ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಅವಧಿಯಲ್ಲಿ 125 ಎಂಜಿಯೊಪ್ಲಾಸ್ಟಿ

ಜನರ ಜೀವ ಉಳಿಸಿದ ಗುರುನಾನಕ್ ಆಸ್ಪತ್ರೆ
Last Updated 4 ಜೂನ್ 2020, 13:24 IST
ಅಕ್ಷರ ಗಾತ್ರ

ಬೀದರ್‌: ‘ನಗರದ ಗುರುನಾನಕ್ ಆಸ್ಪತ್ರೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ 125 ಎಂಜಿಯೊಪ್ಲಾಸ್ಟಿ ಮಾಡಲಾಗಿದೆ ಹಾಗೂ 124 ಹೃದ್ರೋಗಿಗಳಿಗೆ ಸ್ಟಂಟ್ ಅಳವಡಿಸಲಾಗಿದೆ ಎಂದು ಹೃದ್ರೋಗತಜ್ಞ ಡಾ. ಸಂಜೀವರೆಡ್ಡಿ ತಿಳಿಸಿದರು.

‘ಚಿಕಿತ್ಸೆಗೆ ಒಳಗಾದವರಲ್ಲಿ ಹೆಚ್ಚಿನವರು ಬಿಪಿಎಲ್ ಪಡಿತರ ಚೀಟಿ ಹೊಂದಿದವರು. ಎಲ್ಲ ಪ್ರಕರಣಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸ್ಟಂಟ್ ಅಳವಡಿಸಲಾಗಿದೆ’ ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

‘ಮಹಾನಗರಗಳಲ್ಲಿ ಇರುವಷ್ಟೇ ಸುಸಜ್ಜಿತ ಮತ್ತು ಸರ್ವರೀತಿಯ ಸೌಲಭ್ಯಗಳನ್ನು ಗುರುನಾನಕ್ ಆಸ್ಪತ್ರೆಯ ಹೃದ್ರೋಗ ವಿಭಾಗ ಹೊಂದಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹೊರ ರಾಜ್ಯದ ನಗರಗಳಿಗೆ ಹೋಗುವ ಕಷ್ಟ ತಪ್ಪಿದೆ. ಸ್ಟಂಟ್ ಅಳವಡಿಸಲಾಗದಂತಹ ಗಂಭೀರ ಮತ್ತು ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ ಮಾತ್ರ ಹೊರರಾಜ್ಯಕ್ಕೆ ಕಳಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಗುರು ನಾನಕ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ನ್ಯೂರೊ ಸರ್ಜರಿ ಚಿಕಿತ್ಸಾ ಘಟಕ ಆರಂಭಿಸುವ ಚಿಂತನೆ ನಡೆಯುತ್ತಿದೆ. ಡಯಾಲಿಸಿಸ್‍ಗಾಗಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಕೋವಿಡ್ ಲಾಕ್‍ಡೌನ್‍ನಿಂದಾಗಿ ಈ ಕಾರ್ಯದಲ್ಲಿ ವಿಳಂಬವಾಗುತ್ತಿದೆ’ ಎಂದು ತಿಳಿಸಿದರು.

‘ಹೃದ್ರೋಗ, ಅಪಘಾತ ಮುಂತಾದವುಗಳಿಂದಾಗಿ ರಾಜ್ಯದಲ್ಲಿ ದಿನಕ್ಕೆ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವಕ್ಕೆ ಹೋಲಿಸಿದ್ದಲ್ಲಿ ಕೊವೀಡ್-19ರ ಮರಣ ದರ ತುಂಬಾ ಕಡಿಮೆ ಇದೆ. ಆದರೂ, ಪ್ರತಿ ದಿನ ಆ ಕುರಿತು ಚರ್ಚೆ ನಡೆಯುತ್ತಿರುವುದರಿಂದ ಭೀತಿ ಹೆಚ್ಚಿರಬಹುದು’ ಹೇಳಿದರು.

‘ಕೋವಿಡ್ 19 ಸೋಂಕಿನ ಭಯದಿಂದಾಗಿ ಜನರ ಜೀವನಶೈಲಿಯೂ ಬದಲಾಗಿದೆ. ಸ್ವಚ್ಛತೆ ಕಾಪಾಡಲಾಗುತ್ತಿದೆ. ಜನ ಮಾಸ್ಕ್ ಧರಿಸುತ್ತಿದ್ದಾರೆ. ವೈಯುಕ್ತಿಕ ಸ್ವಚ್ಛತೆಯತ್ತ ಗಮನ ಹರಿಸುತ್ತಿದ್ದಾರೆ. ಹೃದ್ರೋಗದ ಕುರಿತೂ ಜಾಗೃತಿ ಮೂಡಿಸಿದ್ದಲ್ಲಿ ಜನರ ಜೀವನಶೈಲಿ ಬದಲಾಗಬಹುದು’ ಎಂದು ಅವರು ಹೇಳಿದರು.

‘ಕೋವಿಡ್-19 ಲಾಕ್‍ಡೌನ್ ಸಮಯದಲ್ಲೂ ಹೃದ್ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ನಗರದ ಗುರುನಾನಕ್ ಆಸ್ಪತ್ರೆ ಗಮನ ಸೆಳೆದಿದೆ. ಕೋವಿಡ್-19 ರ ಭೀತಿಯಿಂದಾಗಿ ಹೆಚ್ಚಿನ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಸಿಕ್ಕಿರಲಿಲ್ಲ. ತುರ್ತು ಸಂದರ್ಭಗಳಲ್ಲಷ್ಟೇ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗುರುನಾನಕ್ ಆಸ್ಪತ್ರೆ ಮಾತ್ರ ಈ ವಿಷಯದಲ್ಲಿ ಅತೀಹೆಚ್ಚು ಕಾಳಜಿಯಿಂದ ನಡೆದುಕೊಳ್ಳುವ ಮೂಲಕ ಹೃದ್ರೋಗಿಗಳ ಪ್ರಾಣ ರಕ್ಷಿಸಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ನಿಶಾ ಕೌರ್, ಐಸಿಯು ಪ್ರಭಾರಿ ಡಾ.ನೀಲೇಶ ದೇಶಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT