ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಮದಲ್ಲೂ ಮಹಿಳೆಯರಿಂದ ಸಾಧನೆ: ರತ್ನಪ್ರಭಾ

Published : 22 ಆಗಸ್ಟ್ 2024, 16:34 IST
Last Updated : 22 ಆಗಸ್ಟ್ 2024, 16:34 IST
ಫಾಲೋ ಮಾಡಿ
Comments

ಬೆಂಗಳೂರು: ಕೂಲಿ ಕಾರ್ಮಿಕಳಾಗಿ ದುಡಿಯುವುದು ಮಾತ್ರವಲ್ಲದೆ ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಮಹಿಳೆ ಯಶಸ್ವಿಯಾಗಿದ್ದಾಳೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಉಬುಂಟು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಕೆ. ರತ್ನಪ್ರಭಾ ಹೇಳಿದರು.

ಉಬುಂಟು ಒಕ್ಕೂಟ, ಮೀಡಿಯಾ ಟುಡೆ ಮತ್ತು ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಕೃಷಿ ಮತ್ತು ಆಹಾರ ಉದ್ಯಮ ಮೇಳ ‘ಅಗ್ರಿಟೆಕ್ ಇಂಡಿಯಾ 2024ʼ ಉದ್ಘಾಟಿಸಿ ಮಾತನಾಡಿದರು.

‘ಆಧುನಿಕ ತಂತ್ರಜ್ಞಾನ ಬಳಕೆಯಿಂದ ಕೃಷಿ ಮತ್ತು ಆಹಾರ ಉದ್ಯಮದ ಕಡೆ ಮಹಿಳೆ ಮುಖ ಮಾಡಿದ್ದಾಳೆ. ಅನೇಕ ಸವಾಲುಗಳನ್ನು ಎದುರಿಸಿ ಮುಂದೆ ಸಾಗುತ್ತಿದ್ದಾಳೆ. ಉಬುಂಟು ಸಂಸ್ಥೆಯು ಮಹಿಳೆಯರಿಗೆ ಅವಕಾಶವನ್ನು ಒದಗಿಸುವ ವೇದಿಕೆ ಸೃಷ್ಟಿಸಿದೆ. ಜಾಗತಿಕ ಮತ್ತು ರಾಷ್ಟ್ರೀಯ ಖರೀದಿದಾರರೊಂದಿಗೆ ಸಭೆ ಆಯೋಜಿಸುವ ಮೂಲಕ ರಾಜ್ಯದ ಮಹಿಳಾ ಉದ್ಯಮಿಗಳಿಗೆ ತಮ್ಮ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಮತ್ತು ನಿಗದಿತ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸುತ್ತದೆ’ ಎಂದು ತಿಳಿಸಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಸಂಸ್ಥೆ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ‘ತಂತ್ರಜ್ಞಾನಗಳ ಬಳಕೆಯಿಂದ ಆಹಾರ ಉತ್ಪನ್ನಗಳು ಕೆಡದಂತೆ ಮಾಡಬಹುದು. ಆಹಾರ ಸಂಸ್ಕರಣಾ ಉದ್ಯಮವು ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸುತ್ತದೆ. ಆಹಾರ ಉದ್ಯಮದಲ್ಲಿ ಪೌಷ್ಟಿಕತೆ, ಆರೋಗ್ಯ ಮತ್ತು ಆರ್ಥಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಮಾತ್ರ ಯಶಸ್ಸು ಸಿಗಲು ಸಾಧ್ಯ’ ಎಂದರು.

ನೆದರ್ಲೆಂಡ್ಸ್‌ನ ಕಾನ್ಸಲ್ ಜನರಲ್ ಎವೂಟ್ ಡಿ. ವಿಟ್, ಕೋಡೆಕ್ಸ್‌ ಮಾಜಿ ಅಧ್ಯಕ್ಷ ಸಂಜಯ್ ದವೆ, ಡಬ್ಲ್ಯುಐಎಬಿ ಸಂಯೋಜಕ ಜಾಫರ್ ಎಸ್. ನಖ್ವಿ ಮಾತನಾಡಿದರು. ಮೂರು ದಿನ ನಡೆಯಲಿರುವ ಮೇಳದಲ್ಲಿ 350ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದಾರೆ. ಟರ್ಕಿ, ಚೀನಾ, ಜರ್ಮನಿ, ಸ್ಪೇನ್, ನೆದರ್ಲೆಂಡ್ಸ್‌, ನೇಪಾಳ, ಶ್ರೀಲಂಕಾ, ಕುವೈತ್, ರಷ್ಯಾ, ತೈವಾನ್, ಫ್ರಾನ್ಸ್, ಇಟಲಿ, ಕೆನಡಾ, ಸಂಯುಕ್ತ ಅರಬ್‌ ಸಂಸ್ಥಾನ, ಇಂಡೋನೆಷ್ಯಾ, ಸಿಂಗಪುರ, ಇರಾನ್, ಆಸ್ಟ್ರೇಲಿಯಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಸ್ತುಪ್ರದರ್ಶನದಲ್ಲಿ ಆಹಾರ ಉತ್ಪನ್ನಗಳು, ಬೇಕರಿ ತಿನಿಸು, ಸಾವಯವ ಉತ್ಪನ್ನಗಳು, ತಾಜಾ ಹಣ್ಣುಗಳು, ಡೇರಿ ಉತ್ಪನ್ನಗಳು, ಚಹಾ, ಕಾಫಿ ಮತ್ತು ಹಣ್ಣಿನ ಪಾನೀಯಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT