ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿ ಮುಂದುವರಿಯುವುದರ ಬಗ್ಗೆ 4 ದಿನದಲ್ಲಿ ನಿರ್ಧಾರ: ಎಸ್‌.ಟಿ. ಸೋಮಶೇಖರ್‌

Published 22 ಆಗಸ್ಟ್ 2023, 16:19 IST
Last Updated 22 ಆಗಸ್ಟ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯಲ್ಲೇ ಮುಂದುವರಿಯಬೇಕೆ? ಅಥವಾ ಹೊರ ಬರಬೇಕೆ? ಎಂಬುದರ ಕುರಿತು ನಾಲ್ಕು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ನಾನು ಬಿಜೆಪಿಯಲ್ಲೇ ಇದ್ದೇನೆ. ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ. ಇಲ್ಲಿನ ಸಮಸ್ಯೆ ಕುರಿತು ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲೇ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೆ. ಆದರೆ, ಏನೂ ಪ್ರಯೋಜನ ಆಗಲಿಲ್ಲ’ ಎಂದರು.

‘ಅನಿವಾರ್ಯವಾಗಿ ನಾನೇ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಿದ್ದೆ. ಅವರು ಅನುದಾನ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದರು.

‘ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಮಾಡಿದ ಬಳಿಕ ಬಿಜೆಪಿ ಮುಖಂಡರು ಏನೇನೋ ಹೇಳುತ್ತಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ, ನನ್ನ ಮಗನನ್ನು ವಿಧಾನಸಭಾ ಚುನಾವಣಾ ಕಣಕ್ಕಿಳಿಸುತ್ತೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ’ ಎಂದರು.

ವರಿಷ್ಠರಿಂದ ಕರೆ

‘ದೆಹಲಿಗೆ ಬರುವಂತೆ ಬಿಜೆಪಿ ವರಿಷ್ಠರಿಂದ ಕರೆ ಬಂದಿದೆ. ಅಲ್ಲಿಗೆ ಹೋಗಿ ವಸ್ತುಸ್ಥಿತಿ ಕುರಿತು ಮಾಹಿತಿ ನೀಡುತ್ತೇನೆ. ಯಶವಂತಪುರ ಕ್ಷೇತ್ರದಲ್ಲಿನ ಒಳ್ಳೆಯ ವಾತಾವರಣವನ್ನು ಕೆಡಿಸಿದ್ದಾರೆ. ಗೊಂದಲ ಸರಿಪಡಿಸಿದರೆ ಮಾತ್ರ ಬಿಜೆಪಿಯಲ್ಲಿ ಮುಂದುವರಿಯುತ್ತೇನೆ’ ಎಂದು ತಿಳಿಸಿದರು.

ಸೋಮಶೇಖರ್‌ ಸೇರಿದಂತೆ ಬಿಜೆಪಿಯ ಕೆಲವು ಶಾಸಕರು ಪಕ್ಷ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಲ್ಲಿದೆ. ಈ ಬೆಳವಣಿಗೆಯ ಮಧ್ಯೆಯೇ ಸೋಮಶೇಖರ್‌ ಅವರು ಸಿದ್ದರಾಮಯ್ಯ ಮತ್ತ ಶಿವಕುಮಾರ್‌ ಅವರನ್ನು ಭೇಟಿಮಾಡಿದ್ದರು. ಆ ಬಳಿಕ ಪಕ್ಷ ತೊರೆಯುವ ಸುದ್ದಿ ಇನ್ನಷ್ಟು ಜೋರಾಗಿತ್ತು.

ಯಶವಂತಪುರ ಕ್ಷೇತ್ರದಲ್ಲಿ ಎಚ್‌ಡಿಕೆ ಸಭೆ

ಬೆಂಗಳೂರು: ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್ ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂಬ ಸುದ್ದಿ ಬಲಗೊಳ್ಳುತ್ತಿದ್ದಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಯಶವಂತಪುರ ವಿಧಾನಸಭಾ ಕ್ಷೇತ್ರದತ್ತ ಚಿತ್ತ ಹರಿಸಿದ್ದಾರೆ. ಸೋಮಶೇಖರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರೆ ಮತ್ತೆ ಉ‍ಪ ಚುನಾವಣೆ ನಡೆಯಲಿದೆ. ಮೂರು ತಿಂಗಳ ಹಿಂದಷ್ಟೇ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ  ಟಿ.ಎನ್‌. ಜವರಾಯಿ ಗೌಡ ಅವರು ಸ್ಪರ್ಧಿಸಿದ್ದರು. ಸೋಮಶೇಖರ್ ಎದುರು ಸೋಲು ಕಂಡಿದ್ದರು. ಉಪ ಚುನಾವಣೆ ನಡೆದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಈಗಲೇ ತಯಾರಿ ಆರಂಭಿಸಿರುವ ಕುಮಾರಸ್ವಾಮಿ ಅವರು ಯಶವಂತಪುರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಂಗಳವಾರ ನಡೆಸಿದರು.  ಸಭೆಗೂ ಮುನ್ನ ಮಾತನಾಡಿದ ಕುಮಾರಸ್ವಾಮಿ  ಕಾಂಗ್ರೆಸ್‌ನ ‘ಘರ್‌ ವಾಪಸಿ’ ಸಫಲವಾಗದು. ನಮ್ಮ ಪಕ್ಷದವರು ಯಾರೂ ಹೋಗುವುದಿಲ್ಲ. ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಹೋಗುವುದಾಗಿ ಶಾಸಕ ಸೋಮಶೇಖರ್‌ ಹೇಳುತ್ತಿದ್ದಾರೆ ಎನ್ನಲಾಗಿದೆ. ಹಿಂದೆ ಸಚಿವರಾಗಿದ್ದ ಅವರು ಅಭಿವೃದ್ಧಿ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT