ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ

ರಾಜ್ಯ ಮಸಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Published 20 ಡಿಸೆಂಬರ್ 2023, 15:22 IST
Last Updated 20 ಡಿಸೆಂಬರ್ 2023, 15:22 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ರುದ್ರಭೂಮಿಗೆ ಒಬ್ಬ ಕಾವಲುಗಾರ ಹಾಗೂ ನಿರ್ವಾಹಕರನ್ನು ನೇಮಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಮಸಣ ಕಾರ್ಮಿಕರ ಸಂಘದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

‘ಮಸಣ ಕಾರ್ಮಿಕರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ. ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪೈಕಿ 45 ವರ್ಷ ದಾಟಿದವರಿಗೆ ತಿಂಗಳ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ ₹3 ಸಾವಿರ ನೀಡಬೇಕು’ ಎಂದು ಆಗ್ರಹಿಸಿದರು.

‘ಮಸಣ (ಸ್ಮಶಾನ) ಕಾರ್ಮಿಕರ ಗಣತಿ ನಡೆಸಬೇಕು ಹಾಗೂ ಪುನರ್ವಸತಿ ಕಲ್ಪಿಸಬೇಕು. ಪ್ರತಿ ಕುಣಿ(ಗುಂಡಿ) ತೆಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿ ‘ಉದ್ಯೋಗ’ ಎಂದು ಪರಿಗಣಿಸಬೇಕು. ಅಲ್ಲದೇ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ₹3 ಸಾವಿರ ಕೂಲಿ ಪಾವತಿಸಬೇಕು’ ಎಂದು ಪ್ರತಿಭಟನಕಾರರು ಕೋರಿದರು.

ಮಸಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಶುಚಿತ್ವಕ್ಕೆ ಸಾಬೂನು ನೀಡಬೇಕು ಎಂದು ಆಗ್ರಹಿಸಿದರು.

ಭವಿಷ್ಯ ನಿಧಿ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೇ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಭವಿಷ್ಯ ನಿಧಿಯಂತಹ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು.

ಮಸಣ ಕಾರ್ಮಿಕರಿಗೆ ಆದಾಯ ಮೂಲಗಳಿಲ್ಲ. ಕಾರ್ಮಿಕರಿಗೆ ತಲಾ ಐದು ಎಕರೆಯಂತೆ ಜಮೀನು ಮಂಜೂರು ಮಾಡಬೇಕು. ಜತೆಗೆ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸಂಘದ ಸಂಚಾಲಕ ಯು.ಬಸವರಾಜ ಆಗ್ರಹಿಸಿದರು.

ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಸತಿ ಶಾಲೆಗಳಲ್ಲಿ ಮೀಸಲಾತಿ ನೀಡಬೇಕು. ವಿದ್ಯಾಭ್ಯಾಸ ಪೂರ್ಣಗೊಂಡ ಮೇಲೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. 25 ವರ್ಷವಾದ ಬಳಿಕ ಸರ್ಕಾರಿ ಉದ್ಯೋಗ ಸಿಗದಿದ್ದರೆ ತಲಾ ₹10 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಸಂಘದ ಸಹ ಸಂಚಾಲಕರಾದ ಬಿ.ಮಾಳಮ್ಮ, ಕೆ.ಜಿ.ವೀರೇಶ್‌, ಎ.ಸ್ವಾಮಿ, ಎಚ್‌.ರುದ್ರಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT