ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕದ ಗುತ್ತಿಗೆದಾರನ ಕೊಲೆ ಪ್ರಕರಣ: ನೇಪಾಳದಲ್ಲಿ ಆರೋಪಿ ಬಂಧನ

Last Updated 6 ಜನವರಿ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರ ಐನಲ್ ಹಕ್ (30) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರಿಯೋನಾಥ್ (29) ಎಂಬುವವರು ನೇಪಾಳದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಪ್ರಿಯೋನಾಥ್, 2022ರ ಡಿ. 18ರಂದು ಐನಲ್ ಹಕ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ತನಿಖೆಗೆ ರಚಿಸಲಾಗಿದ್ದ ವಿಶೇಷ ತಂಡ, ನೇಪಾಳದ ಗಡಿಯಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

‘30ನೇ ಎಸಿಎಂಎಂ ನ್ಯಾಯಾಲಯದ ಎದುರು ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಹೇಳಿದರು.

ಕೂಲಿ ವಿಚಾರಕ್ಕೆ ಕೊಲೆ: ‘ಯಲಹಂಕ ಠಾಣೆ ವ್ಯಾಪ್ತಿಯ ಪ್ರಕೃತಿ ಬಡಾವಣೆಯಲ್ಲಿ ಭೂಮಿ ವೆಂಚರ್ಸ್ ಡೆವಲಪರ್ಸ್ ವತಿಯಿಂದ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಸಿಮೆಂಟ್ ಪ್ಲಾಸ್ಟರಿಂಗ್ ಕೆಲಸದ ಗುತ್ತಿಗೆ ಪಡೆದಿದ್ದ ಐನಕ್‌ ಹಕ್, ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದರು’ ಎಂದು ಡಿಸಿಪಿ ತಿಳಿಸಿದರು.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿ ಪ್ರೀಯೋನಾಥ್, ಗುತ್ತಿಗೆದಾರ ಐನಕ್‌ ಹಕ್‌ ಬಳಿ ಕೆಲಸಕ್ಕೆ ಸೇರಿದ್ದ. ಡಿ. 18ರಂದು ಕೂಲಿ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಕಬ್ಬಿಣದ ರಾಡ್‌ನಿಂದ ಐನಕ್ ತಲೆಗೆ ನಾಲ್ಕು ಬಾರಿ ಹೊಡೆದಿದ್ದ ಆರೋಪಿ, ಸ್ಥಳದಿಂದ ಪರಾರಿಯಾಗಿದ್ದ. ಪ್ರಜ್ಞೆ ತಪ್ಪಿ ಬಿದ್ದಿದ್ದ ಐನಕ್ ಅವರನ್ನು ಕಾರ್ಮಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಡಿ. 19ರಂದು ಅವರು ಮೃತಪಟ್ಟಿದ್ದರು’ ಎಂದು ಹೇಳಿದರು.

ಮೊಬೈಲ್ ಸ್ವಿಚ್‌ ಆಫ್: ‘ಮೊಬೈಲ್ ಸ್ವಿಚ್ ಆಫ್ ಮಾಡಿ ನಗರ ತೊರೆದಿದ್ದ ಆರೋಪಿ, ಪಶ್ಚಿಮ ಬಂಗಾಳದ ತನ್ನೂರಿಗೆ ಹೋಗಿದ್ದ. ಪೊಲೀಸರು ತನ್ನೂರಿಗೆ ಬರಬಹುದೆಂದು ತಿಳಿದು ಹಲವೆಡೆ ಸುತ್ತಾಡುತ್ತಿದ್ದ. ಇತ್ತೀಚೆಗಷ್ಟೇ ಆತ ನೇಪಾಳಕ್ಕೆ ಹೊರಟಿದ್ದ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ವಿಶೇಷ ತಂಡ, ನೇಪಾಳಕ್ಕೆ ಹೋಗಿ ಆರೋಪಿಯನ್ನು ಸೆರೆಹಿಡಿದಿದೆ’ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT