ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್‌ನಲ್ಲಿ ಸಿಲುಕಿದ 200 ಕನ್ನಡಿಗರು

ಊರಿಗೆ ಕರೆಸುವ ವ್ಯವಸ್ಥೆ ಮಾಡಲು ಸಂಸದ, ಸಚಿವರಿಗೆ ಮನವಿ
Last Updated 31 ಜುಲೈ 2020, 15:20 IST
ಅಕ್ಷರ ಗಾತ್ರ

ಬೀದರ್‌: ಬೀದರ್‌, ಕಲಬುರ್ಗಿ ಹಾಗೂ ನೆರೆಯ ತೆಲಂಗಾಣದ 200 ಕಾರ್ಮಿಕರು ಕುವೈತ್‌ನಲ್ಲಿ ಸಿಲುಕಿದ್ದು, ಲಾಕ್‌ಡೌನ್‌ ಪರಿಣಾಮ ಊರಿಗೆ ಮರಳಲಾಗದೇ ಸಂಕಷ್ಟಕ್ಕೆ ಸಿಲುಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೈತುಂಬ ಹಣ ಸಿಗಲಿದೆ ಎನ್ನುವ ಕಾರಣಕ್ಕೆ ಆರು ತಿಂಗಳ ಹಿಂದೆ ಕುವೈತ್‌ಗೆ ತೆರಳಿದ್ದ ಕಾರ್ಮಿಕರಿಗೆ ದಿಕ್ಕುತೋಚದಂತಾಗಿದೆ.

ಹೈದರಾಬಾದ್‌ನ ಮೆಘಾ ಎಂಜಿನಿಯರಿಂಗ್‌ ಕಂಪನಿಯ ಮೂಲಕ ಕುವೈತ್‌ಗೆ ತೆರೆಳಿದ್ದ ಕಾರ್ಮಿಕರಿಗೆ ಆರಂಭದಲ್ಲಿ ಎರಡು ತಿಂಗಳ ಸಂಬಳ ಕೊಡಲಾಗಿದೆ. ಲಾಕ್‌ಡೌನ್‌ ನಂತರ ಕೆಲಸ ಕಳೆದುಕೊಂಡು ನಾಲ್ಕು ತಿಂಗಳಾಗಿವೆ. ಎರಡು ತಿಂಗಳು ದುಡಿದ ಹಣವೂ ಮುಗಿದಿದೆ. ಊರಿಗೆ ಮರಳ ಬೇಕೆಂದರೆ ವಿಮಾನ ಸಂಚಾರವನ್ನೂ ರದ್ದುಪಡಿಸಲಾಗಿದೆ. ಇದು ಅವರ ಸಮಸ್ಯೆಯನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ.

‘ಊರಿಗೆ ಕರೆ ತರಲು ದಯವಿಟ್ಟು ನಮ್ಮ ನೆರವಿಗೆ ಬನ್ನಿ ಎಂದು ಬೀದರ್‌ ಸಂಸದ ಭಗವಂತ ಖೂಬಾ, ಗುಲಬರ್ಗಾ ಸಂಸದ ಉಮೇಶ ಜಾಧವ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶಾಸಕರಾದ ಈಶ್ವರ ಖಂಡ್ರೆ ಹಾಗೂ ರಾಜಶೇಖರ ಪಾಟೀಲ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೊ ವಾಟ್ಸ್‌ ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ.

’ನಮ್ಮ ಪಾಸ್‌ಪೋರ್ಟ್‌ ಸೇರಿದಂತೆ ಕೆಲವು ದಾಖಲೆಗಳನ್ನು ಏಜೆನ್ಸಿಗಳು ಇಟ್ಟುಕೊಂಡು ನಮ್ಮನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಆಗಾಗ ಬೇರೆ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಇದೀಗ ಹೊಟ್ಟೆ ತುಂಬ ಊಟ ಸಹ ಸಿಗುತ್ತಿಲ್ಲ. ಹೈದರಾಬಾದ್‌ನ ಮೆಘಾ ಇನ್ಫಾಸ್ಟ್ರಕ್ಚರ್ ಕಾರ್ಮಿಕರನ್ನು ಕುವೈತ್‌ನಲ್ಲಿ ತಂದು ಬಿಟ್ಟಿದೆ. ನಂತರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

‘ಮೇಘಾ ಕಂಪನಿ ಕುವೈತ್‌ನಲ್ಲಿರುವ ಕಚೇರಿಯನ್ನು ಬಂದ್‌ ಮಾಡಿದೆ. ಇಲ್ಲಿ ಸಮಯಕ್ಕೆ ಸರಿಯಾಗಿ ಊಟ ಕೂಡ ದೊರೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕುವೈತ್‌ನಲ್ಲಿರುವ ಕರ್ನಾಟಕದ ಕಾರ್ಮಿಕರ ನೆರವಿಗೆ ಬರಬೇಕು’ ಎಂದು ಬೀದರ್‌ ಜಿಲ್ಲೆಯ ಜಗನ್ನಾಥ ಹಾಗೂ ಅರವಿಂದ್‌ ಮನವಿ ಮಾಡಿದ್ದಾರೆ.

‘ಬೀದರ್‌ ಜಿಲ್ಲೆಯ ಮೂವರು ಏಜೆಂಟರ ಮೂಲಕ 200 ಕಾರ್ಮಿಕರು ಹೈದರಾಬಾದ್‌ ಮಾರ್ಗವಾಗಿ ಕುವೈತ್‌ಗೆ ತೆರಳಿದ್ದಾರೆ. ಲಾಕ್‌ಡೌನ್‌ ಕಾರಣ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ನವೆಂಬರ್‌ ವೇಳೆಗೆ ವಿಮಾನಯಾನ ಶುರುವಾಗುತ್ತಲೇ ಅವರನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳಲಾಗುವುದೆಂದು ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಹುಮನಾಬಾದ್‌ ತಾಲ್ಲೂಕಿನ ಹುಡಗಿಯ ಏಜೆಂಟ್‌ ಜಾನ್ಸ್‌ನ್‌ ತಿಳಿಸಿದ್ದಾರೆ.

ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ಹಾಗೂ ಚಿಂಚೋಳಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT