ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾನಾಡಿಗಳು ಹೊರಟವು ಬೇರೆ ನಾಡಿಗೆ

Published : 16 ಏಪ್ರಿಲ್ 2017, 20:13 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಜಲಮೂಲಗಳು ಬತ್ತಿ ಹೋದ ಕಾರಣ ಹಕ್ಕಿಗಳ ಸಂಕುಲಕ್ಕೆ ಕುತ್ತು ಒದಗಿಬಂದಿದೆ. ನೀರಿನ ಕೊರತೆ ಮತ್ತು ಉಷ್ಣಾಂಶ ಹೆಚ್ಚಳದಿಂದ ಬಾನಾಡಿಗಳು ಜೀವ ಕಳೆದುಕೊಳ್ಳುತ್ತಿವೆ.

ಕಬ್ಬನ್‌ ಉದ್ಯಾನದಲ್ಲಿನ ಬಾಲಭವನ ಮುಂದಿರುವ ಕೊಳದಲ್ಲಿ ನೀರಿನ ಪ್ರಮಾಣ ಪ್ರತಿದಿನ ಕುಸಿಯುತ್ತಿದೆ. ಹೀಗಾಗಿ, ಉದ್ಯಾನದಲ್ಲಿ ಗುಬ್ಬಿಗಳು, ಪಾರಿವಾಳಗಳು ಮತ್ತು ಗಿಳಿಗಳ ಸಂಖ್ಯೆ ಕಡಿಮೆಯಾಗಿದೆ.

‘ಉದ್ಯಾನದಲ್ಲಿ ಪಕ್ಷಿಗಳ ಕಲರವ ಹೆಚ್ಚು ಕೇಳುತ್ತಿಲ್ಲ. ಕೆಲವು ದಿನಗಳ ಹಿಂದೆ ಪಾರಿವಾಳ ಮತ್ತು ಗಿಳಿ ಸತ್ತು ಬಿದ್ದಿರುವುದನ್ನು ಉದ್ಯಾನದಲ್ಲಿ ಕಂಡೆ’ ಎಂದು ಕಬ್ಬನ್‌ ಉದ್ಯಾನಕ್ಕೆ ನಿಯಮಿತವಾಗಿ ಭೇಟಿ ನೀಡುವ ವಿ.ಎನ್‌.ಪವಿತ್ರ ತಿಳಿಸಿದರು.

ಕಬ್ಬನ್‌ ಉದ್ಯಾನ ನಡಿಗೆದಾರರ ಒಕ್ಕೂಟದ ಅಧ್ಯಕ್ಷ ಎಸ್‌.ಉಮೇಶ್‌, ‘ಒಂದು ತಿಂಗಳ ಹಿಂದೆ ಉದ್ಯಾನದಲ್ಲಿ ಅಂದಾಜು ಸಾವಿರ ಸಂಖ್ಯೆಯಲ್ಲಿ ಗಿಳಿಗಳು ಕಾಣಸಿಗುತ್ತಿದ್ದವು. ಅವುಗಳ ಸಂಖ್ಯೆ ಈಗ ಸುಮಾರು 500ಕ್ಕೆ ಕುಸಿದಿದೆ.  ವಲಸೆ ಹಕ್ಕಿಗಳು ಸಹ ಬೇಗ ಹೊರಟುಹೋಗಿವೆ’ ಎಂದು ಹೇಳಿದರು.

‘ಅತಿಯಾದ ಬಿಸಿಲು ಮತ್ತು ನಿರ್ಜಲೀಕರಣದಿಂದ  ಜಯನಗರದಲ್ಲಿ ಇತ್ತೀಚೆಗೆ ಹದ್ದಿನ ಮರಿಗಳು ಸತ್ತವು’ ಎಂದು ವೃಕ್ಷ ಪ್ರತಿಷ್ಠಾನದ ಅಧ್ಯಕ್ಷ ವಿಜಯ್‌ ನಿಶಾಂತ್‌ ತಿಳಿಸಿದರು.

‘ಕನಕಪುರ ರಸ್ತೆಯ 10 ಕೆರೆಗಳಲ್ಲಿ ನೀರಿದ್ದಾಗ ಸುಮಾರು 20 ಪ್ರಭೇದದ ಪಕ್ಷಿಗಳು ಕಾಣಸಿಗುತ್ತಿದ್ದವು. ನೀರು ಬತ್ತಿಹೋಗಿ ಆ ಕೆರೆಗಳು ಮೈದಾನಗಳಾಗಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಧಗೆ ಹೆಚ್ಚಿದೆ’ ಎಂದರು ಅವರು.

ಯಲಹಂಕ ಪರಿಸರ ಸಂಘದ ಕಾರ್ಯದರ್ಶಿ ಜಗದೀಶ್‌ ಗಿರಿ,‘ನಗರದ ರಾಮಗೊಂಡನಹಳ್ಳಿ ಕೆರೆ, ಅರಕೆರೆ ಮತ್ತು ವಿದ್ಯಾರಣ್ಯಪುರ ಕೆರೆಗೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಿದೆ. ಪುಟ್ಟೇನಹಳ್ಳಿ ಕೆರೆಗೆ ತ್ಯಾಜ್ಯನೀರು ಬಂದು ಸೇರುತ್ತಿದೆ. ಇದರಿಂದಾಗಿ, ಅಲ್ಲಿಗೆ ಪೆಲಿಕಾನ್‌ ಹಕ್ಕಿಗಳು ಬರುವುದನ್ನೆ ನಿಲ್ಲಿಸಿವೆ’ ಎಂದು ಹೇಳಿದರು.

ವಲಸೆ ಹಕ್ಕಿಗಳ ಸಂಖ್ಯೆ ಇಳಿಕೆ: ‘ಕಳೆದ 30 ವರ್ಷಗಳಲ್ಲಿ ನಗರದಲ್ಲಿ ವಲಸೆ ಹಕ್ಕಿಗಳು ಬರುವ ಪ್ರಮಾಣ ಶೇ 20 ರಷ್ಟು ಹಾಗೂ ಸ್ಥಳೀಯ ಹಕ್ಕಿಗಳ ಪ್ರಮಾಣದಲ್ಲಿ ಶೇ 98 ರಷ್ಟು ಇಳಿಕೆ ಕಂಡುಬಂದಿದೆ. ನಗರೀಕರಣ, ಉದ್ಯಾನಗಳ ಅಸಮರ್ಪಕ ನಿರ್ವಹಣೆ, ಹಸಿರು ಪರಿಸರ ಮತ್ತು ನೀರಿನ ಮೂಲಗಳ ನಶಿಸುವಿಕೆಯಿಂದಾಗಿ ಹಕ್ಕಿಗಳ ಸಂಕುಲ ಕಡಿಮೆ ಆಗುತ್ತಿದೆ’ ಎಂದು ಪಕ್ಷಿ ತಜ್ಞ ಎಂ.ಬಿ.ಕೃಷ್ಣ ಕಳವಳ ವ್ಯಕ್ತಪಡಿಸಿದರು.

***

ನೀರುಣಿಸಲು ಕುಡಿಕೆ

ಹಕ್ಕಿಗಳ ದಾಹ ನೀಗಿಸಲು ನಗರದಲ್ಲಿನ ಪಕ್ಷಿಪ್ರಿಯರು  ಮನೆಯ ಮುಂಭಾಗದಲ್ಲಿ, ಮಾಳಿಗೆಯ ಮೇಲೆ ಹಾಗೂ ರಸ್ತೆ ಬದಿಗಳಲ್ಲಿ ಮಣ್ಣಿನ ಕುಡಿಕೆ ಇಡುತ್ತಿದ್ದಾರೆ.  ‘ಸದುದ್ದೇಶಕ್ಕಾಗಿ ಸ್ವಯಂ ಸೇವಾ ಸಂಸ್ಥೆ’ ನೀರನ್ನು ಇಡುವ ಕುಡಿಕೆಗಳನ್ನು ಕಡಿಮೆ ದರದಲ್ಲಿ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT