ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ವೃದ್ಧೆಯನ್ನು ಎಳೆದಾಡಿ ಕೊಂದ ನಾಯಿಗಳು

ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಬೀದಿ ನಾಯಿಗಳ ಸ್ಥಳಾಂತರಕ್ಕೆ ಒತ್ತಾಯ
Last Updated 15 ಮೇ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಮತ್ತೇ ಶುರುವಾಗಿದ್ದು, ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರನ್ನು ನಾಯಿಗಳು ಕಚ್ಚಿ ಕೊಂದಿವೆ.

‘ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ವೃದ್ಧೆಯ ಹೆಸರು ಗೊತ್ತಾಗಿಲ್ಲ. ವಯಸ್ಸು ಅಂದಾಜು 60 ವರ್ಷ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಿರ್ಗತಿಕರಾಗಿದ್ದ ವೃದ್ಧೆ, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರಸ್ತೆ ಪಕ್ಕದಲ್ಲಿ ಹಾಗೂ ಪಾಳು ಬಿದ್ದ ಜಾಗಗಳಲ್ಲಿ ಮಲಗುತ್ತಿದ್ದರು ಎಂಬುದು ಗೊತ್ತಾಗಿದೆ. ಅವರ ಸಂಬಂಧಿಕರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದೂ ತಿಳಿಸಿದರು.

ಬೆನ್ನಟ್ಟಿದ್ದ ನಾಯಿಗಳು: ‘ರಾತ್ರಿ 9.30ರ ಸುಮಾರಿಗೆ ವೃದ್ಧೆಯು ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಅದೇ ಸಂದರ್ಭದಲ್ಲೇ ಬೊಗಳುತ್ತಿದ್ದ ಬೀದಿನಾಯಿಗಳ ಗುಂಪು, ವೃದ್ಧೆಯನ್ನು ಬೆನ್ನಟ್ಟಿತ್ತು. ಅದನ್ನು ನೋಡಿದ್ದ ಸ್ಥಳೀಯರು, ನಾಯಿಗಳಿಗೆ
ಹೊಡೆದು ಓಡಿಸಿದ್ದರು. ನಾಯಿಗಳಿಂದ ಪಾರಾದ ವೃದ್ಧೆ, ಅಲ್ಲಿಂದ ಹೊರಟು ಹೋಗಿದ್ದರು’ ಎಂದೂ ಪೊಲೀಸರು ಹೇಳಿದರು.

‘ರಾತ್ರಿ 11.30ರ ಸುಮಾರಿಗೆ ಶಶಿಧರ್ ಲೇಔಟ್‌ನ ದ್ವಾರಕಾನಗರದಲ್ಲಿ ವೃದ್ಧೆ ಮಲಗಿದ್ದರು. ಅದೇ ಸಂದರ್ಭದಲ್ಲೇ ದಾಳಿ ಮಾಡಿ ಕಚ್ಚಿದ್ದ ಎಂಟು ನಾಯಿಗಳು, ವೃದ್ಧೆಯನ್ನು ರಸ್ತೆಯುದ್ದಕ್ಕೂ ಎಳೆದೊಯ್ದಿದ್ದವು. ದೇಹದ ತುಂಬೆಲ್ಲ ಕಚ್ಚಿ ಗಾಯಗೊಳಿಸಿ ಕೊಂದಿದ್ದವು. ರಾತ್ರಿ ಹೊತ್ತು ರಸ್ತೆಯಲ್ಲಿ ಯಾರೂ ಇರಲಿಲ್ಲ’ ಎಂದೂ ತಿಳಿಸಿದರು.

‘ರಸ್ತೆಯಲ್ಲೇ ವೃದ್ಧೆ ಪ್ರಾಣ ಬಿಟ್ಟಿದ್ದರು. ತಡರಾತ್ರಿ ಅದೇ ಮಾರ್ಗವಾಗಿ ಹೊರಟಿದ್ದ ಸ್ಥಳೀಯರೊಬ್ಬರು ವೃದ್ಧೆಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ’ ಎಂದೂ ಹೇಳಿದರು.

ರಕ್ತಸಿಕ್ತವಾಗಿದ್ದ ದೇಹ: ‘ವೃದ್ಧೆಯ ತಲೆ, ಮುಖ, ಕೈ–ಕಾಲುಗಳು, ತೊಡೆ.. ಹೀಗೆ ಹಲವು ಭಾಗಗಳಿಗೆ ನಾಯಿಗಳು ಕಚ್ಚಿವೆ. ಇಡೀ ದೇಹ ರಕ್ತಸಿಕ್ತವಾಗಿತ್ತು. ಮೈ ಮೇಲಿನ ಬಟ್ಟೆಗಳೂ ಹರಿದು ಚಿಂದಿಯಾಗಿದ್ದವು’ ಎಂದೂ ಪೊಲೀಸರು ತಿಳಿಸಿದರು.

‘ಬೀದಿನಾಯಿ ಕಾಟ ಹೆಚ್ಚಳ’
ರಾಜರಾಜೇಶ್ವರಿನಗರ, ತಲಘಟ್ಟಪುರ, ಸುಬ್ರಹ್ಮಣ್ಯ ಪುರ, ಕೆಂಗೇರಿ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು, ವೃದ್ಧರು ರಸ್ತೆಯಲ್ಲಿ ಓಡಾಡದ ಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದ ಬಿಬಿಎಂಪಿ ಮೌನವಾಗಿದ್ದು, ಇದರ ಪರಿಣಾಮವೇ ಇದೀಗ ವೃದ್ಧೆ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯರು ದೂರಿದರು.

‘ರಸ್ತೆಯಲ್ಲಿ ನಾಯಿಗಳು ಗುಂಪು ಗುಂಪಾಗಿ ನಿಲ್ಲುತ್ತಿವೆ. ಯಾರೇ ನಡೆದುಕೊಂಡು ಹೊರಟರೂ ಬೊಗಳಿ ದಾಳಿ ಮಾಡುತ್ತಿವೆ. ವಾಹನಗಳನ್ನು ಬೆನ್ನಟ್ಟಿ ಅಪಘಾತಕ್ಕೂ ಕಾರಣವಾಗುತ್ತಿವೆ. ಇಂಥ ನಾಯಿಗಳ ಸ್ಥಳಾಂತರಕ್ಕೆ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನಾಯಿಗಳಿಂದ ಆಗುವ ಅನಾಹುತಗಳಿಗೆ ಬಿಬಿಎಂಪಿ ಹೊಣೆಯಾಗುತ್ತದೆ’ ಎಂದೂ ಹೇಳಿದರು.

‘ಘಟನೆ ನಡೆದ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದೇವೆ. ಈ ಪ್ರದೇಶದ 10 ನಾಯಿಗಳನ್ನು ಹಿಡಿದು ಪರಿವೀಕ್ಷಣೆಯಲ್ಲಿಟ್ಟಿದ್ದೇವೆ. ಈ ಪ್ರದೇಶದಲ್ಲಿರುವ ಇನ್ನಷ್ಟು ಬೀದಿನಾಯಿಗಳನ್ನು ಹಿಡಿದು ಪರಿವೀಕ್ಷಣೆಯಲ್ಲಿಡುತ್ತೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ಬೀದಿನಾಯಿ ಕಚ್ಚಿ ಮಕ್ಕಳು ಸತ್ತರೆ ಚಿಕಿತ್ಸಾ ವೆಚ್ಚದ ಜೊತೆ ₹ 50 ಸಾವಿರ ಪರಿಹಾರ ಹಾಗೂ ದೊಡ್ಡವರು ಸತ್ತರೆ ಚಿಕಿತ್ಸಾ ವೆಚ್ಚದ ಜೊತೆ ₹ 1ಲಕ್ಷ ಪರಿಹಾರ ನೀಡಲಾಗುತ್ತದೆ. ಆರ್‌.ಆರ್‌.ನಗರದಲ್ಲಿ ಬೀದಿ ನಾಯಿ ಕಚ್ಚಿ ಮೃತಪಟ್ಟ ಮಹಿಳೆಯ ವಾರಸುದಾರರು ಇನ್ನೂ ಪತ್ತೆಯಾಗಿಲ್ಲ’ ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದರು.

ಸಾಕು ನಾಯಿ ಕಚ್ಚಿ ಮೃತಪಟ್ಟಿದ್ದ ಕಾರ್ಮಿಕ: ಯಲಹಂಕ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ‘ಪಿಟ್‌ ಬುಲ್‌’ ತಳಿಯ ಸಾಕು ನಾಯಿ ಕಚ್ಚಿ ಕಾರ್ಮಿಕ ನರಸಿಂಹ (36) ಎಂಬುವರು ಮೃತಪಟ್ಟಿದ್ದರು. ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿತ್ತು.

‘ವಸ್ತ್ರ ವಿನ್ಯಾಸಕರಾದ ಅಟ್ಟೂರು ಲೇಔಟ್‍ ನಿವಾಸಿ ಕೃಷಿ ಎಂಬುವರು ಸಾಕಿದ್ದ ನಾಯಿ, ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾರ್ಮಿಕ ನರಸಿಂಹ ಮೇಲೆ ದಾಳಿ ಮಾಡಿ ಕಚ್ಚಿತ್ತು. ತೀವ್ರ ರಕ್ತಸ್ರಾವದಿಂದ ಕಾರ್ಮಿಕ ಮೃತಪಟ್ಟಿದ್ದರು. ಸಾಕು ನಾಯಿ ಮಾಲೀಕ ಕೃಷಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಾಯಿಯನ್ನು ಪರಿವೀಕ್ಷಣೆಯಲ್ಲಿಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT