ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಗೆ ಆದ್ಯತೆ: ಸಚಿವ ದಿನೇಶ್ ಗುಂಡೂರಾವ್

ವಿಶ್ವ ಕ್ಯಾನ್ಸರ್ ದಿನಾಚರಣೆ: ನಗರದ ವಿವಿಧೆಡೆ ರೋಗದ ಬಗ್ಗೆ ಜಾಗೃತಿ
Published 4 ಫೆಬ್ರುವರಿ 2024, 15:48 IST
Last Updated 4 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ರೋಗವನ್ನು ಸುಲಭವಾಗಿ ವಾಸಿ ಮಾಡಬಹುದಾಗಿದೆ. ಆದ್ದರಿಂದ ಕ್ಯಾನ್ಸರ್ ತಪಾಸಣೆಗೆ ಆದ್ಯತೆ ನೀಡಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಆರೋಗ್ಯ ಇಲಾಖೆಯು ಸರ್ಜಿಕಲ್ ಸೊಸೈಟಿ ಆಫ್ ಇಂಡಿಯಾ, ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಶನ್ ಹಾಗೂ ನವೋದಯನ್ಸ್ ಇನ್ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕ್ಯಾನ್‌ವಾಕ್‌’ಗೆ ಚಾಲನೆ ನೀಡಿ, ಮಾತನಾಡಿದರು. ಈ ಜಾಗೃತಿ ನಡಿಗೆಯಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. 

‘ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಗೆ ಗ್ರಾಮೀಣ ಭಾಗದಲ್ಲಿಯೂ ಹೆಚ್ಚಿನ ತಪಾಸಣೆ ನಡೆಸಲಾಗುವುದು. ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ, ಧೂಮಪಾನದಂತಹ ವ್ಯಸನ, ಒತ್ತಡದ ಜೀವನ, ಕಲುಷಿತ ಪರಿಸರ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕ್ಯಾನ್ಸರ್ ತಡೆಗೆ ನಿಯಮಿತ ವ್ಯಾಯಾಮ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಸೇರಿ ಆರೋಗ್ಯಪೂರ್ಣ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಕ್ಯಾನ್ಸರ್ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಹೇಳಿದರು. 

‘ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ (ಶೇ 28 ರಷ್ಟು) ಹಾಗೂ ಪುರಷರಲ್ಲಿ ಶ್ವಾಸಕೋಶ ಕ್ಯಾನ್ಸರ್ (ಶೇ 10 ರಷ್ಟು) ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಜಾಗೃತಿ ಕೊರತೆ: ಸರ್ಜಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ರಾಜಶೇಖರ್ ಸಿ. ಜಾಕ, ‘ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತನಿತ್ಯ ಒಂದು ಗಂಟೆ ವಾಕಿಂಗ್ ಮಾಡಬೇಕು. ಕ್ಯಾನ್ಸರ್ ಪೀಡಿತರಲ್ಲಿ ಹಲವರು ಆತ್ಮವಿಶ್ವಾಸ ಕಳೆದುಕೊಂಡು, ತಮ್ಮ ಜೀವನ ಅಂತ್ಯವಾಯಿತು ಅಂದುಕೊಳ್ಳುತ್ತಾರೆ. ಆದ್ದರಿಂದ ಕ್ಯಾನ್ಸರ್ ಕಾಯಿಲೆ ಬಗ್ಗೆ ಜನರಲ್ಲಿನ ಭಯವನ್ನು ಹೋಗಲಾಡಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಕೂಡ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಕ್ಯಾನ್ಸರ್‌ ಬಗ್ಗೆ ಜನರಿಗೆ ಜಾಗೃತಿ ಇಲ್ಲದ ಕಾರಣ ಕೊನೆ ಹಂತಕ್ಕೆ ತಲುಪುವವರೆಗೂ ಈ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ’ ಎಂದು ಹೇಳಿದರು. 

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಾರಂಭವಾದ ‘ಕ್ಯಾನ್‌ವಾಕ್’ ಜಾಗೃತಿ ನಡಿಗೆ, ಹಡ್ಸನ್ ವೃತ್ತ, ವಿಧಾನಸೌಧ, ಕೇಂದ್ರ ಅಂಚೆ ಕಚೇರಿ, ಇನ್ಫೆಂಟ್ರಿ ರಸ್ತೆ ಮೂಲಕ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು. 5 ಕಿ.ಮೀ. ನಡಿಗೆಯಲ್ಲಿ ಚಲನಚಿತ್ರ ನಟರಾದ ಪ್ರೇಮ್, ಅಭಿಜಿತ್, ನಟಿ ಕಾರುಣ್ಯ ರಾಮ್, ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT