚ್ಚು, ಲಾಂಗ್ ಹಾಗೂ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಕಳ್ಳ ಮಂಜಿ ತನ್ನ ಮಾಜಿ ಪತಿ ಶಂಕರ್‌ನನ್ನು ಕೊಲೆ ಮಾಡಲು ಪ್ರಿಯಕರನಿಗೆ ₹ 1 ಲಕ್ಷಕ್ಕೆ ಸುಪಾರಿ ನೀಡಿದ್ದ ವಿಷಯ ತನಿಖೆಯಿಂದ ಗೊತ್ತಾಗಿದೆ.

‘10 ವರ್ಷಗಳ ಹಿಂದೆ ಮಂಜುಳಾ ಮತ್ತು ಶಂಕರ್ ವಿವಾಹವಾಗಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಜಗಳ ಉಂಟಾಗಿತ್ತು. ಅಲ್ಲದೆ, ಪತ್ನಿಯ ಅಪರಾಧ ಹಿನ್ನೆಲೆ ತಿಳಿದ ಶಂಕರ್, ಪತ್ನಿಯಿಂದ ಪ್ರತ್ಯೇಕವಾಗಿ ಎರಡನೇ ಮದುವೆ ಆಗಿದ್ದ. ಚಲುವರಾಯನ ಸ್ನೇಹ ಬೆಳೆಸಿದ ಮಂಜುಳಾ, ಅಪರಾಧ ಕೃತ್ಯ ಮುಂದುವರೆಸಿದ್ದಳು.’

‘ವಯಸ್ಸಾದ ಮಹಿಳೆಯರ ಗಮನ ವನ್ನು ಬೇರೆಡೆ ಸೆಳೆದು ಚಿನ್ನಾಭರಣಗಳನ್ನು ಮಂಜುಳಾ ನೇತೃತ್ವದ ತಂಡ ದೋಚುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ಶಂಕರ್ ಮಾಹಿತಿ ನೀಡುತ್ತಿದ್ದ. ಇದರಿಂದ ಸಿಟ್ಟಾಗಿದ್ದ ಮಂಜುಳಾ ಆನೇಕಲ್ ತಾಲ್ಲೂಕಿನ ಗಣೇಶ್ ಮತ್ತು ಮಂಜುನನ್ನು ಸಂಪರ್ಕಿಸಿ ಆಕೆ, ಕೊಲೆಗೆ ಸುಪಾರಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದರು.

ಶಂಕರ್‌ನ. 25ರ ಮುಂಜಾನೆ 5 ಗಂಟೆಗೆ ಗೊಟ್ಟಿಗೆರೆಯ ಪಿಳ್ಳಗಾನಹಳ್ಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೀಳಿಸಿದ್ದರು. ಲಾಂಗ್‌ನಿಂದ ತಲೆಗೆ ಹೊಡೆದು ಆರೋಪಿಗಳು ಪರಾರಿಯಾ
ಗಿದ್ದರು. ಗಂಭೀರವಾಗಿ ಗಾಯ ಗೊಂಡಿದ್ದ ಶಂಕರ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಕೋಣನಕುಂಟೆ ಇನ್‌ಸ್ಪೆಕ್ಟರ್‌ ಧರ್ಮೇಂದ್ರ ಮತ್ತು ಸಿಬ್ಬಂದಿ ಆರೋಪಿ ಗಳನ್ನು ಬಂಧಿಸಿದ್ದರು.

ತನ್ನ ಪತಿಯ ಮೇಲಿನ ಹಲ್ಲೆಗೆ ಮಂಜುಳಾ ಕಾರಣ ಎಂದೂ ಆರೋಪಿಸಿ ಕೋಣನಕುಂಟೆ ಠಾಣೆಯಲ್ಲಿ ಶಂಕರನ ಎರಡನೇ ಪತ್ನಿ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮಂಜುಳಾ ಮತ್ತು ಚೆಲುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಆರೋಪಿ ಕಳ್ಳ ಮಂಜಿ ತನ್ನ ಪ್ರಿಯಕರನ ಜೊತೆ ಸೇರಿ ಯಳ್ಳಂದೂರು, ಅರಕಲಗೂಡು, ಶ್ರವಣಬೆಳಗೊಳ, ಹುಣಸೂರು, ಚನ್ನರಾಯಪಟ್ಟಣ, ಮಾಗಡಿ ರಸ್ತೆ ಮತ್ತಿತರ ಕಡೆಗಳಲ್ಲಿರುವ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ, ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ವಿಚಾರಣೆ ವೇಳೆ ಗೊತ್ತಾಗಿದೆ.

‘ಕಳ್ಳ ಮಂಜಿ’ಯ ಕರಾಮತ್ತು!

ಚಿನ್ನ ಖರೀದಿಗೆ ಬರುವ ಮಹಿಳೆಯರನ್ನು ಕಳ್ಳ ಮಂಜಿ ಪರಿಚಯ ಮಾಡಿಕೊಳ್ಳುತ್ತಿದ್ದಳು. ‘ಪಕ್ಕದ ರಸ್ತೆಯಲ್ಲಿ ಸರ ಕಳವು ನಡೆದಿದೆ. ನೀವು ಚಿನ್ನಾಭರಣ ಧರಿಸಿ ಹೋದರೆ ಸಮಸ್ಯೆ’ ಎಂದು ಹೇಳಿ ನಂಬಿಸುತ್ತಿದ್ದಳು. ವಯಸ್ಸಾದ ಮಹಿಳೆಯರು ಚಿನ್ನಾಭರಣ ಕಳಚಿ ಕವರ್ ಅಥವಾ ಬ್ಯಾಗ್‌ನಲ್ಲಿಡುವಾಗ ಗಮನ ಬೇರೆಡೆ ಸೆಳೆದು, ಕಳ್ಳ ಮಂಜಿ ಮತ್ತು ಚೆಲುವ ಕಳವು ಮಾಡುತ್ತಿದ್ದರು. ‘ನಮ್ಮ ಬಳಿ ಹಣ ಇದ್ದು, ಅದನ್ನು ವ್ಯಯಿಸಲು ಆಗುತ್ತಿಲ್ಲ. ನೀವು ಚಿನ್ನಾಭರಣ ನೀಡಿದರೆ ಎರಡು ಪಟ್ಟು ಹಣ ನೀಡುತ್ತೇವೆ’ ಎಂದು ಹೇಳಿಯೂ ಚಿನ್ನಾಭರಣ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT