ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ ಕಲ್ಲು ಕಿತ್ತು ಕಚೇರಿಗೆ ತಂದು ಸುರಿಯುತ್ತೇವೆ

ಪಿಆರ್‌ಆರ್‌: ಬಿಡಿಎ ಕಚೇರಿ ಬಳಿ ರೈತರ ಅಹೋರಾತ್ರಿ ಪ್ರತಿಭಟನೆ * ಫಲ ನೀಡಲಿಲ್ಲ ಸಿ.ಎಂ. ಜತೆಗಿನ ಮಾತುಕತೆ
Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಕಾಮಗಾರಿಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಈಗಿನ ಮಾರುಕಟ್ಟೆ ಮೌಲ್ಯದ ಆಧಾರದಲ್ಲೇ ಪರಿಹಾರ ಕೊಡುವಂತೆ ಒತ್ತಾಯಿಸಿ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿ ಎದುರು ಅನಿರ್ದಿಷ್ಟಾವಧಿಯ ಅಹೋರಾತ್ರಿ ಪ್ರತಿಭಟನೆಯನ್ನುಸೋಮವಾರ ಆರಂಭಿಸಿದರು.

ಪರಿಹಾರದ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ತಮ್ಮ ಜಮೀನಿನಲ್ಲಿರುವ ಸರ್ವೆ ಕಲ್ಲುಗಳನ್ನು ಕಿತ್ತು ತಂದು ಬಿಡಿಎ ಕಚೇರಿ ಎದುರು ಸುರಿಯುವುದಾಗಿ ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಮುಖರ ಜೊತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತುಕತೆ ನಡೆಸಿದರು. ‘ಮುಖ್ಯಮಂತ್ರಿಯವರು ಈ ಸಮಸ್ಯೆಯ ಗಂಭೀರತೆಯನ್ನೇ ಅರ್ಥೈಸಿಕೊಂಡಿಲ್ಲ. ಅಧಿಕಾರಿಗಳೂ ಅವರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಅವರ ಜತೆಗಿನ ಮಾತುಕತೆ ಫಲ ನೀಡಿಲ್ಲ. ಹಾಗಾಗಿ ಅಹೋರಾತ್ರಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟವಾದ ಎರಡು ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಭೂಮಿಯನ್ನು ಮರಳಿಸಬೇಕು ಎಂದು 2013ರ ಭೂಸ್ವಾಧೀನ ಕಾಯ್ದೆ ಹೇಳುತ್ತದೆ. ಪಿಆರ್‌ಆರ್‌ ಯೋಜನೆಯ ಭೂಸ್ವಾಧೀನಕ್ಕೆ ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 16 ವರ್ಷಗಳೇ ಕಳೆದಿವೆ. ಕಾನೂನಿಗೆ ಸರ್ಕಾರ ಗೌರವ ನೀಡಿಲ್ಲ. ಹಾಗಾಗಿ ಸರ್ಕಾರ ಹಾಗೂ ರೈತರ ನಡುವೆ ಈ ಸಂಬಂಧ ಯಾವುದೇ ನಂಟು ಉಳಿದಿಲ್ಲ’ ಎಂದು ಚಂದ್ರಶೇಖರ್‌ ಹೇಳಿದರು.

‘ಸರ್ಕಾರದ ಮುಂದೆ ಅಂಗಲಾಚುವ ಕಾಲ ಹೋಯಿತು. ನಾಳೆಯಿಂದ ಚಳವಳಿಯ ಸ್ವರೂಪ ಬದಲಾಗಲಿದೆ. ರೈತರ ಜಮೀನಿನಲ್ಲಿ ಸರ್ಕಾರ ಹಾಕಿರುವ ಸರ್ವೆ ಕಲ್ಲುಗಳನ್ನು ತಂದು ಬಿಡಿಎ ಕಚೇರಿ ಮುಂದೆ ಬಿಸಾಡುತ್ತೇವೆ’ ಎಂದರು.

ಹೈಕೋರ್ಟ್‌ ಮೊರೆ: ‘16 ವರ್ಷಗಳಿಂದ ರೈತರ ಪ್ರಗತಿಗೆ ಬಿಡಿಎ ಅಡ್ಡಿಯುಂಟು ಮಾಡಿದೆ.ರೈತರ ಜಮೀನಿಗೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ಬಿಡಿಎ ಹೆಸರು ಸೇರಿಕೊಂಡಿದ್ದು, ಅದನ್ನು ತೆಗೆಸಬೇಕು. ಇಷ್ಟು ವರ್ಷ ರೈತರಿಗೆ ಆಗಿರುವ ನಷ್ಟ ಭರಿಸುವಂತೆ ಬಿಡಿಎಗೆ ಸೂಚನೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ನಾವು ಕಾನೂನು ಕೈಗೆತ್ತಿಕೊಳ್ಳದೇ ನ್ಯಾಯಯುತ ಪ್ರತಿಭಟನೆ ನಡೆಸುತ್ತೇವೆ. ರೈತರನ್ನು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದರೆ ರಾಜ್ಯದಾದ್ಯಂತ ರೈತರು ಬೀದಿಗಿಳಿಯಲಿದ್ದಾರೆ. ಜೈಲು ನಮಗೆ ಹೊಸತಲ್ಲ. ತಾಕತ್ತಿದ್ದರೆ ಸರ್ಕಾರ ಪ್ರತಿಭಟನಕಾರರನ್ನು ಬಂಧಿಸಲಿ’ ಎಂದು ಸವಾಲು ಹಾಕಿದರು.

ರಸ್ತೆಯಲ್ಲೇ ಅಡುಗೆ, ಅಲ್ಲೇ ಊಟ

ಪ್ರತಿಭಟನಕಾರರು ಸೋಮವಾರ ಮಧ್ಯಾಹ್ನ ಹಾಗೂ ರಾತ್ರಿ ಬಿಡಿಎ ಕಚೇರಿ ಮುಂದೆಯೇ ಅಡುಗೆ ತಯಾರಿಸಿ ಊಟ ಮಾಡಿದರು. ಅಹೋರಾತ್ರಿ ಧರಣಿ ಮುಂದುವರಿದಿದ್ದರಿಂದ ಬಿಡಿಎ ಕಚೇರಿ ಎದುರಿನ ರಸ್ತೆಯಲ್ಲೇ ಶಾಮಿಯಾನ ಹಾಕಿ ಅಲ್ಲೇ ಕಾಲ ಕಳೆದರು.

ತಮಟೆ ವಾದನ, ಕ್ರಾಂತಿಗೀತೆಗಳು ಹೊರಾಟದ ಕಾವನ್ನು ಹೆಚ್ಚಿಸಿದವು.

ಪ್ರತಿಭಟನಕಾರರ ಪ್ರಮುಖ ಬೇಡಿಕೆಗಳು

* ಪಿಆರ್‌ಆರ್ ಅನುಷ್ಠಾನಕ್ಕೆ ವೃಥಾ ಕಾಲಹರಣ ನಿಲ್ಲಿಸಬೇಕು

* ಈಗಿನ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಭೂಪರಿಹಾರ ನೀಡಬೇಕು

* ಅದು ಸಾಧ್ಯವಾಗದಿದ್ದರೆ ಜಮೀನುಗಳನ್ನು ಡಿನೋಟಿಫೈ ಮಾಡಬೇಕು

***

ವಿರೋಧ ಪಕ್ಷದಲ್ಲಿದ್ದಾಗ ಪಿಆರ್‌ಆರ್‌ ಯೋಜನೆಯ ಸಂತ್ರಸ್ತ ರೈತರ ಪರ ಧ್ವನಿ ಎತ್ತಿದ್ದ ಬಿಜೆಪಿ ಈಗ ಈ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರೂ ತಮ್ಮ ವಾಗ್ದಾನವನ್ನು ಉಳಿಸಿಕೊಂಡಿಲ್ಲ

–ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯ ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT